ಈ ಕತೆ ಯಾವ ಸಿನಿಮಾ ಕತೆಗೂ ಕಮ್ಮಿ ಇಲ್ಲ. ನಿಜವಾಗಿಯೂ, ನಡೆದ ಕತೆಯೆಂದರೆ ಊಹಿಸುವುದೇ ಕಷ್ಟವೇ. ಒಂದಿಷ್ಟು ವರ್ಷಗಳ ಕಾಲ ಕಾಣೆಯಾದವರ ಪತ್ತೆಯೇ ಸಾಧ್ಯವಾಗಿಲ್ಲ ಎಂದರೆ, ನೋವಾದರೂ ಕುಟುಂಬವರ್ಗದವರು ಕಾಣೆಯಾದವರು ಮರಳಿ ದೊರೆತಾರು ಎಂಬ ಆಸೆ ಕೈಬಿಡುವುದು ಸಹಜ. ಎಲ್ಲ ಪ್ರಯತ್ನಗಳನ್ನು ಪಟ್ಟೂ ಕೊನೆಗೂ ಸಿಗದೇ ಹೋದರೆ, ಬೇಸರವಾದರೂ ಮರಳಿ ಬರುವ ಸಂಭವ ಕಡಿಮೆ. ಇನ್ನು ೫೦ ವರ್ಷಗಳು ಕಳೆಯಿತೆಂದರೆ, ಸಿಗುವ ಆಶಾಭಾವ ಕೇವಲ ಭಾವವಿದ್ದೀತು ಅಷ್ಟೇ, ವಾಸ್ತವಕ್ಕೆ ದೂರ. ಆದರೆ, ಇಲ್ಲೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾಣೆಯಾದ ಮಗು ಬರೋಬ್ಬರಿ ೫೧ ವರ್ಷಗಳ ನಂತರ ಅದನ್ನು ಹೆತ್ತವರಿಗೆ ಮರಳಿ ದೊರೆತಿದೆ!
ಹೌದು. ಯುಎಸ್‌ನ ಮೆಲಿಸ್ಸಾ ಹಿಗ್‌ಸ್ಮಿತ್ ಎಂಬಾಕೆ ಬರೋಬ್ಬರಿ ೫೧ ವರ್ಷಗಳ ನಂತರ ತನ್ನ ಹೆತ್ತಮ್ಮನನ್ನು ಕಂಡಿದ್ದಾರೆ.
ಐದು ದಶಕಗಳ ಕಾಲ ಹುಡುಕಾಡಿ ಕೊನೆಗೂ ಯುಎಸ್‌ನ ಮಹಿಳೆಯೊಬ್ಬರು ತನ್ನ ಕುಟುಂಬಸ್ಥರಿಗೆ ದೊರೆತಿದ್ದಾರೆ. ಸಣ್ಣ ಮಗುವಾಗಿದ್ದಾಗ ಅಪಹರಿಸಲ್ಪಟ್ಟಿದ್ದಾಕೆ ಇದೀಗ ತನ್ನ ೫೧ನೇ ವಯಸ್ಸಿನಲ್ಲಿ ತನ್ನ ಕುಟುಂಬಸ್ಥರನ್ನು ಭೇಟಿಯಾಗಿದ್ದಾಳೆ. ಈಕೆಯ ಹೆಸರು ಮೆಲ್ಲಿಸಾ ಹಿಗ್‌ಸ್ಮಿತ್.
ಆಗಸ್ಟ್ ೨೩, ೧೯೭೧ರಲ್ಲಿ ಮೆಲಿಸ್ಸಾ ಒಂದು ವರ್ಷದ ಮಗುವಾಗಿದ್ದಾಗ ಆಕೆಯ ಕಿಡ್ನ್ಯಾಪ್ ಪ್ರಕರಣ ನಡೆದಿತ್ತು. ಆಕೆಯ ಅಮ್ಮ ಅಲ್ಟಾ ಅಪೆಂಟಕೋ ಮಗುವನ್ನು ನೋಡಿಕೊಳ್ಳಲು ಬೇಬಿ ಸಿಟ್ಟರ್ ಬೇಕೆಂದು ಜಾಹಿರಾತನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದಳು. ಮೆಲ್ಲಿಸಾಳ ಅಮ್ಮ ಉದ್ಯೋಗದಲ್ಲಿದ್ದುದರಿಂದ ಆಕೆಗೆ ಮಗುವನ್ನು ನೋಡಿಕೊಳ್ಳುವಾಕೆ ಬೇಕಾಗಿತ್ತು. ವೃತ್ತಿಯ ಜೊತೆಗೆ ಮಗುವನ್ನು ನೋಡಿಕೊಳ್ಳಲು ಆಕೆಗೆ ಕಷ್ಟವಾಗುತ್ತಿತ್ತು. ಆಕೆಯ ಈ ಜಾಹಿರಾತನ್ನು ನೋಡಿ ಒಬ್ಬಾಕೆ ತನಗೆ ಮಗುವನ್ನು ನೋಡಿಕೊಳ್ಳಲು ಆಸಕ್ತಿ ಇರುವುದಾಗಿ ಹೇಳಿಕೊಂಡಿದ್ದಳು. ಆಕೆಯನ್ನು ಮುಖತಃ ಭೇಟಿಯಾಗದೆ, ಆಕೆಗೆ ಮಗುವನ್ನು ನೋಡಿಕೊಳ್ಳಲು ನೀಡುವುದಾಗಿ ಮೆಲಿಸ್ಸಾಳ ಅಮ್ಮ ಒಪ್ಪಿಗೆ ನೀಡಿದ್ದಳು. ಮೆಲಿಸ್ಸಾಳ ಅಮ್ಮ ಅಪೆಂಟಕೋಳ ರೂಂಮೇಟ್ ಮೆಲಿಸ್ಸಾಳನ್ನು ಕೆಲಸದಾಕೆಗೆ ಕೊಟ್ಟಿದ್ದರು. ಆದರೆ, ಮೊದಲ ದಿನವೇ ಆಕೆ ಮಗುವಿನ ಜೊತೆಗೆ ಕಾಣೆಯಾಗಿದ್ದಳು. ಎಂದಿಗೂ ಹಿಂತಿರುಗಲೇ ಇಲ್ಲ.
ಈ ಬಗ್ಗೆ ಮೆಲಿಸ್ಸಾಳ ಹೆತ್ತವರು ಪೊಲೀಸ್ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಆಕೆಯ ಹೆತ್ತವರು ಮೆಲಿಸ್ಸಾಳ ನೆನಪಿನಲ್ಲಿ ಆಕೆಯ ಹುಟ್ಟುಹಬ್ಬವನ್ನೂ ಪ್ರತಿವರ್ಷ ಆಚರಿಸುತ್ತಿದ್ದರು. ಅಷ್ಟರಮಟ್ಟಿಗೆ ಅವರು ತಮ್ಮ ಕಾಣೆಯಾದ ಮಗಳು ಬರಲಿ ಎಂಬ ಆಸೆಯಿಂದ ೫೦ ವರ್ಷಗಳು ಕಳೆದರೂ ಎದುರು ನೋಡುತ್ತಿದ್ದರು. ಇಷ್ಟೇ ಅಲ್ಲದೆ, ಅವರು ಫೈಂಡಿಂಗ್ ಮೆಲಿಸ್ಸಾ ಹಿಗ್‌ಸ್ಮಿತ್ ಎಂಬ ಫೇಸ್‌ಬುಕ್ ಪೇಜ್ ಕೂಡಾ ಕ್ರಿಯೇಟ್ ಮಾಡಿ ಆಕೆಗಾಗಿ ಸ್ವಪ್ರಯತ್ನದಿಂದ ಹುಡುಕಾಟ ನಡೆಸಿದ್ದರು.
ಇತ್ತೀಚೆಗೆ ಹಿಗ್‌ಸ್ಮಿತ್ ಕುಟುಂಬ ನೆಲೆಸಿರುವ ಫೋರ್ಟ್ ವರ್ತ್‌ನಿಂದ ಸುಮಾರು ಸಾವಿರದ ನೂರು ಮೈಲಿ ದೂರದ ಚಾರ್ಲ್ಸ್‌ಟನ್‌ನಲ್ಲಿ ಈಕೆ ಇರುವ ಸಂಭವ ಇದೆ, ನೀವ್ಯಾಕೆ ಅಲ್ಲಿ ಪ್ರಯತ್ನಿಸಬಾರದು ಎಂಬ ಅನಾಮಿಕ ವ್ಯಕ್ತಿಯ ಸುಳಿವನ್ನು ಹಿಡಿದು, ಮೆಲಿಸ್ಸಾಳ ಬರ್ತ್‌ಮಾರ್ಕ್ ಸುಳಿವನ್ನೂ ಹಿಡಿದು ಆ ಊರಲ್ಲಿ ಹುಡುಕಾಟ ನಡೆಸಿದ್ದರು. ಹುಟ್ಟಿದ ದಿನಾಂಕವನ್ನೂ ಇದಕ್ಕೆ ಆಧಾರವಾಘಿ ಪರಿಗಣಿಸಲಾಗಿತ್ತು. ಕೊನೆಗೆ ಡಿಎನ್‌ಎ ಪರೀಕ್ಷೆಯ ಮೂಲಕ ಮೆಲಿಸ್ಸಾಳನ್ನು ಪತ್ತೆ ಹಚ್ಚಲಾಗಿದೆ. ಕೊನೆಗೂ ಮೆಲಿಸ್ಸಾ ತನ್ನ ಹೆತ್ತವರ ಜೊತೆಗೆ ಸಹೋದರ ಸಹೋದರಿಯರನ್ನೂ ಭೇಟಿಯಾಗಿದ್ದಾಳೆ.
ಹೆತ್ತವರೂ, ಸಹೋದರಿ ವಿಕ್ಟೋರಿಯಾ ಗಾರ್ನರ್ ತನ್ನ ಕಳೆದು ಹೋದ ಸಹೋದರಿಯನ್ನು ಕಣ್ಣಾರೆ ಕಂಡು ಆನಂದಭಾಷ್ಪ ಸುರಿಸಿದ್ದಾರೆ. ಇನ್ನೊಬ್ಬ ಸಹೋದರಿ ಸ್ಪೈನ್‌ನಲ್ಲಿದ್ದು ಸುದ್ದಿ ಕೇಳಿ ಮೆಲಿಸ್ಸಾಳನ್ನು ಭೇಟಿ ಮಾಡಲು ಕ್ರಿಸ್‌ಮಸ್ ಸಮಯದಲ್ಲಿ ಬರಲಿದ್ದಾರಂತೆ. ಈಕೆಯ ಹೆತ್ತವರು, ಸ್ವಪ್ರಯತ್ನದಿಂದ ಈಕೆಯನ್ನು ಕಂಡು ಹಿಡಿದಿದ್ದು, ಈ ಕೇಸ್ ವಿಚಾರದಲ್ಲಿ ಸಾಕಷ್ಟು ತಪ್ಪುಗಳು, ಅಡೆತಡೆಗಳು, ತೊಂದರೆಗಳು ಏಜೆನ್ಸಿಗಳಿಂದಾಗಿವೆ. ಆ ತೊಂದರೆಗಳನ್ನೆಲ್ಲ ಮರೆತು ಸದ್ಯಕ್ಕೆ ನಾವು ಮೆಲಿಸ್ಸಾಳನ್ನು ಅರಿಯಲು,ನಮ್ಮ ಕುಟುಂಬದ ಜೊತೆಗೆ ಆಕೆಗೆ ಬೆರೆಯಲು ಸಮಯ ನೀಡಲಿದ್ದೇವೆ. ಕಳೆದುಹೋದ ಮಗಳು ೫೦ ವರ್ಷಗಳ ನಂತರ ಮತ್ತೆ ಸಿಕ್ಕಿದ್ದು ಅತೀವ ಸಂತಸದ ಘಳಿಗೆಯಾಗಿದೆ ಎಂದು ಆಕೆಯ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.