Site icon Vistara News

Viral Video | ಅಫಘಾನಿಸ್ತಾನದ ಈ ಪುಟಾಣಿಯ ನಗುವಿಗೆ ಮನಸೋಲದವರಿಲ್ಲ; ವಿಡಿಯೊ ವೈರಲ್‌

ಕಾಬೂಲ್:‌ ತಾಲಿಬಾನಿಯರ ಆಕ್ರಮಣವಾದಾಗಿನಿಂದ ಅಫಘಾನಿಸ್ತಾನದ ಜನರ ಜೀವನ ತೀರಾ ಕಷ್ಟದಲ್ಲಿದೆ. ಅದರಲ್ಲೂ ಹೆಣ್ಣು ಮಕ್ಕಳಂತೂ ಶಿಕ್ಷಣ, ವೃತ್ತಿ, ಆರೋಗ್ಯ ಎಲ್ಲದರಿಂದಲೂ ವಂಚಿತರಾಗಿ ಮನೆಯಲ್ಲಿ ಕೂರುವಂತಾಗಿದೆ. ಹೀಗಿರುವಾಗ ಕಾಬೂಲ್‌ನ ಪುಟಾಣಿ ಬಾಲಕಿಯೊಬ್ಬಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral Video) ಮಾಡಿದೆ.

ಇದನ್ನೂ ಓದಿ: Viral story | ಪ್ರತ್ಯೇಕ ದಿನ, ತಿಂಗಳು, ವರ್ಷದಲ್ಲಿ ಹುಟ್ಟಿದ ಅವಳಿ ಮಕ್ಕಳು!

ನಜೀರಾ ಜಿಯಾಯೆ ಹೆಸರಿನ ವಕೀಲೆ ಕಾರಿನಲ್ಲಿ ತೆರಳುತ್ತಿರುತ್ತಾರೆ. ಆ ಸಮಯದಲ್ಲಿ ರಸ್ತೆ ಮೇಲೆ ಪುಟಾಣಿ ಬಾಲಕಿಯೊಬ್ಬಳು ಪೆನ್ನುಗಳನ್ನು ಮಾರಾಟ ಮಾಡುವುದು ಕಾಣಿಸುತ್ತದೆ. ಬಾಲಕಿಯ ಬಳಿ ಕಾರು ನಿಲ್ಲಿಸಿದ ನಜೀರಾ ಬಾಲಕಿಯ ಹೆಸರನ್ನು ಕೇಳುತ್ತಾರೆ. ಅದಕ್ಕೆ ಬಾಲಕಿ, “ಜೈನಾಬ್‌” ಎನ್ನುತ್ತಾಳೆ. “ಏನು ಮಾರಾಟ ಮಾಡುತ್ತಿದ್ದೀಯ” ಎಂದು ನಜೀರಾ ಪ್ರಶ್ನಿಸಿದಾಗ ಬಾಲಕಿ ಪೆನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸುತ್ತಾಳೆ.


ಕೇವಲ 0.20 ಸೆಂಟ್‌ಗೆ ಒಂದರಂತೆ ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದ ಬಾಲಕಿಯ ಬಳಿ “ನಿನ್ನ ಬಳಿ ಇರುವ ಎಲ್ಲ ಪೆನ್ನುಗಳನ್ನು ಖರೀದಿಸಿದರೆ ಖುಷಿಯಾಗುತ್ತದೆಯೇ” ಎಂದು ಪ್ರಶ್ನಿಸುತ್ತಾಳೆ ನಜೀರಾ. ಹುಂ ಎಂದು ಹೇಳಿದ ಬಾಲಕಿಯ ಬಳಿ ಇದ್ದ ಎಲ್ಲ ಪೆನ್ನುಗಳನ್ನು ಖರೀದಿಸುತ್ತಾಳೆ. ಪೆನ್ನುಗಳ ಬೆಲೆಗಿಂತ ಜಾಸ್ತಿ ಹಣವನ್ನು ನಜೀರಾ ನೀಡಿದಾಗ ಬಾಲಕಿಯು ನೀವು ನನಗೆ ಹೆಚ್ಚು ಹಣ ಕೊಟ್ಟಿರಿ ಎನ್ನುತ್ತಾಳೆ. ಆಗ ನಜೀರಾ ಇನ್ನೊಂದು ನೋಟನ್ನು ತೆಗೆದು ಬಾಲಕಿಗೆ ಕೊಡುತ್ತಾರೆ. ಬಾಲಕಿಯ ಮುಖ ಖುಷಿಯಿಂದ ಅರಳುತ್ತದೆ. ಮತ್ತೆರೆಡು ನೋಟುಗಳನ್ನು ಬಾಲಕಿಗೆ ಕೊಟ್ಟಾಗ ಅವಳ ಮುಖದಲ್ಲಿ ಸಂತಸ ಎದ್ದು ಕಾಣುತ್ತದೆ.

ಇದನ್ನೂ ಓದಿ: Viral Video | ಇದರಲ್ಲಿ ಬಾಳೆ ಹಣ್ಣು ಯಾವುದು? ಪಕ್ಕದಲ್ಲಿರುವುದು ಏನು?-ಹಣ್ಣಿನ ರುಚಿ ಕೆಡಿಸುವ ವಿಡಿಯೊ ಇದು!

ಕೈ ತುಂಬ ಹಣ ಹಿಡಿದ ಬಾಲಕಿ ನಜೀರಾಗೆ ಬೈ ಹೇಳಿ ಕುಣಿಯುತ್ತಾ ರಸ್ತೆ ದಾಟುತ್ತಾಳೆ. ಈ ಎಲ್ಲ ದೃಶ್ಯವನ್ನೊಳಗೊಂಡ ವಿಡಿಯೊವನ್ನು ನಜೀರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜ.11ರಂದು ಹಂಚಿಕೊಂಡಿರುವ ಈ ವಿಡಿಯೊವನ್ನು 1.8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮಗು ಮುಗ್ಧವಾಗಿದೆ. ಆ ಮಗು ಆದಷ್ಟು ಬೇಗ ತಾಲಿಬಾನಿಗರ ಆಕ್ರಮಣದಿಂದ ಮುಕ್ತವಾಗುವಂತಾಗಲಿ” ಎಂದು ನೆಟ್ಟಿಗರು ಶುಭ ಹಾರೈಸಲಾರಂಭಿಸಿದ್ದಾರೆ.

Exit mobile version