ಬೆಂಗಳೂರು: ಪ್ರತಿಭೆ ಒಲಿಯಬೇಕೆಂದರೆ ಅದರ ಹಿಂದೆ ಸಾಕಷ್ಟು ಪರಿಶ್ರಮವಿರಬೇಕು. ಆದರೆ ಕೆಲವು ಮಕ್ಕಳು ಮಾತ್ರ ಅದ್ಭುತ ಪ್ರತಿಭೆಗಳೊಂದಿಗೇ ಹುಟ್ಟಿಬಿಡುತ್ತವೆ ಎನ್ನಬಹುದು. ಅದಕ್ಕೆ ಸಾಕ್ಷಿಯೆನ್ನುವಂತಹ ಹಲವಾರು ಮಕ್ಕಳನ್ನು ನೀವು ನೋಡಿರಬಹುದು. ಇದೀಗ ಅದೇ ರೀತಿಯ ಪ್ರತಿಭೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ.
ಲಿಯೋನಾರ್ಡೊ ಹೆಸರಿನ 7 ವರ್ಷದ ಬಾಲಕ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವವ. ಈ ಬಾಲಕ ಗಿಟಾರ್ ನುಡಿಸುವುದರಲ್ಲಿ ಎತ್ತಿದ ಕೈ. ಎಷ್ಟೋ ವರ್ಷಗಳ ಕಾಲ ಗಿಟಾರ್ ಅಭ್ಯಾಸ ಮಾಡಿರುವವರೂ ಸಹ ತಲೆ ತಗ್ಗಿಸುವಷ್ಟು ಸುಮಧುರವಾಗಿ ಈ ಲಿಯೋನಾರ್ಡೊ ಗಿಟಾರ್ ಬಾರಿಸುತ್ತಾನೆ. ಅಂದ ಹಾಗೆ ಈ ಬಾಲಕ ಇತ್ತೀಚೆಗೆ ಗನ್ಸ್ ಎನ್ ರೋಸಸ್(Guns N’ Roses)ನ ಸ್ವೀಟ್ ಚೈಲ್ಡ್ ಓ ಮೈನ್ (Sweet Child O’ Mine) ಟ್ಯೂನ್ ಅನ್ನು ಗಿಟಾರ್‌ನಲ್ಲಿ ನುಡಿಸಿದ್ದಾನೆ.
ತಾನು ಗಿಟಾರ್ ಬಾರಿಸಿದ ವಿಡಿಯೊವನ್ನು ಬಾಲಕ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ. ಮಾರ್ಚ್ 9ರಂದು ಹಂಚಿಕೊಳ್ಳಲಾದ ಈ ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. 74 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೊಗೆ ಲೈಕ್ ಮಾಡಿದ್ದಾರೆ. ಹಲವಾರು ಮಂದಿ ವಿಡಿಯೊಗೆ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಇದನ್ನೂ ಓದಿ: Viral News : ಬ್ರಿಟನ್‌ನಲ್ಲಿ ಸೀರೆಯುಟ್ಟು 42 ಕಿ.ಮೀ ಮ್ಯಾರಥಾನ್ ಓಡಿದ ಮಹಿಳೆ
“ಮಾಮೂಲಿ ಬಾಲಕ ಆದರೆ ಇಷ್ಟೊಂದು ಸುಮಧುರವಾಗಿ ಮತ್ತು ಅಚ್ಚುಕಟ್ಟಾಗಿ ಗಿಟಾರ್ ನುಡಿಸುವುದಕ್ಕೆ ಸಾಧ್ಯವೇ ಇಲ್ಲ. ಈತ ಯಾವುದೋ ಪ್ರಸಿದ್ಧ ಗಿಟಾರ್ ಕಲಾವಿದರ ಪುನರ್ಜನ್ಮವೇ ಇರಬೇಕು” ಎಂದು ಕೆಲವರು ಊಹಿಸಲಾರಂಭಿಸಿದ್ದಾರೆ. “ಇಂತಹ ಮಗನನ್ನು ಪಡೆದ ಹೆತ್ತವರು ನಿಜಕ್ಕೂ ಪುಣ್ಯವಂತರು” ಎಂದು ಅನೇಕರು ಬಾಲಕನ ತಂದೆ ತಾಯಿಗೆ ಶುಭಾಶಯ ಕೋರಲಾರಂಭಿಸಿದ್ದಾರೆ. ಇನ್ನೂ ಹಲವು ನೆಟ್ಟಿಗರು ಬಾಲಕ ಭವಿಷ್ಯದಲ್ಲಿ ದೊಡ್ಡ ಗಿಟಾರ್ ಕಲಾವಿದನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಬಾಲಕ ವಿಡಿಯೊದಲ್ಲಿ ಗಂಭೀರವಾಗಿ ಹಾಗೂ ಅತ್ಯಂತ ಆತ್ಮವಿಶ್ವಾಸದಿಂದ ಕಾಣಿಸಿಕೊಂಡಿರುವ ಬಗ್ಗೆಯೂ ಪ್ರಶಂಸೆಗಳು ಬಂದಿವೆ.