Site icon Vistara News

Heart Touching Video: 1 ವರ್ಷದ ಬಳಿಕ ಭೇಟಿಯಾದ ಸಾಕುತಂದೆ; ಶ್ವಾನ ಮಾಡಿದ್ದೇನು?

dog video goes viral

dog video goes viral

ಬೆಂಗಳೂರು: ಮಾನವ ಮತ್ತು ಶ್ವಾನ ನಡುವಿನ ಸಂಬಂಧಕ್ಕೆ (human dog bonding) ಶತಮಾನಗಳ ಇತಿಹಾಸವಿದೆ. ಶ್ವಾನ ಮನುಷ್ಯನ ಉತ್ತಮ ಗೆಳೆಯ ಎನ್ನುವುದರಲಿ ಎರಡು ಮಾತಿಲ್ಲ. ಶ್ವಾನ ಮತ್ತು ಮಾನವನ ನಡುವಿನ ಪವಿತ್ರ ಸಂಬಂಧವನ್ನು ಕಳೆದ ವರ್ಷ ತೆರೆಕಂಡ ಕನ್ನಡ ಚಿತ್ರ ʼ777 ಚಾರ್ಲಿʼ (777 Charlie) ಸಾರಿ ಹೇಳಿತ್ತು. ಈ ಚಿತ್ರ ನೋಡಿದವರು ನಾಯಿ ತೋರ್ಪಡಿಸುವ ಸ್ನೇಹ ಬಂಧಕ್ಕೆ ಮಾರು ಹೋಗಿದ್ದರು. ಅದು ರೀಲ್‌ ಕಥೆ ಆಯಿತು. ಇದೀಗ ರಿಯಲ್‌ ಆಗಿ ನಾಯಿಯೊಂದು ಸುಮಾರು 1 ವರ್ಷಗಳ ಬಳಿಕ ಭೇಟಿಯಾದ ತನ್ನ ಯಜಮಾನನಿಗೆ ತೋರುವ ಪ್ರೀತಿಯ ವಿಡಿಯೊ ವೈರಲ್‌ (Heart Touching Video) ಆಗಿದೆ. ಆ ಶ್ವಾನದ ಪವಿತ್ರ, ಮುಗ್ಧ ಪ್ರೀತಿಗೆ ನೆಟ್ಟಿಗರು ಭಾವುಕರಾಗಿದ್ದಾರೆ.

ಶ್ವಾನ ಒಮ್ಮೆ ಯಾರನ್ನಾದರೂ ಪ್ರೀತಿಸಲು ಆರಂಭಿಸಿದರೆ ಬಳಿಕ ಅವರನ್ನು ಮರೆಯುವುದೇ ಇಲ್ಲ. ಅವರು ಹಲವು ಸಮಯಗಳ ಕಾಲ ಮನೆಯಲ್ಲಿ ಇಲ್ಲದಿದ್ದರೂ, ಮತ್ತೊಮ್ಮೆ ಯಾವಾಗಲಾದರೂ ಭೇಟಿಯಾದಾಗ ಮೊದಲಿನ ಅದೇ ಸ್ನೇಹ, ವಿಶ್ವಾಸದಿಂದ ನಡೆದುಕೊಳ್ಳುತ್ತದೆ. ಅದಕ್ಕೆ ಉದಾಹರಣೆ ಈ ವಿಡಿಯೊ.

ರಿಚಿ ಎಂಬ ಗ್ರೇಟ್ ಪೈರನೀಸ್ ನಾಯಿ ಮತ್ತು ಅದರ ಸಾಕು ತಂದೆ ವಿನಿ ನಡುವಿನ ಪುನರ್ಮಿಲನವನ್ನು ವಿಡಿಯೊ ಸೆರೆ ಹಿಡಿದಿದೆ. ರಿಚಿ ಕಾರಿನಲ್ಲಿ ಪ್ರಯಾಣಿಸುವುದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಬಳಿಕ ಸಾಕು ತಾಯಿ ರಿಚಿಯನ್ನು ಕರೆದುಕೊಂಡು ವಿಮಾನ ನಿಲ್ದಾಣ ತಲುಪುತ್ತಾರೆ. ಆರಂಭದಲ್ಲಿ ರಿಚಿಗೆ ವಿನಿಯ ಆಗಮನದ ಬಗ್ಗೆ ಗೊತ್ತಿರುವುದಿಲ್ಲ. ಕಾಯುತ್ತಿದ್ದಂತೆ ಕೊನೆಗೂ ವಿನಿ ಆಗಮಿಸಿಯೇ ಬಿಟ್ಟ. ಆಗ ನೋಡಿ ರಿಚಿಯ ಸಂತೋಷದ ಕಟ್ಟೆಯೇ ಒಡೆದು ಬಿಟ್ಟಿತು. ಉದ್ವೇಗದಿಂದ ಓಡಿ ಹೋಗಿ ವಿನಿಯನ್ನು ಅಪ್ಪಿ ಹಿಡಿಯಿತು. ವಿನಿಯೂ ಅಷ್ಟೇ ಪ್ರೀತಿಯಿಂದ ತನ್ನ ಸ್ನೇಹಿತನನ್ನು ಬಿಗಿದಪ್ಪಿಕೊಳ್ಳುತ್ತಾನೆ.

ಈ ವಿಡಿಯೊವನ್ನು ರಿಚಿಯ ಇಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ರಿಚಿಯ ಒಂದು ದಿನದ ಭೇಟಿಗಾಗಿ ವಿನಿ ಸುಮಾರು 5 ಗಂಟೆಗಳ ವಿಮಾನ ಪ್ರಯಾಣ ಮಾಡಿ ಆಗಮಿಸಿದ್ದ ಎಂದು ವಿಡಿಯೊಗೆ ಕ್ಯಾಪ್ಶನ್‌ ನೀಡಲಾಗಿದೆ. ಸೆಪ್ಟೆಂಬರ್ 20ರಂದು ಪೋಸ್ಟ್‌ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 2 ಲಕ್ಷಕ್ಕಿತಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರಿಗಂತೂ ಈ ಸ್ನೇಹಿತರಿಬ್ಬರ ಪುನರ್‌ಮಿಲನ ನೋಡಿ ಹೃದಯ ತುಂಬಿ ಬಂದಿದೆ.

ಇದನ್ನೂ ಓದಿ: New York Flood: ಶತಮಾನದ ಮಳೆಗೆ ತತ್ತರಿಸಿದ ನ್ಯೂಯಾರ್ಕ್;‌ ಕೆರೆಯಂತಾಗಿವೆ ಊರುಗಳು!

ಕಮೆಂಟ್‌ನಲ್ಲೇನಿದೆ?

ಈ ವಿಡಿಯೊ ನೋಡಿದ ಹಲವರು ಮೆಚ್ಚುಗೆ ಸೂಚಿಸಿ ಕಮೆಂಟ್‌ ಮಾಡಿದ್ದಾರೆ. ಕೆಲವರು ತಮ್ಮ ಜೀವನದಲ್ಲಾದ ಇದೇ ರೀತಿಯ ಘಟನೆಗಳನ್ನು ಹೆಕ್ಕಿ ಅಕ್ಷರಗಳ ಮೂಲಕ ಪೋಣಿಸಿದ್ದಾರೆ. ʼʼಈ ವಿಡಿಯೊ ನೋಡಿ ನನ್ನ ಕಣ್ಣುಗಳು ತುಂಬಿ ಬಂದವುʼʼ ಎಂದು ಒಬ್ಬರು ಹೇಳಿದ್ದಾರೆ. “ಕುವೈತ್‌ನಿಂದ ಹಿಂದಿರುಗಿದ ನನ್ನ ಮಗನನ್ನು ಮತ್ತೆ ನೋಡಿದಾಗ ಅವನ ಜರ್ಮನ್ ಶೆಫರ್ಡ್ ನಾಯಿಯ ಖುಷಿಯನ್ನು ನೋಡಬೇಕಿತ್ತುʼʼ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ʼʼಶ್ವಾನದ ಪ್ರೀತಿಗೆ ಸಾಟಿ ಯಾವುದೂ ಇಲ್ಲ. ಅಷ್ಟು ಪ್ರೀತಿಗೆ ನಾವು ಅರ್ಹರಲ್ಲʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಇದನ್ನು ನೋಡಿ ನನಗೆ ತುಂಬ ಖುಷಿಯಾಯ್ತು. ಶ್ವಾನದ ಬೇಟಿಗಾಗಿಯೇ ರಜೆಯಲ್ಲಿ ನಾನು ಮನೆಗೆ ಹೋಗಲು ಬಯಸುತ್ತೇನೆʼʼ ಎಂದು ಅನುಭವ ಹಂಚಿಕೊಂಡಿದ್ದಾರೆ ಮಗದೊಬ್ಬರು. ʼʼಉತ್ತಮ ವಿಡಿಯೊ ಮೂಲಕ ಮನಸ್ಸು ಗೆದ್ದು ಬಿಟ್ರಿʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version