Site icon Vistara News

Viral story | ಗರ್ಭಿಣಿಯಾಗಿದ್ದಕ್ಕೆ ಕೆಲಸದಿಂದ ವಜಾ! 15 ಲಕ್ಷ ರೂ ಪರಿಹಾರ ಪಡೆದಳಾಕೆ!

viral story

ಮಹಿಳೆಯರು ತಾಯ್ತನವನ್ನು ಹೊಂದುವುದು ಪ್ರಕೃತಿ ಸಹಜವಾದ ಕ್ರಿಯೆ ಹಾಗೂ ಈ ಸಂಬಂಧ ವೃತ್ತಿಯಲ್ಲಿರುವ ಮಹಿಳೆಯರಿಗೆ ತಾಯ್ತನದ ರಜೆ ಸೇರಿದಂತೆ ಹಲವು ವಿನಾಯಿತಿಗಳನ್ನು ನೀಡುವುದು ಸಹಜ ಕೂಡಾ. ವೃತ್ತಿಯಲ್ಲಿ ಆ ಹಕ್ಕು ಪ್ರತಿ ಮಹಿಳೆಗೂ ಇದೆ. ಆದರೆ, ಇಲ್ಲೊಬ್ಬಾಕೆ, ಗರ್ಭಿಣಿ ಎಂದು ಕಚೇರಿಯಲ್ಲಿ ತಿಳಿಸಿದ್ದಕ್ಕಾಗಿ, ಆಕೆಯನ್ನು ಗರ್ಭಿಣಿಯೆಂಬ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆಯಂತೆ. ಈ ಸಂಬಂಧ ಆ ಮಹಿಳೆ, ಕಾನೂನಿನ ಮೊರೆ ಹೋದಳು. ಆಕೆ, ಬರೋಬ್ಬರಿ ೧೫ ಲಕ್ಷ ರೂಪಾಯಿಗಳ ಪರಿಹಾರವನ್ನು ಪಡೆದಿದ್ದಾರೆ!

ನಿಜ. ಎಸ್ಸೆಕ್‌ ಮೂಲದ ಸೆಕ್ಯುರಿಟಿ ಸಿಸ್ಟಂ ಸಪ್ಲಯರ್‌ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಾರ್ಲಟ್‌ ಲೀಚ್‌ ಎಂಬ ೩೪ರ ಹರೆಯದ ಮಹಿಳೆ ತಾನು ಗರ್ಭಿಣಿ ಎಂದು ಕಚೇರಿಯಲ್ಲಿ ತಿಳಿಸಿದ ತಕ್ಷಣ ಆಕೆಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಮೇಲಧಿಕಾರಿಗೆ ಈ ವಿಷಯ ತಿಳಿಸುತ್ತಿದ್ದಂತೆಯೇ ಆಕೆಯನ್ನು ಕೆಲಸದಿಂದ ತೆಗೆದುಹಾಕಿದ್ದು ಮುಖ್ಯವಾಗಿ ಆಕೆಯೂ ಮಹಿಳೆಯೇ ಜೊತೆಗೆ ಮಗುವೊಂದರ ತಾಯಿಯಾಗಿದ್ದೂ ಈಕೆಯನ್ನು ಕೆಲಸದಿಂದ ತೆಗೆದಿದ್ದು ಆಶ್ಚರ್ಯದ ಜೊತೆಗೆ ಆಕೆಗೆ ಆಘಾತವನ್ನೂ ತಂದಿತ್ತು. ಈ ಘಟನೆಯಿಂದ ಜರ್ಜರಿತಳಾಗಿದ್ದ ಆಕೆ, ತಾನು ತಾಯಿಯಾಗುತ್ತಿರುವುದು ಕೆಲಸಕ್ಕೆ ಬಾರದ ಕೆಲಸವೆಂದು ಕಚೇರಿಯಲ್ಲಿ ಮೇಲಧಿಕಾರಿ ವರ್ತಿಸಿದ್ದು ಆಕೆಗೆ ಬಹಳ ನೋವಿನೊಂದಿಗೆ ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು.

ಲೀಚ್‌ ತನ್ನ ಮೇಲಧಿಕಾರಿಗೆ, ತಾನು ಈವರೆಗೆ ಹಲವು ಗರ್ಭಪಾತಗಳನ್ನೂ ಅನುಭವಿಸಿದ ಕಾರಣದಿಂದ ತನಗೆ ಹುಟ್ಟಲಿರುವ ಮಗುವಿನ ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ಹಾಗೂ ಕಳವಳ ಇದೆ ಎಂದು ತಿಳಿಸಿದ ಸಂದರ್ಭ ಆಕೆಯನ್ನು ನೇರವಾಗಿ ಕೆಲಸದಿಂದ ತೆಗೆದುಹಾಕಲಾಗಿತ್ತು. ತನಗೆ ಕೆಲಸದಿಂದ ಕೊಂಚ ವಿನಾಯಿತಿ ಸಿಗಬಹುದೆಂಬ ಕಾರಣಕ್ಕೆ ಆಕೆ ಹಾಗೆ ಹೇಳಿದ್ದರೆ, ಅದನ್ನು ಒಬ್ಬ ಮಹಿಳೆಯಾಗಿ ಜೊತೆಗೆ ಸ್ವತಃ ತಾಯಿಯಾಗಿರುವ ಮೇಲಧಿಕಾರಿಣಿಯೇ ಅರ್ಥ ಮಾಡಿಕೊಳ್ಳದೆ ಕೆಲಸದಿಂದ ತೆಗೆದುಹಾಕಿದ್ದು ಆಕೆಗೆ ಅತೀವ ನೋವನ್ನುಂಟುಮಾಡಿತ್ತು.

ಆಕೆಯ ಮೇಲಧಿಕಾರಿ ಮಹಿಳೆ, ಲೀಚ್‌ ಅವರಿಗೆ ತಾಯ್ತನದ ರಜೆ ಹಾಕಲು ಯಾವುದೇ ಅರ್ಹತೆಗಳಿರಲಿಲ್ಲ. ಯಾಕೆಂದರೆ ಆಕೆ ಹೊಸ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಅದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಬೇಸರದ ವಿಷಯವೆಂದರೆ ನಾವು ಆಕೆಯನ್ನು ತೆಗೆದುಹಾಕಿದ ಒಂದೇ ವಾರದಲ್ಲಿ ಆಕೆಗೆ ಮತ್ತೆ ಗರ್ಭಪಾತವಾಯಿತು ಎಂದು ಹೇಳಿಕೆ ನೀಡಿದ್ದಾರೆ.

೨೦೨೧ ಮೇ ತಿಂಗಳಲ್ಲಿ ಲೀಚ್‌ ಅವರು ನಮ್ಮ ಸಂಸ್ಥೆಯಲ್ಲಿ ಸಹ ಆಡಳಿತಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು, ಹಾಗೂ ಆಕೆ ವಾರ್ಷಿಕ ೨೦, ೦೦೦ ಪೌಂಡ್‌ ಸಂಬಳ ಸ್ವೀಕರಿಸುತ್ತಿದ್ದರು ಎಂದು ಆಕೆಯ ಮೇಲಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಎಲ್ಲ ವಿಚಾರಗಳ ಅವಲೋಕನ ಮಾಡಿದ ನಂತ, ಆಕೆ ಗರ್ಭಿಣಿಯೆಂಬ ಕಾರಣಕ್ಕೇ ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ನಿರ್ಧಾರಕ್ಕೆ ಬಂದ ಎಂಪ್ಲಾಯ್‌ಮೆಂಟ್‌ ಟ್ರಿಬ್ಯೂನಲ್‌ ೧೪,೮೮೫ ಪೌಂಡ್‌ಗಳ (ಅಂದರೆ ಸುಮಾರು ೧೪,೮೬,೮೫೬ ರೂಪಾಯಿಗಳು) ಪರಿಹಾರ ನೀಡಿದೆ.

ಈ ಸಂದರ್ಭ ಲೀಚ್‌ ಮಾತನಾಡಿ, ಗರ್ಭಿಣಿಯೆಂಬ ಕಾರಣಕ್ಕೆ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದು ನಿಜಕ್ಕೂ ಆಘಾತವಾಗಿತ್ತು. ಇದು ನನ್ನ ಜೀವನದ ಮೇಲೆ ಭಾರೀ ಕೆಟ್ಟ ಪರಿಣಾಮವನ್ನೇ ಬೀರಿತು. ಈ ಘಟನೆಯಿಂದ ಮಾನಸಿಕವಾಗಿ ನಾನು ಕುಗ್ಗಿ ಹೋದೆ. ಬಹಳ ಆಘಾತ ಅನುಭವಿಸಿದೆ. ಇನ್ನೊಂದು ಕೆಲಸಕ್ಕೆ ಆ ಸಂದರ್ಭ ಸೇರುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ನಾನು ಬಹಳ ನೋವನ್ನುಂಡೆ ಎಂದು ಆಕೆ ತನ್ನ ನೋವನ್ನು ಹೇಳಿದ್ದಾರೆ.

Exit mobile version