Site icon Vistara News

Viral Video: ಮದುಮಗಳು ಕಾರು ಬಿಟ್ಟು ಮೆಟ್ರೋ ಏರಿದ್ದೇಕೆ? ಈ ವಿಡಿಯೊ ನೋಡಿ

viral news

viral news

ಬೆಂಗಳೂರು: ಇತ್ತೀಚಿಗೆ ಪ್ರತಿ ದಿನ ಮೆಟ್ರೋ (Metro) ರೈಲು ಸೇವೆಗೆ ಸಂಬಂಧಿಸಿದ ಒಂದಲ್ಲ ಒಂದು ಸುದ್ದಿ ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಚಲಿಸುವ ರೈಲಿನಲ್ಲೇ ರೊಮ್ಯಾನ್ಸ್‌ ಮಾಡುವುದು, ಫೈಟ್‌ ನಡೆಯುವುದು, ಡ್ಯಾನ್ಸ್‌ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಕೆಲವೊಮ್ಮೆ ಅವಘಡವೂ ನಡೆಯುತ್ತದೆ. ಇವೆಲ್ಲವನ್ನೂ ಮೀರಿ ಹಲವು ಕುತೂಹಲಕಾರಿ ಘಟನೆಗಳೂ ನಡೆಯುತ್ತವೆ. ಅಂತಹದ್ದೊಂದು ಅಪರೂಪದ ಘಟನೆಗೆ ಬೆಂಗಳೂರು ನಮ್ಮ ಮೆಟ್ರೋ ಸಾಕ್ಷಿಯಾಗಿದೆ. ಸದ್ಯ ಈ ಕುರಿತಾದ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ (Viral Video). ಅಷ್ಟಕ್ಕೂ ಈ ವಿಡಿಯೊದಲ್ಲೇನಿದೆ ಎನ್ನುವುದನ್ನು ತಿಳಿದುಕೊಳ್ಳಲು ಮುಂದಕ್ಕೆ ಓದಿ.

ಬೆಂಗಳೂರಿನ ಟ್ರಾಫಿಕ್‌ ದಟ್ಟಣೆ ಕಡಿಮೆ ಮಾಡುವಲ್ಲಿ ನಮ್ಮ ಮೆಟ್ರೋ ಸೇವೆ ಮುಖ್ಯ ಪಾತ್ರ ವಹಿಸಿದೆ. ವಾಹನಗಳ ಜಂಜಾಟದಿಂದ ಬೇಸತ್ತು ಅನೇಕ ಮಂದಿ ಈಗ ಮೆಟ್ರೋ ಏರುತ್ತಾರೆ. ಅದೇ ರೀತಿ ಟ್ರಾಫಿಕ್‌ ಕಿರಿಕಿರಿಯಿಂದ ಬೇಸತ್ತ ವಧು ಮೆಟ್ರೋ ಏರಿ ಮದುವೆ ಮಂಟಪಕ್ಕೆ ತೆರಳಿದ ವಿಡಿಯೊ ಇದೀಗ ವೈರಲ್‌ ಆಗಿದೆ. ಸಾಮಾನ್ಯವಾಗಿ ವಧು-ವರರು ಮದುವೆ ಮಂಟಪಕ್ಕೆ ಕಾರಿನಲ್ಲಿ ತೆರಳುವುದು ವಾಡಿಕೆ. ಆದರೆ ಕೆಲವೊಮ್ಮೆ ಬೆಂಗಳೂರಿನ ಟ್ರಾಫಿಕ್‌ ಚಕ್ರವ್ಯೂಹದಲ್ಲಿ ಸಿಲುಕಿದರೆ ಮುಗಿದೇ ಹೋಯಿತು. ಗಂಟೆಗಟ್ಟಲೆ ಕಾದರೂ ನಾವಿರುವ ವಾಹನ ಒಂದಿಂಚೂ ಮುಂದೆ ಕದಲುವುದಿಲ್ಲ.

ವಿಡಿಯೊದಲ್ಲೇನಿದೆ?

ಟ್ರಾಫಿಕ್‌ ಜಾಲದಲ್ಲಿ ಸಿಲುಕಿ ಮದುವೆಯ ಶುಭ ಮುಹೂರ್ತ ಮೀರಿ ಹೋಗುವ ಚಿಂತೆಗೆ ಈ ವಧು ಸುಲಭ ಪರಿಹಾರ ಕಂಡುಕೊಂಡಿದ್ದಾಳೆ. ಅದಕ್ಕಾಗಿ ಸಾಂಪ್ರದಾಯಿಕ ವಾಹನ ಬಿಟ್ಟು ಮೆಟ್ರೋ ಏರಿ ಸಮಯಕ್ಕೆ ಸರಿಯಾಗಿ ಛತ್ರ ತಲುಪಿದ್ದಾಳೆ. ವಧು ತನ್ನ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಮೆಟ್ರೋದಲ್ಲಿ ಸಂಚರಿಸುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ಈ ದೃಶ್ಯವನ್ನು ಈಗಾಗಲೇ 19,000ಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ʼʼಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕುವ ಕಿರಿಕಿರಿಯನ್ನು ತಪ್ಪಿಸಲು ಈ ವಧು ಉತ್ತಮ ಮಾರ್ಗ ಕಂಡುಕೊಂಡಿದ್ದಾಳೆ. ಮುಹೂರ್ತದ ಮೊದಲು ಮದುವೆ ಮಂಟಪ ತಲುಪಲು ಆಕೆ ಕಾರು ಬಿಟ್ಟು ಮೆಟ್ರೋ ಏರಿದ್ದಾಳೆʼʼ ಎಂಬ ಕ್ಯಾಪ್ಶನ್‌ನೊಂದಿಗೆ ವಿಡಿಯೊ ಹಂಚಿಕೊಳ್ಳಲಾಗಿದೆ.

ನಟ್ಟಿಗರು ಏನಂದ್ರು?

ಸಹಜವಾಗಿ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದೆ. ಹಲವರು ತಮಾಷೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ʼʼಮೆಟ್ರೋವಾಲೆ ದುಲ್ಹಾನಿಯ ಲೇ ಜಾಯೇಂಗ ಚಿತ್ರ ಈಗ ಪ್ರದರ್ಶನವಾಗುತ್ತಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼವಧು ಪ್ರಾಯೋಗಿಕವಾಗಿ ಆಲೋಚನೆ ಮಾಡುತ್ತಾರೆ. ಅವರಿಗೆ ಒಳ್ಳೆಯದಾಗಲಿʼʼ ಎಂದು ಇನ್ನೊಬ್ಬರು ಹಾರೈಸಿದ್ದಾರೆ. ಮತ್ತೊಬ್ಬರು ಮೆಚ್ಚುಗೆ ಸೂಚಿಸಿ, ʼʼಆಕೆ ಖಂಡಿತವಾಗಿಯೂ ಜೀವನವನ್ನು ಧನಾತ್ಮಕವಾಗಿ ಎದುರಿಸುತ್ತಾಳೆ. ಆಕೆಯ ಈ ಮುಂದಾಲೋಚನೆ ಇದಕ್ಕೆ ಉತ್ತಮ ಉದಾಹರಣೆʼʼ ಎಂದಿದ್ದಾರೆ. ಒಟ್ಟಿನಲ್ಲಿ ಆಕೆಯ ಸಮಯೋಚಿತ ನಿರ್ಧಾರಕ್ಕೆ ನೆಟ್ಟಿಗರು ತಲೆದೂಗಿದ್ದಾರೆ.

ಇದನ್ನೂ ಓದಿ: Viral News: 1 ಟನ್ ಭಾರದ ಕಾರನ್ನು ಬಾಯಿಂದ ಎಳೆದ ಬ್ರೂಸ್ಲಿ ಅಭಿಮಾನಿ!

ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಮದುಮಗಳೊಬ್ಬಳು ಮದುವೆ ಮುಗಿಸಿ ಪರೀಕ್ಷೆ ಬರೆಯಲು ಆಗಮಿಸಿದ್ದು ಹಲವರ ಗಮನ ಸೆಳೆದಿತ್ತು. ಮದುವೆ ಉಡುಪಿನಲ್ಲೇ ಆಕೆ ಪರೀಕ್ಷೆ ಬರೆದಿದ್ದಳು. ʼʼಮದುವೆ ಜತೆಗೆ ಶಿಕ್ಷಣವೂ ನನಗೆ ಮುಖ್ಯ. ಅದಕ್ಕಾಗಿ ಪರೀಕ್ಷೆ ಬರೆಯಲು ಆಗಮಿಸಿದೆʼʼ ಎಂದು ಆಕೆ ಹೇಳಿದ್ದಳು. ಇದಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version