ಬೇಸ್ತು ಬೀಳಿಸುವುದು, ಕಾಗೆ ಹಾರಿಸುವುದು ಅಥವಾ ಕುರಿ ಮಾಡುವುದು ನಮ್ಮಲ್ಲಿ ಸದಾ ಚಾಲ್ತಿಯಲ್ಲಿರುವ ಹುಡುಗಾಟಿಕೆಯ ಕ್ಷಣಗಳು. ಮತ್ತೊಬ್ಬರನ್ನು ತಮಾಷೆಯ ಪ್ರಸಂಗದಲ್ಲಿ ಸಿಕ್ಕಿಸಿ ತಬ್ಬಿಬ್ಬಾಗುವಂತೆ ಮಾಡಿ ಮನರಂಜನೆ ಪಡೆಯುವುದು ಇದರ ಉದ್ದೇಶ. ಇದು ಲಘುವಾಗಿ ಇದ್ದಲ್ಲಿ, ಯಾರಿಗೂ ಇದರಿಂದ ಬೇಸರ ಉಂಟಾಗುವಂಥದ್ದಾಗಿಲ್ಲದಿದ್ದಲ್ಲಿ ಅಥವಾ ತಮಾಷೆಗಷ್ಟೇ ಸೀಮಿತವಾಗಿದ್ದಲ್ಲಿ ತೊಂದರೆಯಿಲ್ಲ. ಆದರೆ, ಇಂಥ ಕೆಲವು ತಮಾಷೆಗಳು ಕೆಲವೊಮ್ಮೆ ತಮಾಷೆಯ ಗಡಿ ದಾಟಿ ಬೇರೆಯವರಿಗೆ ತೊಂದರೆ ಉಂಟುಮಾಡುವಂಥ ಸಂದರ್ಭದಲ್ಲೂ ಸಿಕ್ಕಿಸಿ ಹಾಕಿ ಬಿಡುತ್ತದೆ. ಯುಎಸ್‌ನ ಶಾಲೆಯೊಂದರಲ್ಲಿ ಇಂಥದ್ದೇ ಒಂದು ಘಟನೆ ನಡೆದು ಇದೀಗ ಆರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಟೆಕ್ಸಾಸ್‌ನ ಹೈಸ್ಕೂಲೊಂದರಲ್ಲಿ ವಿದ್ಯಾರ್ಥಿಯೊಬ್ಬ ಬೇರೆ ಮಕ್ಕಳನ್ನು ಬೇಸ್ತು ಬೀಳಿಸಲು ಹೋಗಿ ಆರು ಮಂದಿ ಆಸ್ಪತ್ರೆ ಸೇರಿದ್ದಾರೆ. ಈ ವಿದ್ಯಾರ್ಥಿ ಬೇರೆಯವರನ್ನು ಕುರಿ ಮಾಡಲು, ಶಾಲೆಗೆ ʻಫಾರ್ಟ್ ಸ್ಪ್ರೇʼ (ಅಪಾನವಾಯು ಸ್ಪ್ರೇ) ಎಂಬ ಸ್ಪ್ರೇಯನ್ನು ಶಾಲೆಗೆ ತಂದು ಸ್ಪ್ರೇ ಮಾಡಿದ್ದಾನೆ. ಇದರ ಪರಿಣಾಮವಾಗಿ ಶಾಲೆಯಲ್ಲಿ ಕೆಟ್ಟ ವಾಸನೆ ಪಸರಿಸಿ, ಈ ವಾಸನೆಯ ಮೂಲ ಯಾವುದು ಎಂದು ಕಂಡು ಹಿಡಿಯಲು ಶಾಲೆಯ ಆಡಳಿತ ಮಂಡಳಿ ಅಗ್ನಿಶಾಮಕ ತುರ್ತು ಸೇವೆಯನ್ನೂ ಕರೆಸಿಕೊಂಡು ತಪಾಸಣೆ ನಡೆಸಿದೆ. ಕೊನೆಗೂ ಈ ವಿದ್ಯಾರ್ಥಿ ತಾನು ಫಾರ್ಟ್ ಸ್ಪ್ರೇ ಮಾಡುವ ಮೂಲಕ ಬೇಸ್ತು ಬೀಳಿಸಲು ಪ್ರಯತ್ನಪಟ್ಟಿದ್ದೆ ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಸಮಸ್ಯೆಗೆ ಮಂಗಳ ಹಾಡಲಾಗಿದೆ. ಆದರೆ, ಇಷ್ಟು ನಡೆಯುವಷ್ಟರಲ್ಲಿ, ಇದರ ಕೆಟ್ಟ ವಾಸನೆಗೆ ತಲೆಸುತ್ತಿ ಆರು ಮಕ್ಕಳು ವಿಪರೀತ ತಲೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: Viral Story: ಪುಸ್ತಕ ಖರೀದಿಗೆ ಬಂದ ಪುಟ್ಟ ಹುಡುಗನ ಬಳಿ ದುಡ್ಡಿಲ್ಲ, ಭಾರೀ ಡಿಸ್ಕೌಂಟ್ ಕೊಟ್ಟ ಪುಸ್ತಕದಂಗಡಿ!
ನ್ಯೂಯಾರ್ಕ್ ಪೋಸ್ಟ್‌ನ ಪ್ರಕಾರ, ಕೆಟ್ಟ ವಾಸನೆ ಬಂದಾಕ್ಷಣ ವಿದ್ಯಾರ್ಥಿಗಳನ್ನೆಲ್ಲ ಹೊರಗೆ ಕಳಿಸಲಾಗಿತ್ತು. ಅಗ್ನಿಶಾಮಕ ದಳದವರನ್ನು ಕರೆಸಲಾಗಿ, ವಾಸನೆಯ ಮೂಲಕ ಪತ್ತೆ ಮಾಡಲು ಪ್ರಯತ್ನಿಸಲಾಗಿತ್ತು. ಆದರೆ, ವಾಸನೆಯ ಮೂಲ ಕಂಡುಹಿಡಿಯಲಾಗಿರಲಿಲ್ಲ. ಹಾಗಾಗಿ ವಾಸನೆ ಇದ್ದಾಗ್ಯೂ ಮಕ್ಕಳಿಗೆ ಪಾಠ ಪ್ರವಚನ ಮುಂದುವರಿಸಲಾಗಿತ್ತು. ಹೀಗಾಗಿ ಈ ಕೆಟ್ಟ ವಾಸನೆಯಿಂದ ವಿಪರೀತ ತಲೆನೋವಿನಂತ ಸಮಸ್ಯೆಗೆ ತುತ್ತಾಗಿ ಆರು ಮಕ್ಕಳು ಆಸ್ಪತ್ರೆಗೂ ದಾಖಲಾದರು. ಕೊನೆಗೂ ಈ ವಾಸನೆಯ ಮೂಲ ಕಂಡು ಹಿಡಿಯಲು ಸಾಕಷ್ಟು ಪರಿಶೀಲನೆ ನಡೆಸಿದ ಬಳಿಕ ವಿದ್ಯಾರ್ಥಿಯೊಬ್ಬ ತಾನು ಫಾರ್ಟ್ ಸ್ಪ್ರೇ ಎಂಬ ಕೆಟ್ಟ ವಾಸನೆ ಬರಿಸುವ ಸ್ಪ್ರೇಯನ್ನು ಸಿಂಪಡಿಸಿ ಗೆಳೆಯರನ್ನು ಬೇಸ್ತು ಬೀಳಿಸಲು ಪ್ರಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆರು ಮಂದಿ ಆಸ್ಪತ್ರೆ ಸೇರಿದ ನಂತರವೂ ಮತ್ತೆ ಎಂಟು ಮಂದಿ ಮತ್ತೆ ಆರೋಗ್ಯ ಸಮಸ್ಯೆಗಳಾಗಿವೆ. ಇದರಿಂದಾಗಿ ಕೊನೆಗೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಕ್ಕಳಿಗೆ ರಜೆ ನೀಡಲಾಯಿತು ಎನ್ನಲಾಗಿದೆ.
ವಿದ್ಯಾರ್ಥಿ ಶಾಲೆಗೆ ತಂದಿದ್ದ ಫಾರ್ಟ್ ಸ್ಪ್ರೇ ಹೀಗೆ ಬೇಸ್ತು ಬೀಳಿಸಲು ಇರುವ ಆಟಿಕೆಯಾಗಿದ್ದು, ಇದು ನಿಜವಾದ ವಾಂತಿ ಹಾಗೂ ಮಲದ ವಾಸನೆಯನ್ನು ಪಸರಿಸುತ್ತದೆ ಎನ್ನಲಾಗಿದೆ. ಈ ಬೇಸ್ತು ಬೀಳಿಸುವ ಆಟದಲ್ಲಿ ಈತನೊಬ್ಬನೇ ಅಲ್ಲದೆ, ಹಲವು ಮಕ್ಕಳ ಗುಂಪೇ ಇದೆ ಎಂಬ ಗುಮಾನಿಯೂ ಶಾಲಾ ಆಡಳಿತ ಮಂಡಳಿಗೆ ಬಂದಿದ್ದು ಈ ಬಗ್ಗೆ ವಿಚಾರಣೆ ಮುಂದುವರಿಸಿದೆ.
ಇದನ್ನೂ ಓದಿ: Viral post: ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕೆಂದರೆ ಪಿಯುಸಿಯಲ್ಲಿ 90% ಮಾರ್ಕ್ಸ್ ಬಂದಿರಬೇಕು!