Site icon Vistara News

Viral Story: ರೈತರ ಉಪಾಯ: ಕೋತಿಗಳಿಂದ ತಮ್ಮ ಗದ್ದೆಯನ್ನು ರಕ್ಷಿಸಲು ಕರಡಿ ವೇಷ!

farmers-in-bear-costume

ಗದ್ದೆ, ತೋಟವನ್ನೆಲ್ಲ ಒಮ್ಮೆ ನೋಡಿ, ಆಹಾ ನಾವೇ ತರಕಾರಿ, ಧಾನ್ಯ ಬೆಳೆಯುವುದು ಎಂದರೆ ಎಷ್ಟು ಸುಖ ಎಂದು ಹಲವಾರು ಬಾರಿ ಅಂದುಕೊಳ್ಳುತ್ತೇವೆ ನಿಜ. ಆದರೆ ರೈತರ ಕಷ್ಟ ಸುಖಗಳು ಅರಿವಿಗೆ ಬರುವುದು ನಾವು ಆ ಜಾಗದಲ್ಲಿ ನಿಂತಾಗಲೇ. ಕಷ್ಟಪಟ್ಟು ಪಾತಿ ಮಾಡಿ ಗಿಡ ನಿಟ್ಟು ಇನ್ನೇನು ಬೆಳೆ ಕೈಗೆ ಬಂತು ಅನ್ನುವಾಗ ಹಕ್ಕಿಗಳೋ, ಪ್ರಾಣಿಗಳ ದಾಳಿಗೋ ಬೆಳೆ ಕೈಗೆ ದಕ್ಕದೆ ಹೋದಾಗ ಆಗುವ ನೋವು ಅನುಭವಿಸಿದವರಿಗಷ್ಟೇ ಗೊತ್ತು. ಅದಕ್ಕಾಗಿ, ಬೆಳೆ ಬೆಳೆಯುವ ಮಂದಿ ಪ್ರಾಣಿಪಕ್ಷಿಗಳಿಂದ ಬೆಳೆಯನ್ನು ರಕ್ಷಿಸಲು ನೂರಾರು ಉಪಾಯಗಳನ್ನು ಮಾಡುವುದು ಸಹಜ. ತಲೆತಲಾಂತರಗಳಿಂದ ಹಿರಿಯರು ತಮ್ಮ ಗದ್ದೆಗಳಲ್ಲೊಂದು ಮನುಷ್ಯನ ಪ್ರತಿಕೃತಿಯನ್ನು ಅಥವಾ ಬೆದರುಬೊಂಬೆಗಳನ್ನು ಇಟ್ಟುಕೊಳ್ಳುವುದು ರೂಢಿ. ಅದನ್ನು ನೋಡಿ, ಯಾರೋ ಇದ್ದಾರೆ ಎಂಬ ಭ್ರಾಂತಿಯಿಂದ ಅವುಗಳು ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆಯಿದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಮನುಷ್ಯರಂತೆ ಪ್ರಾಣಿಪಕ್ಷಿಗಳೂ ತಮ್ಮ ಬುದ್ಧಿಮತ್ತೆ ಪ್ರಯೋಗ ಮಾಡಿ, ಯಾವ ಬೆದರುಬೊಂಬೆಗಳಿಗೂ ಜಗ್ಗದೆ ಇರುವ ಅನುಭವಗಳೂ ರೈತರಿಗಾಗುತ್ತದೆ. ಹಾಗಾಗಿ ರೈತರೂ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇಂತಹ ಪ್ರಯೋಗಗಳ ಪೈಕಿ ಈಗ ಸುದ್ದಿಗೆ ಗ್ರಾಸವಾಗಿರುವುದು (viral story) ಮನುಷ್ಯರೇ ಕರಡಿಗಳ ವೇಷ ಹಾಕಿ (bear costume) ಗದ್ದೆಯಲ್ಲಿ ಕೂರುವುದು!

ಹೌದು. ಕೋತಿಗಳ ವಿಪರೀತ ಹಾವಳಿಯಿಂದ ಕಂಗೆಟ್ಟಿರುವ ಉತ್ತರಪ್ರದೇಶದ ಲಕೀಂಪುರ ಖೇಡಿಯ ಜಹಾನ್‌ ನಗರ ಹಳ್ಳಿಯ ರೈತರೀಗ ಕರಡಿ ವೇಷ ಹಾಕಿ ತಮ್ಮ ಗದ್ದೆಗಳಲ್ಲಿ ಕೂರಲು ಆರಂಭಿಸಿದ್ದಾರೆ. ಯಾವ ಬೆದರು ಬೊಂಬೆಗೂ ಜಗ್ಗದಿರುವ ಕೋತಿಗಳಿಂದ ತಮ್ಮ ಕಬ್ಬಿನ ಗದ್ದೆಗಳನ್ನು ಬಚಾವು ಮಾಡಿಕೊಳ್ಳಲು ರೈತರು ಕಂಡುಕೊಂಡಿರುವ ಉಪಾಯವಿದು.

೪೦ರಿಂದ ೪೫ ಕೋತಿಗಳು ಕಬ್ಬಿನ ಗದ್ದೆಗಳಿಗೆ ನುಗ್ಗಿ ದಾಂದಲೆ ಮಾಡುವ ಕಾರಣದಿಂದ ಹಾಗೂ ಅವುಗಳನ್ನು ಓಡಿಸಲು ಎಲ್ಲ ಪ್ರಯತ್ನವನ್ನೂ ಮಾಡಿರುವ ಈ ಹಳ್ಳಿಯ ನಿವಾಸಿಗಳು ಸೋತು ಕೊನೆಗೆ ಈ ಉಪಾಯವನ್ನು ಮಾಡಿದ್ದಾರೆ. ಹಲವು ರೈತರು ತಮ್ಮ ಬೆಳೆಯನ್ನು ಕೋತಿಗಳಿಂದ ರಕ್ಷಿಸಲು ಬೇರೆ ದಾರಿಯೇ ಇಲ್ಲದೆ ಕರಡಿಯ ವೇಷಭೂಷಣಕ್ಕಾಗಿ ಸುಮಾರು 4000 ರೂಪಾಯಿಗಳನ್ನೂ ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಸಹಾಯ ಲಭ್ಯವಾಗದ ಕಾರಣ ತಮ್ಮತಮ್ಮಲ್ಲೇ ಈ ಉಪಾಯವನ್ನು ಮಾಡಿ ಅದರಂತೆ ನಡೆದುಕೊಂಡು ಕೊಂಚ ಪ್ರಯೋಜನ ಕಂಡುಕೊಂಡಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕರಡಿ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರೈತರ ಈ ನಡೆಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಹಲವರು, ಈಗಿನ ಇಂಥಹ 40 ಡಿಗ್ರಿ ಬಿಸಿಲಲ್ಲಿ ಗದ್ದೆಯಲ್ಲಿ ಕರಡಿಯ ಕಪ್ಪು ದಿರಿಸನ್ನು ಹಾಕಿಕೊಂಡು ಕೂರುವ ಕಷ್ಟ ಮಾತ್ರ ದೇವರಿಗೇ ಪ್ರೀತಿ ಎಂದಿದ್ದಾರೆ. ಹಲವರು ರೈತರ ಉಪಾಯವನ್ನು ಶ್ಲಾಘಿಸುವ ಜೊತೆಗೆ ತಮ್ಮ ಕಳಕಳಿಯನ್ನೂ ವ್ಯಕ್ತಪಡಿಡಿದ್ದಾರೆ.

ಇದನ್ನೂ ಓದಿ: Viral News: 15 ವರ್ಷ ಹಿಂದೆಯೇ ತಮ್ಮ ಸಮಾಧಿ ತಾವೇ ತೋಡಿದ ವ್ಯಕ್ತಿ ನಿಧನ!

Exit mobile version