Site icon Vistara News

Viral Video: ಎಕ್ಸ್​ಪ್ರೆಸ್​ ರೈಲಿಗಿಂತಲೂ ವೇಗವಾಗಿ ಸಾಗಿದ ಆಟೋ! ವಿಡಿಯೊ ವೈರಲ್​

auto new

auto new

ಬೆಂಗಳೂರು: ನಗರಗಳ ಜೀವನಾಡಿ ಎಂದು ಆಟೋವನ್ನು ಕರೆಯಲಾಗುತ್ತದೆ. ಹಲವು ಬಾರಿ ಆಟೋ ಚಾಲಕರು ಆಪತ್ಬಾಂಧವರಂತೆ ನೆರವಾಗುತ್ತಾರೆ. ಅದಕ್ಕೆ ಪೂರಕವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಟೋ ಚಾಲಕರೊಬ್ಬರು ಸಮಯಕ್ಕೆ ರೈಲು ನಿಲ್ದಾಣಕ್ಕೆ ತಲುಪಿಸಿ ಬಹು ದೊಡ್ಡ ಬಿಕ್ಕಟಿನಿಂದ ಪಾರು ಮಾಡಿರುವ ಬಗ್ಗೆ ಆದಿಲ್‌ ಹುಸೈನ್‌ ಎನ್ನುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಅವರು ಸಂಚರಿಸುತ್ತಿರುವ ವಿಡಿಯೊವನ್ನು ಪೋಸ್ಟ್‌ ಮಾಡಿ ವಿವರಗಳನ್ನು ದಾಖಲಿಸಿದ್ದಾರೆ. ಆ ವಿಡಿಯೊ ಸದ್ಯ ವೈರಲ್‌ (Viral Video) ಆಗಿದೆ.

ಪೋಸ್ಟ್‌ನಲ್ಲಿ ಏನಿದೆ?

ಆದಿಲ್‌ ಹುಸೈನ್‌ ಸುದೀರ್ಘ ಬರಹದ ಮೂಲಕ ಅನುಭವವನ್ನು ದಾಖಲಿಸಿದ್ದಾರೆ. ಹೇಗೆ ಆಟೋ ಚಾಲಕ ನೆರವಾದ ಎನ್ನುವುದನ್ನು ವಿವರಿಸಿದ್ದಾರೆ. “ನಾನು ಎಸ್‌ಬಿಎಸ್‌ ರೈಲು ನಿಲ್ದಾಣದಿಂದ ಮಧ್ಯಾಹ್ನ 1.40ಕ್ಕೆ ಪ್ರಶಾಂತಿ ಎಕ್ಸ್‌ಪ್ರೆಸ್‌ ಹತ್ತಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನನಗೆ ಬೇಗ ಹೊರಡಲು ಸಾಧ್ಯವಾಗಲಿಲ್ಲ. ನಾನು ಮಾರತಹಳ್ಳಿಯಿಂದ ಹೊರಟಾಗ 12.50 ಆಗಿತ್ತು. ಅಲ್ಲಿಂದ ಎಸ್‌ಬಿಎಸ್‌ ರೈಲು ನಿಲ್ದಾಣಕ್ಕೆ 17 ಕಿ.ಮೀ. ದೂರ. ವಾಹನ ದಟ್ಟಣೆಯಿಂದಾಗಿ ನನಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ” ಎಂದು ಅವರು ರಸ್ತೆಯಲ್ಲಿ ವೇಗವಾಗಿ ಚಲಿಸುವ ರಿಕ್ಷಾದ ವಿಡಿಯೊ ಹಾಕಿ ವಿವರಿಸಿದ್ದಾರೆ.

ಮತ್ತೆ ಮುಂದುವರಿದು, ʼʼನಾನು ತಲುಪುವಷ್ಟರಲ್ಲಿ ರೈಲು ಹೊರಟು ಹೋಗಿತ್ತು. ‘ವೇರ್ ಈಸ್ ಮೈ ಟ್ರೈನ್’ ಅಪ್ಲಿಕೇಶನ್‌ ಮೂಲಕ ರೈಲು ಎಲ್ಲಿದೆ ಎಂದು ಪರಿಶೀಲಿಸಿ ಮುಂದಿನ ರೈಲು ನಿಲ್ದಾಣಕ್ಕೆ ಹೋಗಬೇಕು ಎಂದು ನಿರ್ಧರಿಸಿದೆ. 27 ಕಿ.ಮೀ. ದೂರದಲ್ಲಿರುವ ಯಲಹಂಕ ಜಂಕ್ಷನ್‌ ನಿಲ್ದಾಣವನ್ನು ತಲುಪಲು ಸಾಧ್ಯವೇ ಎನ್ನುವ ಚಿಂತೆ ಮೂಡಿತ್ತು. ಆಗ ಮುಂದೆ ಬಂದ ಆಟೋ ಚಾಲಕ ಸರಿಯಾದ ಸಮಯಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರುʼʼ.

ʼʼಆಗಲೇ 1.50 ಆಗಿತ್ತು. ರೈಲು 2.20ಕ್ಕೆ ಯಲಹಂಕ ನಿಲ್ದಾಣಕ್ಕೆ ತಲುಪಲಿತ್ತು. 25 ನಿಮಿಷಗಳಲ್ಲಿ ಅಲ್ಲಿಗೆ ತಲುಪಿಸಲಿರುವ ಸವಾಲು ಸ್ವೀಕರಿಸಿದ ಆಟೋ ಚಾಲಕ ನನ್ನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದʼʼ ಎಂದು ಹುಸೈನ್‌ ಹೇಳಿದ್ದಾರೆ. ಚಾಲಕ ಕೌಶಲ್ಯದಿಂದ, ಶಾರ್ಟ್ ಕಟ್‌ ದಾರಿಗಳ ಮೂಲಕ ಮುನ್ನುಗ್ಗಿದ. ಹೀಗೆ “ನಾವು ಆರಾಮವಾಗಿ 2. 15ಕ್ಕೆ ನಿಲ್ದಾಣವನ್ನು ತಲುಪಿದೆವು ಮತ್ತು ರೈಲು ತಲುಪಲು ಇನ್ನೂ 5 ನಿಮಿಷಗಳು ಇದ್ದವುʼʼ ಎಂದು ಹುಸೈನ್‌ ಹೇಳಿದ್ದಾರೆ.

ಸದ್ಯ ಈ ಪೋಸ್ಟ್‌ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸಮಯಕ್ಕೆ ಸರಿಯಾಗಿ ತಲುಪಿಸಿದ ಆಟೋ ಚಾಲಕನ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಈ ವೇಳೆ ಹುಸೈನ್‌ ಇನ್ನೊಂದು ಅಚ್ಚರಿಯ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ತಮ್ಮಂತಹ ಗ್ರಾಹಕರಿಂದಾಗಿ ಆಟೋ ಚಾಲಕರು ಹೇಗೆ ಉತ್ತಮ ಸಂಪಾದನೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ. ರೈಲಿಗೆ ತಡವಾಗಿ ಬರುವ ನನ್ನಂತಹ ಜನರಿಗಾಗಿ ಈ ಆಟೋ ಚಾಲಕ ಕಾಯುತ್ತಿರುತ್ತಾರೆ. ಮುಂದಿನ 20-25 ನಿಮಿಷಗಳಲ್ಲಿ ರೈಲು ನಿಲ್ದಾಣಕ್ಕೆ ತಲುಪಿಸಿ ಸುಮಾರು 2,500 ರೂ. ಗಳಿಸುತ್ತಾರೆ. ಹೀಗೆ ಅವರು ತಿಂಗಳಿಗೆ ಸುಮಾರು 75,000 ರೂ. ಗಳಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Video Viral: ವೇಗವಾಗಿ ಬರುತ್ತಿದ್ದ ಲಾರಿಗೆ ಆಟೋ ಡಿಕ್ಕಿ, ಗಾಳಿಯಲ್ಲಿ ಹಾರಿಬಿದ್ದ ಶಾಲಾ ಮಕ್ಕಳು!

Exit mobile version