Site icon Vistara News

Viral video: ಮದುಮಗಳ ತಲೆ ತುಂಬ ಚಾಕೋಲೇಟ್‌! ಇದು ಹೊಸ ಹೇರ್‌ಸ್ಟೈಲ್

viral chocolate decor

ಭಾರತದಲ್ಲಿ ಮದುವೆಗಳೆಂದರೆ ಜೀವಮಾನದ ಅದ್ದೂರಿ ಸಮಾರಂಭ. ಪ್ರತಿಯೊಬ್ಬರಿಗೂ ತಮ್ಮ ಮದುವೆ ತಮ್ಮ ಜೀವನದ ಅತ್ಯಂತ ಅಮೂಲ್ಯ ಕ್ಷಣವಾದ್ದರಿಂದ ಅದ್ಭುತವಾಗಿ ಕಾಣಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಅದು ಸಹಜ ಕೂಡಾ. ಹೀಗಾಗಿ ಮದುವೆಯ ಅಲಂಕಾರಕ್ಕಾಗಿ ನಡೆದಷ್ಟು ಪ್ರಯೋಗಗಳು ಬೇರೆ ಯಾವುದಕ್ಕೂ ನಡೆಯುವುದಿಲ್ಲ. ಪ್ರತಿಯೊಬ್ಬರೂ ಮದುವೆಯ ಡ್ರೆಸ್‌ನಿಂದ ಹಿಡಿದು ಹೇರ್‌ಸ್ಟೈಲ್‌ವರೆಗೆ ತಮ್ಮದು ಬೆಸ್ಟ್‌ ಆಗಿರಬೇಕೆಂದು ಬಯಸುವವರೇ. ಕೆಲವರು ಜನಮನ ಸೆಳೆಯಲು ಕೆಲವು ತಮಾಷೆಯ ಅಲಂಕಾರವನ್ನೂ ಮಾಡುವುದುಂಟು. ಎಲ್ಲಕ್ಕಿಂತ ಭಿನ್ನವಾಗಿ ಕಾಣಬೇಕೆಂಬ ಬಯಕೆಯಿಂದ ಹಲವರು ವಿನೂತನ ಪ್ರಯೋಗಗಳ ಮೊರೆ ಹೋಗುವುದುಂಟು. ಇಂಥ ಪ್ರಯೋಗಗಳು ಹಲವು ಬಾರಿ ಪತ್ರಿಕೆಗಳ ಪುಟದಲ್ಲಿ, ಜಾಲತಾಣಗಳಲ್ಲಿ ವೈರಲ್‌ ಆಗುವುದಿದೆ. ಇದೂ ಕೂಡಾ ಅಂಥದ್ದೇ ಒಂದು ಪ್ರಯೋಗ. ಇಲ್ಲಿ ವಧು ತಾನು ಎಲ್ಲರಿಗಿಂತ ಡಿಫರೆಂಟ್‌ ಆಗಿ ಕಾಣುವ ಹಂಬಲದಿಂದ ತನ್ನ ಕೂದಲ ಅಲಂಕಾರವನ್ನು ಸಾಮಾನ್ಯವಾಗಿ ಮಾಡುವ ಹೂಗಳಿಂದ ಮಾಡದೆ, ಚಾಕೋಲೇಟ್‌ಗಳಿಂದ ಮಾಡಿದ್ದಾಳೆ!

ಅರೆ, ಚಾಕೋಲೇಟಾ ಎಂದು ಬಾಯಲ್ಲಿ ಜೊಲ್ಲು ಸುರಿಸಬೇಡಿ. ಮೇಕಪ್‌ ಕಲಾವಿದೆ ಚಿತ್ರಾ ಎಂಬವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಇದರಲ್ಲಿ ಮದುಮಗಳ ಜಡೆ ತುಂಬಾ ಚಾಕೋಲೇಟ್‌ಗಳಿವೆ. ಕಿಟ್‌ ಕ್ಯಾಟ್‌, ೫ ಸ್ಟಾರ್‌, ಮಿಲ್ಕೀಬಾರ್‌, ಫೆರಾರೋಷಾ ಮತ್ತಿತರ ಚಾಕೋಲೇಟ್‌ಗಳೆಲ್ಲ ಮದುಮಗಳ ತಲೆ ಹತ್ತಿ ಚೆಂದಕ್ಕೆ ಕೂತಿವೆ. ಈಕೆ ಕಿವಿಗೆ ಮ್ಯಾಂಗೋ ಬೈಟ್‌ ಟಾಫಿಯನ್ನೇ ಕಿವಿಯೋಲೆಯಾಗಿ ಧರಿಸಿದ್ದು, ಹೆಸರು ಓದಿ ಈಕೆಯ ಕಿವಿ ಕಚ್ಚಲು ಬರದಿದ್ದರೆ ಸಾಕು ಎಂಬಂತಿದೆ. ಹಳದಿ ಬಣ್ಣದ ರ್ಯಾಪರ್‌ಗಳಿರುವ ಚಾಕೋಲೇಟ್‌ ಹಾಗೂ ಟಾಫಿಗಳನ್ನೇ ಅಲಂಕಾರಕ್ಕೆ ಬಳಸಿದ್ದು ಇದು ಈಕೆ ಉಟ್ಟ ಸೀರೆ ಸರಿಯಾಗಿ ಒಪ್ಪುವಂತಿದೆ.

ಇದನ್ನೂ ಓದಿ: Viral video: ಟ್ರೋಫಿ ಹಂಟಿಂಗ್‌: ಕೊಂದ ಸಿಂಹದ ಜೊತೆಗೆ ಫೊಟೋ ತೆಗೆವಾಗ ಇನ್ನೊಂದು ಸಿಂಹಕ್ಕೆ ಬಲಿ?

ಇಷ್ಟಕ್ಕೇ ಮುಗಿದಿಲ್ಲ. ಮುಂದಲೆಗೆ ಧರಿಸಿರುವ ಓಲೆಯೂ ಕೂಡಾ ಚಾಕೋಲೇಟೇ. ಜೊತೆಗೆ ನೆಕ್ಲೇಸ್‌ ಕೂಡಾ ಚಾಕೋಲೇಟೇ. ಈಕೆಯನ್ನು ನೋಡಿದ ಮಕ್ಕಳು ಖಂಡಿತಾ ನಾ ಮುಂದು ತಾಮುಂದು ಎಂದು ನಿಲ್ಲಬಹುದು, ಅಷ್ಟು ಚಾಕೋಲೇಟ್‌ಗಳು ಈಕೆಯ ಮೈತುಂಬ ಮಿನುಗುತ್ತಿವೆ.

ಈಕೆಯ ಈ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೀಕ್ಷಣೆ ಕಂಡಿದೆ. ಬಹುತೇಕರು ಈಕೆಗೆ ದಯವಿಟ್ಟು ಮಕ್ಕಳಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ. ಕೆಲವರು, ಈ ಅಪರೂಪದ ಕ್ರಿಯೇಟಿವಿಟಿ ಅದ್ಭುತವಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು, ಇತ್ತೀಚೆಗಿನ ದಿನಗಳಲ್ಲಿ ಮದುಮಗಳ ಹೇರ್‌ಸ್ಟೈಲ್‌ಗಳೇ ತಮಾಷೆಯ ಸಂಗತಿಗಳಾಗುತ್ತಿದೆ ಎಂದು ನಕ್ಕಿದ್ದಾರೆ. ಕೆಲವರು ಮದುಮಗಳ ಮೇಕಪ್‌ ಚೆನ್ನಾಗಿ ಮಾಡಿದ್ದರೂ, ಈ ಕೆಟ್ಟ ಚಾಕೋಲೇಟ್‌ ಆಯ್ಕೆಯಿಂದ ಎಲ್ಲವೂ ಹಾಳಾಯಿತು ಎಂದಿದ್ದಾರೆ. ಇನ್ನೊಬ್ಬರು, ಅಷ್ಟಕ್ಕೂ ಇದ್ಯಾಕೆ ಈ ಹೇರ್‌ಸ್ಟೈಲ್‌ ಎಂದೇ ಅರ್ಥವಾಗಲಿಲ್ಲ ಎಂದಿದ್ದಾರೆ. ಮತ್ತೊಬ್ಬರು, ಕಡೇಪಕ್ಷ ಮದುವೆ ಮುಗಿದ ಮೇಲೆ ಕೂತು ಎಲ್ಲರೂ ಹಂಚಿಕೊಂಡು ಚಾಕ್ಲೆಟ್‌ ತಿನ್ನಬಹುದು ಎಂದು ನಗೆಯಾಡಿದ್ದಾರೆ.

ಇದನ್ನೂ ಓದಿ: Viral News : ಮದುವೆಗೂ ಮೊದಲೇ ವಧುವಿನ ಕೋಣೆಗೆ ತೆರಳಿದ ವರ; ವಿವಾಹವನ್ನೇ ಮುರಿದುಕೊಂಡ ವಧು!

Exit mobile version