ʻಎಲೈ ಮನುಜರೇ, ನೀವು ಮಾತ್ರ ಅಂಗಡಿ ಇಟ್ಕೊಂಡ್ರೆ ಸಾಕಾ? ನೀವು ಮಾತ್ರ ಅಂಗಡಿಯೊಳಕ್ಕೆ ನುಗ್ಗಿ, ಬೇಕುಬೇಕಾದ್ದು ತಿಂದರೆ ಸಾಕಾ? ನಮಗೂ ಬೇಕುʼ ಅಂತ ಒಂದು ಕರಡಿ ಹೇಳಿತಂತೆ!
ಇದು ಯಾವ ಪಂಚತಂತ್ರದ ಕತೆಯ ಭಾಗ ಎಂದುಕೊಳ್ಳಬೇಡಿ. ಕ್ಯಾಲಿಫೋರ್ನಿಯಾದ ಕರಡಿಯೊಂದರ ಕತೆ. ಈ ಕರಡಿಗೀಗ ಚಾಕೋಲೇಟ್ ಬಾರ್ ಬಹಳ ಇಷ್ಟವಾಗಿದೆಯಂತೆ. ಅದರ ರುಚಿ ಎಷ್ಟು ಹುಚ್ಚು ಹತ್ತಿಸಿದೆಯೆಂದರೆ ಪದೇ ಪದೇ ಅಂಗಡಿಗೆ ಬರಲು ಶುರು ಮಾಡಿದೆಯಂತೆ.
ಮಕ್ಕಳ ಕತೆಗಳಲ್ಲಿ, ಕಾರ್ಟೂನುಗಳಲ್ಲಿ ಕರಡಿ ಎಂಬ ಪ್ರಾಣಿ ಅತೀ ಹೆಚ್ಚು ಕಾಣಿಸಿಕೊಳ್ಳುವ ಪ್ರಾಣಿ. ಆಟಿಕೆಗಳ ರೂಪದಲ್ಲಿಯೂ ಕರಡಿ ಮಕ್ಕಳಿಗೆ ಬಲು ಪ್ರಿಯ. ಮಕ್ಕಳಾಟಿಕೆ ಮಾಡುವ, ಜೇನು ತಿನ್ನುವ, ಮುದ್ದುಮುದ್ದಾಗಿ ಕಾಣಿಸುವ ಕರಡಿ, ವಾಸ್ತವದಲ್ಲಿ ನಿಜಕ್ಕೂ ಅತ್ಯಂತ ಅಪಾಯಕಾರಿ ಪ್ರಾಣಿ ಕೂಡಾ. ಆದರೆ, ಇಂಥ ಕರಡಿ ನಿಜಕ್ಕೂ ಮುದ್ದುಮುದ್ದಾಗಿಯೇ ಮಕ್ಕಳಾಟಿಕೆ ಮಾಡಿದರೆ?!
ಹೌದು. ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ಕರಡಿಯೊಂದು ಚಾಕೋಲೇಟ್ ರುಚಿಯ ಹುಚ್ಚು ಹತ್ತಿಸಿಕೊಂಡಿದೆ. ಕರಡಿಯೊಂದು ಅಂಗಡಿಗಳಿರುವ ಪ್ರದೇಶಕ್ಕೆ ನುಗ್ಗಿ, ಅಂಗಡಿಯೊಳಕ್ಕೆ ಕಾಲಿಟ್ಟು ಎರಡು ಚಾಕೋಲೇಟ್ ಬಾರ್‌ಗಳನ್ನು ಎತ್ತಿಕೊಂಡು ಓಡುವ ದೃಶ್ಯವೀಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಒಲಿಂಪಿಕ್ ವ್ಯಾಲಿಯ ೭-ಇಲೆವೆನ್ ಎಂಬ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು ಇದ್ದಕ್ಕಿದ್ದಂತೆ ಕರಡಿಯೊಂದು ಅಂಗಡಿಯಿರುವ ಪ್ರದೇಶಕ್ಕೆ ನುಗ್ಗಿದ್ದು ಹಲವರಿಗೆ ನಡುಕ ಹುಟ್ಟಿಸಿದೆ.
ಈ ಅಂಗಡಿಯ ಕ್ಯಾಶಿಯರ್ ಆಗಿರುವ ಕ್ರಿಸ್ಟೋಫರ್ ಕಿನ್ಸನ್ ಪ್ರಕಾರ ಆತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಇದ್ದಕ್ಕಿದ್ದಂತೆ ಕಂದುಬಣ್ಣದ ಕರಡಿಯೊಂದು ಅಂಗಡಿಗೆ ನುಗ್ಗಿ ಚಾಕೋಲೇಟ್ ಎತ್ತಿಕೊಂಡು ಬಂದಷ್ಟೇ ವೇಗದಲ್ಲಿ ಓಡಿ ಹೋಗಿದೆ.
ಒಳಗೆ ಬಂದದ್ದೇ ತಡ, ಅಲ್ಲಿಲ್ಲಿ ಮೂಸಿ ನೋಡಿ, ಶೆಲ್ಫ್‌ನಲ್ಲಿ ಇಟ್ಟಿದ್ದ ಚಾಕೋಲೇಟನ್ನು ಎತ್ತಿಕೊಂಡು ಓಡಿದೆ. ಕರಡಿಯ ನಡೆಯನ್ನು ಗಮನಿಸಿದರೆ, ಅದಕ್ಕೆ ಚಾಕೋಲೇಟ್ ಮಾತ್ರವೇ ಬೇಕಿತು ಹಾಗೂ ಅದು ಬಂದಿದ್ದೇ ಚಾಕೋಲೇಟ್ ತಿನ್ನಲು ಎಂಬಂತೆಯೇ ಇದೆ. ಯಾಕೆಂದರೆ, ಅದು, ಬೇರೇನೂ ಹುಡುಕಲೂ ಇಲ್ಲ, ಕೈಗೆತ್ತಿಕೊಳ್ಳಲೂ ಇಲ್ಲ. ತನಗೆ ಬೇಕಿದ್ದ ವಸ್ತು ಕಂಡ ಕೂಡಲೇ ಅದನ್ನೆತ್ತಿಕೊಂಡು ಬಂದಷ್ಟೇ ವೇಗವಾಗಿ ಓಡಿ ಹೋಗಿದೆ. ರಾತ್ರಿಪಾಳಿಯಲ್ಲಿ ತೂಕಡಿಸುತ್ತಾ ಕೂತ ಕ್ಯಾಶಿಯರ್‌ಗೆ, ಈ ಅನಪೇಕ್ಷಿತ ಅತಿಥಿಯಿಂದ ನಿದ್ದೆಯೆಲ್ಲ ಹಾರಿ ಹೋಗಿ, ಒಮ್ಮೆ ಹೋದ ಜೀವ ವಾಪಾಸು ಬಂದಂತಾಗಿದೆ.
ಇದನ್ನೂ ಓದಿ | SCO Summit | ಪಾಕಿಸ್ತಾನ ಪ್ರಧಾನಿಗೆ ಹೆಡ್‌ಫೋನ್ ಪೇಚು, ವಿಡಿಯೋ ವೈರಲ್
ಕಿನ್ಸನ್ ಹೇಳುವಂತೆ, ಕರಡಿ ಎಷ್ಟು ದೈತ್ಯವಿತ್ತೆಂದರೆ ಭಯ ಹುಟ್ಟಿಸುವಂತಿತ್ತು. ಒಂದಿಪ್ಪತ್ತು ಸೆಕೆಂಡು ನನಗೆ ನಿಜವಾಗಿ ಭಯವಾಗಿತ್ತು. ಆದರೆ, ಬಂದಷ್ಟೇ ವೇಗವಾಗಿ ಹೊರಟುಹೋಯಿತು. ಆಮೇಲೆ ನಾನು ಸಹಜ ಸ್ಥಿತಿಗೆ ಬಂದೆ. ಆದರೆ, ಸಿಸಿಟಿವಿ ಅದರ ನಿಜವಾದ ರೂಪಕ್ಕೆ ನ್ಯಾಯ ಕೊಟ್ಟಿಲ್ಲ. ವಿಡಿಯೋನಲ್ಲಿ ಕರಡಿ ಅದು ಇರುವುದಕ್ಕಿಂತ ಸಣ್ಣದಾಗಿ ಕಾಣಿಸುತ್ತಿದೆ ಎಂದಿದ್ದಾರೆ.
ಈ ಕರಡಿ, ಒಮ್ಮೆ ತೆಗೆದುಕೊಂಡು ಹೋದ ಚಾಕೋಲೇಟಿನಿಂದ ತೃಪ್ತಿ ಹೊಂದಿಲ್ಲ. ಮತ್ತೆ ಮತ್ತೆ ಚಾಕೋಲೇಟ್ ಹುಡುಕಿಕೊಂಡು ಬಂದು ಎತ್ತಿಕೊಂಡು ಹೋಗಿದೆ. ಹಾಗಾಗಿ, ರುಚಿ ಹತ್ತಿಸಿಕೊಂಡು ಪದೇ ಪದೇ ಬರುವ ಕರಡಿಯಿಂದ ರಕ್ಷಿಸಿಕೊಳ್ಳಲು, ಅಂಗಡಿಯ ಬಾಗಿಲುಗಳನ್ನು ಇನ್ನೂ ಭದ್ರಪಡಿಸುವ ಕೆಲಸ ಮಾಡಿದ್ದು, ಗ್ರಾಹಕರು ಭಯ ಬೀಳಬಾರದು ಎಂಬ ಮುಂಜಾಗ್ರತಾ ಕ್ರಮಗಳನ್ನು ಮಾಡಿಕೊಂಡಿದೆ.
ಒಂದೆರಡು ವರ್ಷದ ಹಿಂದೆ ಕೊರೋನಾ ಕಾಲಘಟ್ಟದಲ್ಲಿ, ಇದೇ ಪ್ರದೇಶದ ಆಸುಪಾಸಿನಲ್ಲಿ ಕರಡಿ ಅಂಗಡಿಯೊಂದಕ್ಕೆ ಹೀಗೇ ನುಗ್ಗಿ ಸ್ಯಾನಿಟೈಸರ್ ಎತ್ತಿಕೊಂಡು ಕರಡಿ ಓಟಕಿತ್ತಿತ್ತು. ಅದೂ ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕರಡಿಗೂ ಕೊರೋನಾ ಚಿಂತೆ, ಅದಕ್ಕೇ ಸ್ಯಾನಿಟೈಸರ್ ಎತ್ತಿಕೊಂಡು ಓಡಿದೆ ಎಂದು ಜನರು ನಗೆಯಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ | Bear attack | ರೈತನ ಮೇಲೆ ಕರಡಿಗಳ ದಾಳಿ; ಪ್ರಾಣಾಪಾಯದಿಂದ ಪಾರು