ಬೆಂಗಳೂರು: ಮೃಗಾಲಯಗಳಿಗೆ ಹೋದಾಗ ಪ್ರವಾಸಿಗರು ಪ್ರಾಣಿಗಳ ಫೋಟೊ ತೆಗೆಯುವುದು ಸಾಮಾನ್ಯ. ಆದರೆ ಕೆಲವರು ಸಾಹಸ ಮಾಡಿಕೊಂಡು ಪ್ರಾಣಿಗಳೊಂದಿಗೆ ಸೆಲ್ಫಿಗಳನ್ನೂ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಸಾಹಸ ಮಾಡಲು ಹೋದ ಯುವತಿಯೊಬ್ಬಳು ಕೊನೆಗೆ ಪೇಚಾಡಿದ ಘಟನೆ ಇತ್ತೀಚೆಗೆ ನಡೆದಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News : 8 ವರ್ಷ ಅಣ್ಣ ಎಂದು ಕರೆದಳು, ಕೊನೆಗೆ ಅವನನ್ನೇ ಮದುವೆಯಾದಳು
ಯುವತಿಯೊಬ್ಬಳು ಮೃಗಾಲಯದಲ್ಲಿ ಪಂಜರದಲ್ಲಿ ಇರಿಸಲಾಗಿದ್ದ ಸಿಂಹಿಣಿಯನ್ನು ಕಂಡೊಡನೆ ಉತ್ಸುಕಳಾಗಿದ್ದಾಳೆ. ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಹುಮ್ಮಸ್ಸಿನಿಂದ ಆ ಪಂಜರದ ಎದುರು ಹೋಗಿ ಕುಳಿತುಕೊಳ್ಳುತ್ತಾಳೆ. ಆದರೆ ಆಕೆಯ ಹಿಂದೆ ಏನಿದೆ ಎನ್ನುವುದನ್ನು ಆಕೆ ಗಮನಿಸುವುದೇ ಇಲ್ಲ.
ಯುವತಿಯ ಹಿಂದೆ ಮತ್ತೊಂದು ಪಂಜರವಿದ್ದು, ಅದರಲ್ಲಿ ಕರಡಿಯೊಂದು ಇರುತ್ತದೆ. ಯುವತಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ನೋಡಿದ ಕರಡಿ ಸೀದಾ ಆಕೆಯ ಬಳಿ ಬಂದು ಆಕೆ ಹಾಕಿದ್ದ ಟಿ-ಶರ್ಟ್ ಅನ್ನು ಹಿಡಿದು ಎಳೆಯುತ್ತದೆ. ಗಾಬರಿಗೊಂಡ ಯುವತಿ ಮುಂದೆ ಬರಲು ಯತ್ನಿಸಿದರೂ ಬಿಡದೆ ಎಳೆಯಲಾರಂಭಿಸುತ್ತದೆ. ಆಗ ಯುವತಿಯನ್ನು ಕಾಪಾಡುವುದಕ್ಕೆಂದು ವ್ಯಕ್ತಿಯೊಬ್ಬರು ಬಂದು ಆಕೆಯ ಬಟ್ಟೆಯನ್ನು ಕರಡಿ ಕೈಯಿಂದ ಬಿಡಿಸುತ್ತಾರೆ. ಬದುಕಿದೆಯಾ ಬಡಜೀವ ಎನ್ನುವಂತೆ ಯುವತಿ ಅಲ್ಲಿಂದ ದೂರ ಬರುತ್ತಾಳೆ.
ಈ ದೃಶ್ಯಗಳಿರುವ ವಿಡಿಯೊವನ್ನು ಹಾರ್ಸೆಟ್ ಕೊಕುಲಮ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ನೋಡಿದ ನೆಟ್ಟಿಗರು ಯುವತಿಯ ಕಪಿಚೇಷ್ಟೆಗೆ ಬೈಯಲಾರಂಭಿಸಿದ್ದಾರೆ. “ಹುಟ್ಟಿದಾಗಿನಿಂದ ಬರೀ ನಾಯಿ, ಬೆಕ್ಕನ್ನು ಮಾತ್ರ ನೋಡುತ್ತ ಬೆಳೆಯುವ ಮನುಷ್ಯರಿಗೆ ಮೃಗಾಲಯ ನೋಡಿದಾಕ್ಷಣ ಮಂಗನ ಬುದ್ಧಿ ಬಂದುಬಿಡುತ್ತದೆ” ಎಂದು ಜನರು ಹೇಳಲಾರಂಭಿಸಿದ್ದಾರೆ. “ಈ ರೀತಿ ಪ್ರಾಣಿಗಳ ಜತೆ ಆಟವಾಡಲು ಹೋಗಬೇಡಿ” ಎಂದು ಅನೇಕರು ಬುದ್ಧಿ ಮಾತನ್ನೂ ಹೇಳುತ್ತಿದ್ದಾರೆ.