ಬೆಂಗಳೂರು: ಮಕ್ಕಳೇ ದೇವರು ಎನ್ನುವ ಮಾತಿದೆ. ಈ ವಿಡಿಯೊ ನೋಡಿದ ಮೇಲೆ ಆ ಮಾತು ನಿಜವೆಂದು ಹೇಳಬಹುದು. ಬಲೆಯಲ್ಲಿ ಸಿಕ್ಕಿಬಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಗೆಯನ್ನು ಪುಟಾಣಿ ಬಾಲಕನೊಬ್ಬ ರಕ್ಷಿಸಿದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News : 75 ವರ್ಷದ ವೃದ್ಧನ ಕಿಡ್ನಿಯಿಂದ 300 ಕಲ್ಲುಗಳನ್ನು ತೆಗೆದ ವೈದ್ಯರು!
ಕಾಗೆಯೊಂದು ಬಲೆಯೊಳಗೆ ಸಿಕ್ಕಿಬಿದ್ದಿರುತ್ತದೆ. ಅದನ್ನು ಹಿಡಿದುಕೊಂಡ ಶಾಲೆಯ ವಿದ್ಯಾರ್ಥಿ, ನಿಧಾನವಾಗಿ ಬಲೆಯಿಂದ ಕಾಗೆಯನ್ನು ಬಿಡಿಸಲಾರಂಭಿಸುತ್ತಾನೆ. ಪೂರ್ತಿಯಾಗಿ ಬಿಡಿಸಿದ ನಂತರ ಅದನ್ನು ಎರಡೂ ಕೈಗಳಲ್ಲಿ ಹಿಡಿದುಕೊಳ್ಳುತ್ತಾನೆ. ಅಲ್ಲೇ ಇದ್ದ ಆತನ ಸ್ನೇಹಿತರು ಖುಷಿಯಿಂದ ಬಂದು ಕಾಗೆಯ ಮೈಯನ್ನು ಸವರುತ್ತಾರೆ. ನಂತರ ಬಾಲಕ ಆ ಕಾಗೆಯನ್ನು ಸ್ವತಂತ್ರವಾಗಿ ಹಾರಲು ಬಿಡುತ್ತಾನೆ. ಕಾಗೆ ಒಮ್ಮೆಲೆ ಹಾರಿ ಹೋದ ತಕ್ಷಣ, ಎಲ್ಲ ಮಕ್ಕಳು ಅದರ ಹಿಂದೆಯೇ ಖುಷಿಯಿಂದ ಕುಣಿಯುತ್ತ ಸಾಗುತ್ತಾರೆ.
ಈ ರೀತಿಯ ದೃಶ್ಯಗಳಿರುವ ವಿಡಿಯೊವನ್ನು ಸಬಿತಾ ಚಂದ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಎಲ್ಲಿನದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವಿಡಿಯೊ ನೋಡಿರುವ ನೆಟ್ಟಿಗರು ಹರ್ಷದಿಂದ ವಿಡಿಯೊ ಹಂಚಿಕೊಳ್ಳಲಾರಂಭಿಸಿದ್ದಾರೆ. “ದೇವತೆಗಳೆಂದರೆ ಇವರೇ ನೋಡಿ” ಎಂದು ವ್ಯಾಖ್ಯಾನಿಸಲಾರಂಭಿಸಿದ್ದಾರೆ. ವಿಡಿಯೊ ಸಾವಿರಾರು ಜನರಿಂದ ವೀಕ್ಷಣೆ ಮತ್ತು ಮೆಚ್ಚುಗೆ ಪಡೆದುಕೊಂಡಿದೆ.