ಬೆಂಗಳೂರು: ಇದು ತಂತ್ರಜ್ಞಾನದ ಯುಗ. ಮಾಮೂಲಿ ವಿಡಿಯೊ ಕಾಲವಲ್ಲ, ಡ್ರೋನ್ ವಿಡಿಯೊ ಕಾಲ. ದೂರದಲ್ಲಿರುವ ಪ್ರಾಣಿ ಪಕ್ಷಿಯನ್ನೂ ಡ್ರೋನ್ ಮೂಲಕವೇ ಸೆರೆ ಹಿಡಿಯುವ ಛಾಯಾಗ್ರಾಹಕರು ನಮ್ಮ ನಿಮ್ಮೆಲ್ಲರ ನಡುವೆಯೇ ಇದ್ದಾರೆ. ಇದೇ ರೀತಿ ನೀರಿನಲ್ಲಿದ್ದ ಮೊಸಳೆಯನ್ನು ಡ್ರೋನ್ ಕ್ಯಾಮರಾದಲ್ಲಿ ಚಿತ್ರೀಕರಿಸಲು ಹೋದ ಛಾಯಾಗ್ರಾಹಕನೊಬ್ಬ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಅಲ್ಲೇನಾಯಿತು ಎನ್ನುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video | ಕಾಮ್ ಡೌನ್ ಹಾಡಿಗೆ ಹೆಜ್ಜೆ ಹಾಕಿದ ಆಫ್ರಿಕಾದ ಮಕ್ಕಳು; ವೈರಲ್ ಆಯ್ತು ವಿಡಿಯೊ
ಡ್ರೋನ್ ಒಂದು ಕೆರೆಯ ಮೇಲ್ಭಾಗದಲ್ಲಿ ಹಾರಾಡುತ್ತಿರುತ್ತದೆ. ನೀರಿನಲ್ಲಿ ಮೊಸಳೆ ಕಂಡೊಡನೆ ಅದನ್ನು ಹತ್ತಿರದಿಂದ ಚಿತ್ರೀಕರಿಸುವ ಆಸೆಯೊಂದಿಗೆ ಛಾಯಾಗ್ರಾಹಕ ಆ ಡ್ರೋನ್ ಅನ್ನು ನೀರಿನ ಹತ್ತಿರಕ್ಕೆ ಇಳಿಸುತ್ತಾನೆ. ಡ್ರೋನ್ ಅನ್ನು ಗಮನಿಸುವ ಮೊಸಳೆ ಅದು ಯಾವುದೋ ಪ್ರಾಣಿ ಎಂದು ಭಾವಿಸಿ ಅದರತ್ತ ತನ್ನ ಬಾಯಿಯನ್ನು ತೆಗೆದುಕೊಂಡು ಹೋಗುತ್ತದೆ. ಮೊಸಳೆ ಸ್ವಲ್ಪ ಸ್ವಲ್ಪವಾಗಿಯೇ ಮೇಲೆ ಬರುತ್ತಿದ್ದಂತೆಯೇ ಛಾಯಾಗ್ರಾಹಕ ಡ್ರೋನ್ ಅನ್ನೂ ಮೇಲಕ್ಕೆತ್ತುತ್ತಾನೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ಆ ಮೊಸಳೆ ಹಾರಿ ಡ್ರೋನ್ ಅನ್ನು ತನ್ನ ಬಾಯಿಯೊಳಗೆ ಸೇರಿಸಿಕೊಂಡು ಬಿಡುತ್ತದೆ.
ಈ ದೃಶ್ಯವಿರುವ ವಿಡಿಯೊವನ್ನು ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಿಸರ್ಗವು ತಂತ್ರಜ್ಞಾನದ ಎದುರು ಯಾವಾಗಲೂ ವಿಜಯ ಸಾಧಿಸುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿ” ಎಂದು ಅವರು ವಿಡಿಯೊಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಬುಧವಾರ ಹಾಕಲಾಗಿರುವ ವಿಡಿಯೊ ಒಂದೇ ದಿನದಲ್ಲಿ 16 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಸಾವಿರಾರು ಮಂದಿಗೆ ವಿಡಿಯೊಗೆ ಲೈಕ್ ಕ್ಲಿಕ್ಕಿಸಿ, ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೊ ನೋಡಿರುವ ನೆಟ್ಟಿಗರು ಛಾಯಾಗ್ರಾಹಕನ ಬಗ್ಗೆ ಬೇಸರ ಹಾಗೂ ಕೋಪವನ್ನು ಹೊರಹಾಕಿದ್ದಾರೆ. “ಈ ರೀತಿ ಮಾಡುವುದರಿಂದ ಪ್ರಾಣಿಗಳ ಜೀವನಕ್ಕೆ ತೊಂದರೆಯುಂಟಾಗುತ್ತದೆ”, “ಡ್ರೋನ್ ತಿಂದಿರುವ ಆ ಮೊಸಳೆಯ ಕಥೆ ಏನಾಗಬೇಕು?”, “ಡ್ರೋನ್ ಕಳೆದುಕೊಂಡ ಛಾಯಾಗ್ರಾಹಕನ ಸ್ಥಿತಿ ಹೇಗಿರಬಹುದು?” ಹೀಗೆ ಹಲವಾರು ರೀತಿಯ ಚರ್ಚೆಗಳು ಆರಂಭವಾಗಿವೆ.
ಇದನ್ನೂ ಓದಿ: Viral Pic | ಸ್ವಿಗ್ಗಿ ಬ್ಯಾಗ್ ಹೆಗಲಿಗೇರಿಸಿ ಬುರ್ಖಾ ಧರಿಸಿದ ಮಹಿಳೆಯೀಗ ಇಂಟರ್ನೆಟ್ ಸೆನ್ಸೇಶನ್!
ಈ ಹಿಂದೆ 2021ರಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ತನ್ನ ಮೇಲೆ ಹಾರಾಡುತ್ತಿದ್ದ ಡ್ರೋನ್ ಅನ್ನು ಮೊಸಳೆ ಹಾರಿ ಹಿಡಿದಿತ್ತು. ಆ ರೀತಿ ಮೊಸಳೆಯು ಡ್ರೋನ್ ಅನ್ನು ಹಿಡಿದ ತಕ್ಷಣ ಡ್ರೋನ್ ಇಂದ ಹೊಗೆ ಬಂದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು.