ಲಕ್ನೋ: ಹಾವು ಕಂಡರೆ ಮಾರು ದೂರ ಓಡುವವರೇ ಅಧಿಕ. ಅದು ವಿಷ ರಹಿತ ಹಾವಾದರೂ, ಕೇರೆ ಹಾವಾದರೂ ಸರಿ ಭಯದಿಂದ ದೂರವೇ ನಿಲ್ಲುತ್ತಾರೆ. ಆದರೆ ಇಲ್ಲೊಬ್ಬರು ಉರಗ ಪ್ರೇಮಿ ಒಂದಲ್ಲ ಎರಡಲ್ಲ ಬರೋಬ್ಬರಿ 11 ವಿವಿಧ ರೀತಿಯ ಹಾವುಗಳನ್ನು ಏಕಕಾಲಕ್ಕೆ ಹಿಡಿದು ರಕ್ಷಿಸಿದ್ದಾರೆ. ಅದೂ ಪಾಳುಬಿದ್ದ ಬಾವಿಯ ಒಳಗೆ ಇಳಿದು ಕಾರ್ಯಾಚರಣೆ ನಡೆಸಿದ್ದಾರೆ ಎನ್ನುವುದು ವಿಶೇಷ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video). ರಕ್ಷಿಸಿದ ಹಾವುಗಳ ಪೈಕಿ ನಾಗರ ಹಾವು, ವಿಷಕಾರಿ ಹಾವುಗಳೂ ಇದ್ದವು.
ಯಾರು ಈ ಸಾಹಸಿ?
ಉತ್ತರ ಪ್ರದೇಶದ ಜವುನ್‌ಪುರದ ಉರಗ ಪ್ರೇಮಿ, ಸಾಮಾಜಿಕ ಕಾರ್ಯಕರ್ತ ಮುರಾರಿ ಲಾಲ್ ಈ ಸಾಹಸ ಕೈಗೊಂಡ ವ್ಯಕ್ತಿ. ಬಿಹಾರದ ಹಳ್ಳಿಯೊಂದರ ಬಾವಿಯಲ್ಲಿ ಕಂಡುಬಂದ ಹಾವುಗಳನ್ನು ಮುರಾರಿ ಮತ್ತು ಅವರ ತಂಡ ಪಾರು ಮಾಡಿದೆ. ಮುರಾರಿ ಹಾವು ಹಿಡಿಯುವುದರಲ್ಲಿ ಎತ್ತಿದ ಕೈ. ಸಾವಿರಾರು ಹಾವುಗಳನ್ನು ಅವರು ಈಗಾಗಲೇ ರಕ್ಷಿಸಿದ್ದಾರೆ. ಅವರು ನಿಯಮಿತವಾಗಿ ತಮ್ಮ ರಕ್ಷಣಾ ಕಾರ್ಯಾಚರಣೆಗಳ ಫೋಟೋಗಳು ಮತ್ತು ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅವರು ಹಾವುಗಳಿಗೆ ಉತ್ತಮ ಆವಾಸಸ್ಥಾನ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಸದ್ಯ ಬಿಹಾರದಲ್ಲಿ ಅವರು ನಡೆಸಿದ ಹಾವು ಉಳಿಸುವ ಈ ಕಾರ್ಯಾಚರಣೆಯ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಪಾಳು ಬಾವಿಯಲ್ಲಿ ಹಾವುಗಳ ಗುಂಪೊಂದು ಅಸಹಾಯಕವಾಗಿ ಬಿದ್ದಿರುವುದನ್ನು ನೋಡಿದ ಬಿಹಾರದ ಗ್ರಾಮಸ್ಥರು ಮುರಾರಿ ಲಾಲ್ ಅವರನ್ನು ಸಂಪರ್ಕಿಸಿದರು. ವಿಡಿಯೊದ ಆರಂಭದಲ್ಲಿ ಬಾವಿಯು 100 ವರ್ಷ ಹಳೆಯದು ಮತ್ತು 10-15 ಅಡಿ ಆಳವಿದೆ ಎಂದು ಗ್ರಾಮಸ್ಥರು ಹೇಳುವುದು ದಾಖಲಾಗಿದೆ. ಮುರಳಿ ಲಾಲ್ ಏಣಿ ಮತ್ತು ಹಗ್ಗದ ಸಹಾಯದಿಂದ ಬಾವಿಯೊಳಗೆ ಇಳಿಯುತ್ತಾರೆ. ಅವರು ಬಾವಿಯ ತಳವನ್ನು ತಲುಪಿದ ನಂತರ ಸರಾಗವಾಗಿ ಹಾವುಗಳನ್ನು ಹಿಡಿದು ಚೀಲಕ್ಕೆ ತುಂಬಿಸುತ್ತಾರೆ. ಅವರು ಒಟ್ಟು 11 ಹಾವುಗಳನ್ನು ಹಿಡಿಯುತ್ತಾರೆ. ಈ ಪೈಕಿ ಎರಡು ಹಾವುಗಳು ಸ್ವಲ್ಪ ಅಡಚಣೆಯನ್ನುಂಟು ಮಾಡಿದವು. ಕೊನೆಗೂ ಅವುಗಳನ್ನು ನಿಯಂತ್ರಿಸುವಲ್ಲಿ ಮುರಾರಿ ಯಶಸ್ವಿಯಾದರು.
ಇದನ್ನೂ ಓದಿ: Viral Video: ಅರೆಬರೆ ಬಟ್ಟೆಯಲ್ಲೇ ರೈಲಿನಲ್ಲಿ ಡ್ಯಾನ್ಸ್ ಮಾಡಿದ ಯುವತಿ; ಛೀಮಾರಿ ಹಾಕಿದ ಜನ
ಸರ್ಕಾರಕ್ಕೆ ಮನವಿ
ಮುರಾರಿ ಎಲ್ಲ ಹಾವುಗಳನ್ನು ತಮ್ಮ ಚೀಲದಲ್ಲಿ ಪ್ಯಾಕ್ ಮಾಡಿ ಸುರಕ್ಷಿತವಾಗಿ ಬಾವಿಯಿಂದ ಹೊರಬಂದರು. ಬಳಿಕ ಹಾವುಗಳನ್ನು ದೂರದ ಕಾಡಿನಲ್ಲಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ ಚಿಕಿತ್ಸೆ ಒದಗಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದರಿಂದ ಹಾವಿನ ಕಡಿತಕ್ಕೆ ಒಳಗಾಗಿ ಮರಣ ಹೊಂದುವವರ ಸಂಖ್ಯೆಯನ್ನು ತಗ್ಗಿಸಬಹುದು ಎನ್ನುವುದು ಅವರ ಅಭಿಪ್ರಾಯ. ಕಾರ್ಯಾಚರಣೆ ವೇಳೆ ಅವರು ಬಾವಿಯೊಳಗೆ ಅನೇಕ ಸತ್ತ ಹಾವುಗಳನ್ನು ಗುರುತಿಸಿರುವುದಾಗಿ ತಿಳಿಸಿದ್ದಾರೆ.
ರೋಮಾಂಚನಕಾರಿ ವಿಡಿಯೊ
ಮುರಾರಿ ಬಾವಿಯ ತಳದಲ್ಲಿ ಹಾವುಗಳನ್ನು ಹಿಡಿಯುವ ರೀತಿ ನೋಡಿ ಹಲವರು ರೋಮಾಂಚಿತರಾಗಿದ್ದಾರೆ. ಅವರ ಕೌಶಲತೆಗೆ, ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮುರಾರಿ ನಿಸ್ವಾರ್ಥದಿಂದ ಈ ಕಾರ್ಯವನ್ನು ಮಾಡುತ್ತಿದ್ದು, ಅವರು ಮತ್ತು ತಂಡಕ್ಕೆ ಅಭಿನಂದನೆಗಳು ಎಂದು ಹಲವರು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ