ಪಾಟ್ನಾ: ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಸ್ ನಿಲ್ದಾಣವನ್ನೇ ಕಳ್ಳರು ಹೊತ್ತೊಯ್ದಿದ್ದರು. ಕೆಲವು ಕಡೆ ಮೊಬೈಲ್ ಟವರ್, ಉಕ್ಕಿನ ಸೇತುವೆಯನ್ನು ಕದೀಮರು ಕದ್ದ ಪ್ರಕರಣ ವರದಿಯಾಗಿದೆ. ಇದೀಗ ಬಿಹಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗ್ರಾಮಸ್ಥರು ರಸ್ತೆಯನ್ನೇ ದೋಚಿದ್ದಾರೆ! ರಸ್ತೆ ಕಾಮಗಾರಿಗೆ ಬಳಸಲಾದ ಕಾಂಕ್ರೀಟ್, ಮರಳು, ಸಿಮೆಂಟ್ ಮುಂತಾದ ವಸ್ತುಗಳನ್ನು ಸ್ಥಳೀಯರು ಮನೆಗೆ ಸಾಗಿಸುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದೆ (Viral Video).
ಎಲ್ಲಿದು ವಿಚಿತ್ರ ಪ್ರಕರಣ?
ಬಿಹಾರದ ಜೆಹಾನಾಬಾದ್ ಜಿಲ್ಲೆಯ ಔಡನ್ ಬಿಘಾ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಕ್ಕಳು, ಸ್ತ್ರೀಯರು ಸೇರಿದಂತೆ ಗ್ರಾಮಸ್ಥರು ಕಾಂಕ್ರೀಟ್, ಮರಳು ಮತ್ತು ಕಲ್ಲು ಸೇರಿದಂತೆ ವಿವಿಧ ನಿರ್ಮಾಣ ಸಾಮಗ್ರಿಗಳನ್ನು ಉತ್ಸಾಹದಿಂದ ಸಂಗ್ರಹಿಸಿ ಮನೆಗೆ ಸಾಗಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
बिहार में लोगों ने मुख्यमंत्री की सड़क ही लूट ली!
— Utkarsh Singh (@UtkarshSingh_) November 3, 2023
जहानाबाद के मखदूमपुर के औदान बीघा गांव में मुख्यमंत्री सड़क ग्राम योजना के तहत सड़क बनाई जा रही थी. दावा है कि ढलाई के समय लोग पूरा मटेरियल ही लूट ले गये. बताया जा रहा कि इससे पहले भी ये सड़क ऐसे ही लूट ली गई थी. (@AdiilOfficial) pic.twitter.com/ZCBiStXr5Y
ವರದಿಗಳ ಪ್ರಕಾರ, ಜಿಲ್ಲಾ ಕೇಂದ್ರದೊಂದಿಗೆ ಗ್ರಾಮವನ್ನು ಸಂಪರ್ಕಿಸುವ ಉದ್ದೇಶದಿಂದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ ಮುಖ್ಯಮಂತ್ರಿ ಗ್ರಾಮ ರಸ್ತೆ ಯೋಜನೆಯ ಭಾಗವಾಗಿ ರಸ್ತೆ ನಿರ್ಮಾಣವನ್ನು ಪ್ರಾರಂಭಿಸಲಾಯಿತು. ಆರ್‌ಜೆಡಿ ಶಾಸಕ ಸತೀಶ್ ಕುಮಾರ್ ಎರಡು ತಿಂಗಳ ಹಿಂದೆ ರಸ್ತೆಗೆ ಅಡಿಪಾಯ ಹಾಕಿದ್ದರು. ಆದರೆ ಇದೀಗ ಗ್ರಾಮಸ್ಥರು ಎಲ್ಲ ಸಾಮಗ್ರಿಗಳನ್ನು ದೋಚಿಕೊಂಡು ಹೋಗಿರುವುದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.
ಶಾಸಕ ಸತೀಶ್ ಕುಮಾರ್ ಏನು ಹೇಳುತ್ತಾರೆ?
ಘಟನೆ ಬಗ್ಗೆ ಸತೀಶ್ ಕುಮಾರ್ ಪ್ರತಿಕ್ರಿಯಿಸಿ, “ನಾವು ಸುಮಾರು ಎರಡು ತಿಂಗಳ ಹಿಂದೆ ಈ ರಸ್ತೆ ಕಾಮಗಾರಿಗೆ ಅಡಿಪಾಯ ಹಾಕಿದ್ದೆವು. ಅದರಂತೆ ಕೆಲಸ ನಡೆಯುತ್ತಿದೆ. ಗುತ್ತಿಗೆದಾರರು ಭಾಗಶಃ ಕೆಲವನ್ನು ಪೂರ್ಣಗೊಳಿಸಿದ್ದರು. ಆದರೆ ಇದೀಗ ರಸ್ತೆಯ ನಿರ್ಮಾಣ ಸಾಮಗ್ರಿಗಳನ್ನು ಕೆಲವು ಗ್ರಾಮಸ್ಥರು ಕದ್ದಿದ್ದು, ಕೆಲಸ ಸ್ಥಗಿತಗೊಂಡಿದೆʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಖ್ದುಮ್ಪುರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ನೆಟ್ಟಿಗರು ಏನಂದ್ರು?
ಈ ವಿಡಿಯೊವನ್ನು ಈಗಾಗಲೇ 1 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಘಟನೆ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ ಮತ್ತು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ʼʼನನ್ನ ಬಿಹಾರ ಎಂದಿಗೂ ಬದಲಾಗುವುದಿಲ್ಲ. ಗ್ರಾಮಸ್ಥರ ಅನುಕೂಲಕ್ಕಾಗಿ ಸರ್ಕಾರ ರಸ್ತೆ ನಿರ್ಮಿಸಲು ಮುಂದಾಯಿತು. ಆದರೆ ಗ್ರಾಮಸ್ಥರು ನಿರ್ಮಾಣ ಸಾಮಗ್ರಿಯನ್ನು ಕದ್ದೊಯ್ದಿದ್ದಾರೆ. ನಾಚಿಗೆಗೇಡುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದು ಬಿಹಾರದಲ್ಲಿ ಮಾತ್ರ ನಡೆಯಲು ಸಾಧ್ಯʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಸರ್ಕಾರ ಬಡತನವನ್ನು ನಿರ್ಮೂಲನೆ ಮಾಡಲು ವಿಫಲವಾಗಿದ್ದರ ಉದಾಹರಣೆ ಇದುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼಬಿಹಾರದಲ್ಲಿ ತಾಂಡವವಾಡುತ್ತಿರುವ ಬಡತನವನ್ನು ಇದು ತೋರಿಸುತ್ತದೆʼʼ ಎಂದಿದ್ದಾರೆ ಮಗದೊಬ್ಬರು. ಒಟ್ಟಿನಲ್ಲಿ ಗ್ರಾಮಸ್ಥರ ನಡೆ ಚರ್ಚೆ ಹುಟ್ಟು ಹಾಕಿದ್ದಂತೂ ಸತ್ಯ.
ಇದನ್ನೂ ಓದಿ: Viral Video: ಪಾಸ್‌ಪೋರ್ಟ್‌ಅನ್ನು ಹೀಗೂ ಬಳಸಬಹುದು ಎಂದು ತೋರಿಸಿದ ವ್ಯಕ್ತಿಗೆ ನೊಬೆಲ್ ಸಿಗಲಿ ಎಂದ ನೆಟ್ಟಿಗರು
ಮೊದಲ ಸಲವಲ್ಲ
ಈ ರೀತಿಯ ಘಟನೆ ಬಿಹಾರದಲ್ಲಿ ನಡೆಯುತ್ತಿರುವುದು ಇದು ಮೊದಲ ಸಲವಲ್ಲ. ಈ ಹಿಂದೆ ಕೆಲವರು ರೈಲು ಹಳಿಯನ್ನೇ ದೋಚಿದ್ದರು. ಬಿಹಾರದ ಸಮಸ್ತಿಪುರದಲ್ಲಿ ಕಳ್ಳರು ಸುಮಾರು ಎರಡು ಕಿ.ಮೀ. ಉದ್ದದ ರೈಲು ಹಳಿಯನ್ನು ಕದ್ದಿದ್ದರು. ಈ ವರ್ಷದ ಜನವರಿಯಲ್ಲಿ ಈ ವಿಲಕ್ಷಣ ಕಳ್ಳತನ ಬೆಳಕಿಗೆ ಬಂದಿತ್ತು. ಸಾರ್ವಜನಿಕರ ಅನುಕೂಲಕ್ಕೆ ಸರ್ಕಾರ ಜಾರಿಗೆ ತರುವ ಯೋಜನೆಯನ್ನು ದುರುಪಯೋಗ ಪಡಿಸಿದರೆ ಏನು ಮಾಡಲೂ ಸಾಧ್ಯವಿಲ್ಲ ಎಂದು ಅನೇಕರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ