ಬೆಂಗಳೂರು: ಅಪರಿಚಿತರು ಮನೆಗೆ ಬರುವಾಗ ತಿಳಿಯಲಿ ಎಂಬ ಕಾರಣಕ್ಕೋ, ಕಳ್ಳಕಾಕರ, ಭಿಕ್ಷುಕರ ಹಾವಳಿಗೋ, ಅಥವಾ ಮನೆಯ ರಕ್ಷಣೆಗೋ ಜನರು ತಮ್ಮ ಮನೆಯ ಮುಂದೆ “ನಾಯಿಯಿದೆ ಎಚ್ಚರಿಕೆʼ ಎಂಬ ಬೋರ್ಡನ್ನು ಹಾಕಿಕೊಳ್ಳುವುದನ್ನು ನೋಡಿರುತ್ತೇವೆ. ಈ ಬೋರ್ಡು ಕಂಡರೆ, ಅಂಥ ಮನೆಯೊಳಗೆ ಹೋಗಲು ಒಮ್ಮೆ ಭಯವಾಗುವುದೂ ನಿಜ. ಗೇಟ್ ತೆರೆಯುತ್ತಿದ್ದಂತೆಯೇ ಎಲ್ಲಿಂದಲೋ ಬರುವ ನಾಯಿ ನಮ್ಮ ಮೈಮೇಲೆ ಹಾರಿ ಕಚ್ಚಿದರೆ ಎಂಬ ಅವ್ಯಕ್ತ ಭಯದಲ್ಲೇ ಕಳ್ಳ ಹೆಜ್ಜೆಯಿಡುತ್ತ ಸದ್ದಾಗದಂತೆ ಗೇಟು ತೆರೆಯುತ್ತೇವೆ. ಅಥವಾ ಮೊದಲೇ ಸೌಂಡು ಮಾಡಿ ನಾಯಿಯನ್ನು ಆಹ್ವಾನಿಸಿ, ಆಮೇಲೆ ಮನೆಯೊಡೆಯರು ನಾಯಿಯನ್ನು ಶಾಂತಗೊಳಿಸಿದ ಮೇಲೆಯೇ ಮನೆಯ ಗೇಟ್ ತೆಗೆದು ಮುಂದಡಿಯಿಡುತ್ತೇವೆ. ಇದು ಸಾಮಾನ್ಯ ರೂಢಿ. ಆದರೆ, ನಾಯಿಯ ಜಾಗದಲ್ಲಿ ಈ ಕೆಲಸ ಮಾಡುವ ಬೇರೆ ಯಾವುದಾದರೂ ಪ್ರಾಣಿಯನ್ನು ಊಹಿಸಿದ್ದೀರಾ? ಇಲ್ಲ ಅಂದರೆ ಇಲ್ಲಿದೆ ನೋಡಿ (Viral Video).
ನಾಗರಹಾವು ಹೀಗೆ ಮನೆ ಬಾಗಿಲ ಬಳಿ ಕಾವಲು ಕೂತದ್ದು ಎಂದಾದರೂ ನೋಡಿದ್ದೀರಾ? ಅದನ್ನು ಈ ವಿಡಿಯೊದಲ್ಲಿ ನೋಡಬಹುದು. ಈ ಹಾವು ಮನೆಯ ಬಾಗಿಲ ಸಂದಿಯ ತೂತಿನಿಂದ ತಲೆ ಹೊರಗೆ ಹಾಕಿ ಕಾವಲು ಕೂತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಡೆ ತೆರೆದು ಕೂತಿರುವ ಈ ಹಾವು ಮನೆಯೊಳಗೆ ಬರಲು ಪ್ರಯತ್ನಿಸುವ ಯಾರಿಗೇ ಆದರೂ ಬೆಚ್ಚಿ ಬೀಳಿಸುತ್ತದೆ.
ಇದನ್ನೂ ಓದಿ | Katrina Kaif | ವಿಮಾನ ನಿಲ್ದಾಣದಲ್ಲಿ ಕತ್ರಿನಾ-ವಿಕ್ಕಿ ತಡೆದು ವಿಚಾರಣೆ ನಡೆಸಿದ ಭದ್ರತಾ ಸಿಬ್ಬಂದಿ: ವಿಡಿಯೊ ವೈರಲ್!
ಹಾವು ಹೀಗೆ ಹೆಡೆ ತೆರೆದು ಕೂತಿರುವ ಈ ವಿಡಿಯೋಗೆ ಬಹಳ ಸೇಫಾಗಿರುವ ಸೆಕ್ಯೂರಿಟಿ ಸಿಸ್ಟಂ ಎಂಬ ತಲೆಬರಹ ನೀಡಲಾಗಿದೆ! ಇದನ್ನು ವಿಡಿಯೊ ಮಾಡಿರುವ ವ್ಯಕ್ತಿಯ ಮೇಲೂ ಹಾವು ಹೆಡೆಯೆತ್ತಿ ಬುಸುಗುಟ್ಟಿ ದಾಳಿ ಮಾಡಲು ಪ್ರಯತ್ನಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೊ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಇದು ಯಾವ ದೇಶದ ವಿಡಿಯೋ ಇರಬಹುದು ಎಂಬುದನ್ನು ವಿಡಿಯೋ ವೀಕ್ಷಿಸಿದವರು ಇಲ್ಲಿನ ಪ್ರತಿಕ್ರಿಯೆಯ ವೇದಿಕೆಯಲ್ಲಿ ಚರ್ಚೆ ಮಾಡಿದ್ದಾರೆ.
ಕೆಲವರು, ನಮಗೇನಾದರೂ ಈ ಪರಿಸ್ಥಿತಿ ಎದುರಾಗಿದ್ದರೆ ಖಂಡಿತ ನನಗೆ ಹೃದಯಾಘಾತವಾಗುತ್ತಿತ್ತು ಎಂದಿದ್ದಾರೆ. ಇನ್ನು ಕೆಲವರು ಬಹುಶಃ ಇದು ಭಾರತದಲ್ಲಿ ಅಥವಾ ದಕ್ಷಿಣ ಭಾರತದಲ್ಲೋ, ಆಸ್ಟ್ರೇಲಿಯಾದಲ್ಲೋ ಇರಬಹುದು ಅನಿಸುತ್ತದೆ ಎಂದಿದ್ದಾರೆ.
ಇನ್ನೂ ಕೆಲವರು ಇಂತಹ ಸೆಕ್ಯೂರಿಟಿ ಸಿಸ್ಟಂ ಸ್ವಲ್ಪ ಜಾಸ್ತಿಯೇ ಆಯ್ತು. ಒದು ಕರೆಗಂಟೆ ಇದ್ದರೆ ಸಾಕಪ್ಪಾ ಎಂದಿದ್ದಾರೆ. ಹಲವರು ಇಂತಹ ಮನೆಯ ಸಹವಾಸ ನಮಗೆ ಬೇಡ ಎಂದಿದ್ದಾರೆ. ಇನ್ನೂ ಕೆಲವು ಮಂದಿ ಬೊಗಳುವ ನಾಯಿಗಳಿಗಿಂತ ಈ ಹಾವುಗಳೇ ಎಷ್ಟೋ ವಾಸಿ ಎಂದು ಕಮೆಂಟ್ ಮಾಡಿದ್ದಾರೆ! ಕಳೆದ ವರ್ಷವೂ ಇದೇ ವಿಡಿಯೊ ವೈರಲ್ ಆಗಿತ್ತು. ಇದೀಗ ಮತ್ತೆ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ | Tata Nano | ಟಾಟಾ ನ್ಯಾನೊ ಇವಿ ಕಾರು ಮಾರುಕಟ್ಟೆಗೆ ಇಳಿಯುತ್ತಿರುವುದು ನಿಜವೇ? ವೈರಲ್ ವಿಡಿಯೊದ ಸತ್ಯಾಂಶವೇನು?