ಮಕ್ಕಳ ಜೀವನದಲ್ಲಿ ಬಹಳ ನೆನಪಿಟ್ಟುಕೊಳ್ಳಬಹುದಾದ ಹಲವು ಕ್ಷಣಗಳಲ್ಲಿ ಪುಸ್ತಕಲೋಕವೂ ಒಂದು. ಪುಸ್ತಕಗಳ ಜೊತೆಗಿನ ಒಡನಾಟ, ಗ್ರಂಥಾಲಯದಲ್ಲಿ ವಿವಿಧ ಪುಸ್ತಕಗಳ ಪ್ರಪಂಚವನ್ನು ನೋಡಿ ಒಂದೊಂದಾಗಿ ಅವುಗಳ ಒಳಹೊಕ್ಕು ನೋಡಲು ಆರಂಭಿಸುವ ಗಳಿಗೆ, ತನ್ನ ಆಸಕ್ತಿಯ ಪುಸ್ತಕವನ್ನು ಕೊಂಡು ಪುಳಕಗೊಳ್ಳುವ ಕ್ಷಣ ಎಲ್ಲವೂ ವಿದ್ಯಾರ್ಥಿ ಜೀವನದಲ್ಲಿ ಬಂದು ಹೋಗುವ ಮರೆಯಲಾಗದ ನೆನಪುಗಳು. ಪುಸ್ತಕಗಳ ಜೊತೆಗಿನ ಬಂಧ, ಅವುಗಳ ಮೂಲಕ ಪ್ರಪಂಚ ನೋಡುವ ಕಲಿಕೆಯ ಭಾಗ ಜೀವನದ ಮೈಲಿಗಲ್ಲು. ಇದರ ಬೆಲೆಯನ್ನು ಪ್ರತಿ ಪುಸ್ತಕ ಪ್ರೇಮಿಯೂ ಅರಿತೇ ಇರುತ್ತಾನೆ.
ಈಗೆಲ್ಲ ಅಂಥ ಪುಸ್ತಕಗಳ ಬಂಧ ಒಡನಾಟ ಮಕ್ಕಳಿಗೆ ಕಡಿಮೆಯಾಗುತ್ತಿದೆ ಅಂತನಿಸಿದರೂ, ಆಗಾಗ ಇಂಥ ಘಟನೆಗಳು, ಉದಾಹರಣೆಗಳು ಕಣ್ಣ ಮುಂದೆ ಬಂದು ನಿಂತು ಇದು ಎಂದಿಗೂ ಅಳಿಸಲಾಗದ್ದು ಹಾಗೂ ಮುಂದೆಯೂ ಇರುವಂಥದ್ದು ಎಂಬುದನ್ನು ಸಾಬೀತುಪಡಿಸುತ್ತಿರುತ್ತವೆ. ಇದೂ ಅಂಥದ್ದೇ ಒಂದು ಘಟನೆಗಳಲ್ಲೊಂದು.
ಇಲ್ಲೊಬ್ಬ ಹುಡುಗ ತನ್ನಿಷ್ಟದ ಪುಸ್ತಕ ಕೊಳ್ಳಲು ಅಂಗಡಿಗೆ (bookstore) ಹೋದಾಗ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಸ್ತಕ ಪ್ರೇಮಿ ಹುಡುಗನೊಬ್ಬ 400 ರೂಪಾಯಿಯನ್ನು ತನ್ನ ಕಿಸೆಯಲ್ಲಿಟ್ಟುಕೊಂಡು ಪುಸ್ತಕ ತೆಗೆಯಲು ಪುಸ್ತಕದಂಗಡಿಗೆ ಹೋದಾಗ ಅದರ ಬೆಲೆ ಇನ್ನೂ 300 ರೂಪಾಯಿ ಹೆಚ್ಚು ಎಂದು ತಿಳಿದು ಕಕ್ಕಾಬಿಕ್ಕಿಯಾದಾಗ ಪುಸ್ತಕದಂಗಡಿಯ ಮಂದಿಯೇ ಆತನಿಗೆ ಆ ಪುಸ್ತಕಕ್ಕೆ ಡಿಸ್ಕೌಂಟ್ ಹಾಕಿದ್ದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ವಾಕಿಂಗ್ ಬುಕ್‌ಫೇರ್ಸ್ ಎಂಬ ಬುಕ್ ಸ್ಟೋರ್ ತನ್ನ ಟ್ವಿಟರ್ ಪುಟದಲ್ಲಿ ನಡೆದ ಘಟನೆಯ ವಿವರವನ್ನು ಪೋಸ್ಟ್ ಮಾಡಿದೆ. ನಡೆದುದಿಷ್ಟು. ವಾಕಿಂಗ್ ಬುಕ್‌ಸ್ಟೋರ್ಸ್ ಬರೆದುಕೊಂಡ ಪ್ರಕಾರ, ʻಒಬ್ಬ ಯುವ ಪುಸ್ತಕಪ್ರೇಮಿ ತನ್ನ ಪಾಕೆಟ್ಟಿನಲ್ಲಿ 400 ರೂಪಾಯಿಗಳನ್ನಿಟ್ಟುಕೊಂಡು ನಮ್ಮ ಅಂಗಡಿ ಒಳಹೊಕ್ಕ. ಆತ ಖುಷಿಯಲ್ಲಿ ತನ್ನಿಷ್ಟದ ಮಾಂಗಾ ಬುಕ್ಸ್ ಅನ್ನು ಖರೀದಿಸುವ ಸಲುವಾಗಿ ಬಂದಿದ್ದ. ಆದರೆ, ಖರೀದಿಯ ವೇಳೆ ಅದಕ್ಕೆ 699 ರೂಪಾಯಿಗಳು ಎಂದು ತಿಳಿದ ತಕ್ಷಣ ಆತನಿಗೆ ಅತೀವ ಬೇಸರವಾಗಿ ಪುಸ್ತಕವನ್ನು ಹಾಗೆಯೇ ಇಟ್ಟು ಹೊರಡಲನುವಾದಾಗ, ನಾವು ಆತನ ಆಸಕ್ತಿಯನ್ನು ಕಂಡು ಆತನಲ್ಲಿ ಎಷ್ಟು ದುಡ್ಡಿತ್ತ ಅಷ್ಟಕ್ಕೇ ಅದನ್ನು ನೀಡಿದಾಗ ಆತನ ಕಣ್ಣಲ್ಲಿ ಕಂಡ ಖುಷಿʼ ಎಂದು ಹುಡುಗ ತನ್ನಿಷ್ಟದ ಪುಸ್ತಕದೊಂದಿಗೆ ನಿಂತಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದೆ.
ಬುಕ್ ಸ್ಟೋರ್‌ನ ಈ ಪೋಸ್ಟ್‌ಗೆ ಸಾವಿರಾರು ಜನ ಮೆಚ್ಚಿಕೊಂಡಿದ್ದು, ಕಾಮೆಂಟ್ ಕೂಡಾ ಮಾಡಿದ್ದಾರೆ. ಇದೊಂದು ಅತ್ಯುತ್ತಮ ನಡೆ ಎಂದು ಕೆಲವರು ಹೊಗಳಿದ್ದರೆ, ಇನ್ನೂ ಕೆಲವರು, ಆತನ ಖುಷಿ ಆತನ ಕಣ್ಣಲ್ಲೇ ಕಾಣುತ್ತಿದೆ. ಎಂತಹ ಒಳ್ಳೆಯ ಕೆಲಸ ಮಾಡಿದ್ದೀರಿ ನೀವು. ಇಂತಹ ಮಕ್ಕಳು ಹಾಗೂ ಘಟನೆಗಳು ಹೆಚ್ಚಾಗಲಿ ಎಂದು ಹಾರೈಸಿದ್ದಾರೆ.
ಹಲವರು ತಮ್ಮ ಹಳೆಯ ದಿನಗಳನ್ನು ನೆನೆಸಿಕೊಂಡು ಭಾವುಕರಾಗಿದ್ದು, ತಮ್ಮ ಶಾಲಾ ದಿನಗಳಲ್ಲಿ ಓದಿದ ಪುಸ್ತಕಗಳು ನಡೆದ ಘಟನೆಗಳು ಇತ್ಯಾದಿಗಳನ್ನು ನೆನೆಸಿಕೊಂಡು ಹುಡುಗನಿಗೆ ಶುಭ ಹಾರೈಸಿದ್ದಾರೆ. ಪುಸ್ತಕದಂಗಡಿ ಮಾಡಿದ ಒಂದು ಚಂದದ ಕೆಲಸವಿದು. ನಿಮ್ಮ ಈ ಉಡುಗೊರೆ ಆ ಹುಡುಗನ ಬಳಿ ದಶಕಗಳ ಕಾಲ ಇರುತ್ತದೆ ಎಂದು ಒಬ್ಬಾತ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Viral Story: ಬ್ರೇಕಪ್ ನಂತರ ಮರಳಿ ಬಾ ಎಂದು ಹುಡುಗಿಗಾಗಿ ಮಂಡಿಯೂರಿ 21 ಗಂಟೆ ಕಾಲ ಚಳಿಮಳೆಯಲ್ಲಿ ಕಾದ ಯುವಕ!