Site icon Vistara News

Viral Video: ವಂದೇ ಭಾರತ್‌ ರೈಲಿನಲ್ಲಿ ಫೈಟಿಂಗ್‌ ಸೀನ್‌; ಮೆಟ್ರೋ ಚಾಳಿ ಇಲ್ಲಿಗೂ ಕಾಲಿಟ್ಟಿದೆ ಎಂದ್ರು ನೆಟ್ಟಿಗರು

vande bharath

vande bharath

ನವದೆಹಲಿ: ಕೆಲವು ತಿಂಗಳ ಹಿಂದೆ ಆರಂಭವಾದ ವಂದೇ ಭಾರತ್‌ ರೈಲಿಗೆ (Vande Bharat Train) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ್‌ ರೈಲಿನ ಸೇವೆ ಬಳಸತೊಡಗಿದ್ದಾರೆ. ಈ ಮಧ್ಯೆ ವಂದೇ ಭಾರತ್‌ ರೈಲಿನೊಳಗೆ ಲಗೇಜ್‌ ಇಡುವ ಸ್ಥಳದ ವಿಚಾರದಲ್ಲಿ ಜಗಳ ನಡೆದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗಿದೆ (Viral Video).

ಕೆಲವು ದಿನಗಳ ಹಿಂದೆ ಚಲಿಸುವ ರೈಲು, ಮೆಟ್ರೋದಲ್ಲಿ ಡ್ಯಾನ್ಸ್‌ ಮಾಡುವ ವಿಡಿಯೊ ವೈರಲ್‌ ಆಗುತ್ತಿದ್ದವು. ಇದೀಗ ರೈಲಿನೊಳಗಿನ ಫೈಟ್‌ ಸೀನ್‌ ಗಮನ ಸೆಳೆಯುತ್ತಿವೆ. ಇಂತಹದ್ದೇ ದೃಶ್ಯವೊಂದು ವಂದೇ ಭಾರತ್‌ ರೈಲಿನೊಳಗೆ ಕಂಡು ಬಂದಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ವ್ಯಕ್ತಿಗಳಿಬ್ಬರು ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಲಗೇಜ್‌ ಇಡುವ ಸ್ಥಳಕ್ಕಾಗಿ ಅವರಿಬ್ಬರ ಮಧ್ಯೆ ಕಿಚ್ಚು ಹತ್ತಿಕೊಂಡಿತ್ತು.

ಸ್ಥಳಾವಕಾಶ ಮತ್ತು ಲಗೇಜ್‌ ಸ್ಥಳದ ಕೊರತೆಯ ಬಗ್ಗೆ ವ್ಯಕ್ತಿಗಳಿಬ್ಬರು ಪರಸ್ಪರ ವಾದಿಸತೊಡಗಿದರು. ಜತೆಗೆ ಮಹಿಳೆಯೂ ಸೇರಿಕೊಂಡರು. ಅವರು ಕೂಡ ಕೂಗಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಕೆಲವು ಸಹ ಪ್ರಯಾಣಿಕರು ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ್ದಾರೆ. ನಂತರ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ʼವಂದೇ ಭಾರತ್‌ ರೈಲಿನೊಳಗೆ ಇಬ್ಬರು ಅಂಕಲ್‌ಗಳು ಬ್ಯಾಗ್‌ ಇಡುವ ಸ್ಥಳಕ್ಕಾಗಿ ಜಗಳವಾಡುತ್ತಿದ್ದಾರೆʼ ಎಂದು ಕ್ಯಾಪ್ಶನ್‌ ನೀಡಲಾಗಿದೆ.

ನೆಟ್ಟಿಗರು ಏನಂದ್ರು?

ವಿಡಿಯೊ ವೀಕ್ಷಿಸಿದ ಅನೇಕರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ಸಾರ್ವಜನಿಕ ಸಾರಿಗೆಯಲ್ಲಿ ನಡೆಯುವ ಸಾಮಾನ್ಯ ಜಗಳಗಳಿಗೆ ಹೋಲಿಸಿದ್ದಾರೆ. “ವಂದೇ ಭಾರತ್ ಆಗಿರಲಿ ಅಥವಾ ವಿಮಾನವೇ ಇರಲಿ ಜಗಳವಾಡಲು ಒಂದು ಕಾರಣವನ್ನು ಹುಡುಕುತ್ತೇವೆ” ಎಂದು ಒಬ್ಬರು ಹೇಳಿದ್ದಾರೆ. “ಜಗಳದ ಕಾರಣದಿಂದ ವಿಮಾನ ರೈಲಾಗಿ ಮಾರ್ಪಟ್ಟಿವೆ. ರೈಲು ಬಸ್‌ನಂತಾಗಿದೆʼʼ ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. “ವಂದೇ ಭಾರತ್ ರೈಲುಗಳಲ್ಲಿ ಜಗಳ ಈಗ ತುಂಬಾ ಸಾಮಾನ್ಯ ದೃಶ್ಯ ಎಂಬಂತಾಗಿದೆ. ನಾನು ಪ್ರಯಾಣಿಸಿದಾಗಲೆಲ್ಲಾ ಕೆಲವು ಜನರು ಬ್ಯಾಗ್ ಇಡುವ ಸ್ಥಳಕ್ಕಾಗಿ ಕೂಗಾಡುವುದನ್ನು ನೋಡಿದ್ದೇನೆʼʼ ಎಂದು ಮಗದೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಹಿಂದೆಯೂ ವೈರಲ್‌ ಆಗಿತ್ತು

ವಿಶೇಷ ಎಂದರೆ ದೆಹಲಿ ಮೆಟ್ರೋದಲ್ಲಿ ಇಬ್ಬರು ವ್ಯಕ್ತಿಗಳು ಜಗಳವಾಡುವ ವಿಡಿಯೊ ಕೆಲವೇ ದಿನಗಳಲ್ಲಿ ಹೊರ ಬಂದು ವೈರಲ್‌ ಆಗಿತ್ತು. ಇತ್ತೀಚೆಗೆ ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವಿಡಿಯೊದಲ್ಲಿ ಇಬ್ಬರು ಪರಸ್ಪರ ಜಗಳವಾಡುತ್ತಿರುವುದು ಕಂಡು ಬಂದಿತ್ತು. ಬೋಗಿಯೊಳಗೆ ವಿಪರೀತ ಜನ ಸಂದಣಿ ಇದ್ದರೂ ಅವರು ಪರಸ್ಪರ ಹೊಡೆದಾಡಿಕೊಂಡಿದ್ದರು. ಡಬ್ಲ್ಯುಡಬ್ಲ್ಯುಇಯ ವೃತ್ತಿಪರ ಹೋರಾಟಗಾರರಂತೆ ಇಬ್ಬರ ನಡುವೆ ತೀವ್ರ ಜಗಳ ಕಂಡು ಬಂದಿತ್ತು. ಸಹಪ್ರಯಾಣಿಕರು ಏನು ನಡೆಯುತ್ತಿದೆ ಎಂದು ತಿಳಿಯದೆ ಶಾಕ್‌ನಿಂದ ಈ ಫೈಟ್‌ ಸೀನ್‌ ಅನ್ನು ನೋಡುತ್ತ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಅವರು ಯಾಕಾಗಿ ಹೊಡೆದಾಡಿಕೊಂಡಿದ್ದರು ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಇದನ್ನೂ ಓದಿ: Viral Video: ಡ್ಯಾನ್ಸ್‌ ಆಯ್ತು, ರೊಮ್ಯಾನ್ಸ್‌ ಆಯ್ತು; ಇದೀಗ ಮೆಟ್ರೋದಲ್ಲಿ ಫೈಟ್‌ ಸೀನ್‌!

Exit mobile version