Site icon Vistara News

Viral Video: ಕುದುರಿದ ಚಾಯ್‌ವಾಲಾ ಅದೃಷ್ಟ; ಲ್ಯಾಂಬೊರ್ಗಿನಿ ಬಂತು, ಬಾಲಿವುಡ್‌ ನಟಿ ಸಿಕ್ಳು; ಸಾಕಲ್ವ?!

dolly chalwala

dolly chalwala

ಮುಂಬೈ: ತಮ್ಮ ವಿಶೇಷ ವೇಷ ಭೂಷಣ, ಹೇರ್‌ ಸ್ಟೈಲ್‌, ವಿಶಿಷ್ಟ ರೀತಿಯಲ್ಲಿ ಚಹಾ ಮಾಡುವ ಶೈಲಿಯಿಂದಲೇ ಜನಪ್ರಿಯರಾಗಿರುವ ಮಹಾರಾಷ್ಟ್ರ ನಾಗಪುರದ ಡಾಲಿ ಚಾಯ್‌ವಾಲಾ (Dolly Chaiwalla) ಅವರಿಗೆ ಸದ್ಯ ಅದೃಷ್ಟ ಕೈ ಹಿಡಿದಿದೆ. ಕೆಲವು ದಿನಗಳ ಹಿಂದೆ ಮೈಕ್ರೋಸಾಫ್ಟ್‌ನ (Microsoft) ಸಹ-ಸಂಸ್ಥಾಪಕ, ಕೋಟ್ಯಧಿಪತಿ ಮತ್ತು ಸಮಾಜ ಸೇವಕ ಬಿಲ್ ಗೇಟ್ಸ್ (Bill Gates) ಇವರ ಬೀದಿ ಬದಿಯ ಅಂಗಡಿಗೆ ಆಗಮಿಸಿ ಚಹಾ ಸವಿದ ವಿಡಿಯೊ ವೈರಲ್‌ (Viral Video) ಆಗಿತ್ತು. ಇದೀಗ ಡಾಲಿ ಅವರು ಲ್ಯಾಂಬೊರ್ಗಿನಿ (Lamborghini) ಕಾರಿನಲ್ಲಿ ತೆರಳುವ, ಅವರ ಅಂಗಡಿಗೆ ಬಾಲಿವುಡ್‌ ಜನಪ್ರಿಯ ನಟಿ ನಿಮೃತ್‌ ಕೌರ್‌ (Nimrat kaur) ಆಗಮಿಸುವ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಲ್ಯಾಂಬೊರ್ಗಿನಿ ಕಾರು ಬಂತು, ಬಾಲಿವುಡ್‌ ನಟಿಯೂ ಭೇಟಿಯಾದ್ರು. ಇನ್ನೇನು ಬೇಕು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಡಾಲಿ ಚಹಾ ಮಾಡುವುದರಿಂದ ಹಿಡಿದು ಅದನ್ನು ವಿತರಿಸುವವರೆಗೆ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರ ಅಂಗಡಿಗೆ ಫುಡ್‌ ವ್ಲಾಗರ್‌ಗಳು ಆಗಮಿಸಿದ ವಿಡಿಯೊ ಮಾಡುತ್ತಿರುತ್ತಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿರುವ ವಿಡಿಯೊದಲ್ಲಿ ಡಾಲಿ ಐಷಾರಾಮಿ ಕಾರು ಲ್ಯಾಂಬೊರ್ಗಿನಿ ಮುಂದೆ ನಿಂತು ಫೋಸು ನೀಡುವುದು, ಕರನ್ಸಿ ಕಟ್ಟನ್ನು ಬೀಸುವ ದೃಶ್ಯ ಕಂಡು ಬಂದಿದೆ. ಕಾರು ನೋಡಿದ ನೆಟ್ಟಿಗರು ಡಾಲಿ ಅದೃಷ್ಟಕ್ಕೆ ಬೆರಗಾಗಿದ್ದಾರೆ.

ನಿಮೃತ್‌ ಕೌರ್‌ ಭೇಟಿ

ಇದರ ಜತೆಗೆ ಬಾಲಿವುಡ್‌ನ ಜನಪ್ರಿಯ ನಟಿ ನಿಮೃತ್‌ ಕೌರ್‌ ಅವರು ಡಾಲಿ ಅವರ ಚಹಾದಂಗಡಿಗೆ ಭೇಟಿ ನೀಡುವ ವಿಡಿಯೊ ಕೂಡ ನೆಟ್ಟಿಗರ ಗಮನ ಸೆಳೆದಿದೆ. ತಮ್ಮ ತಂಡದ ಜತೆಗೆ ನಟಿ ಡಾಲಿ ಅವರ ಚಹಾ ಅಂಗಡಿಗೆ ಆಗಮಿಸುತ್ತಾರೆ. ಆಗ ಡಾಲಿ ತಮ್ಮದೇ ಶೈಲಿಯಲ್ಲಿ ಚಹಾ ತಯಾರಿಸಿ ಕಪ್‌ ಅನ್ನು ವಿಶಿಷ್ಟವಾಗಿ ನಿಮೃತ್‌ ಕೌರ್‌ ಮುಂದೆ ಹಿಡಿಯುತ್ತಾರೆ. ಆರಂಭದಲ್ಲಿ ಬೆಚ್ಚಿಬಿದ್ದ ಅವರು ಬಳಿಕ ಚೇತರಿಸಿಕೊಂಡು ಚಹಾ ಹೀರುತ್ತಾರೆ. ನಂತರ ಡಾಲಿ ಬಳಿ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಡಾಲಿ ಕೂಡ ನಿಮೃತ್‌ ಕೌರ್‌ ಅವರ ಮುಂದಿನ ಚಿತ್ರಕ್ಕೆ ಶುಭ ಹಾರೈಸುತ್ತಾರೆ.

ಯಾರು ಈ ಡಾಲಿ ಚಾಯ್‌ವಾಲಾ ?

ಮಹಾರಾಷ್ಟ್ರ ನಾಗಪುರದ ಸರ್ದಾರ್‌ ಏರಿಯಾದ ಹಳೆ ವಿಸಿಎ ಮೈದಾನ (Old VCA stadium)ದ ಬಳಿ ಬೀದಿ ಬದಿಯ ಚಹಾ ಗಾಡಿ ಇಟ್ಟುಕೊಂಡಿರುವ ಡಾಲಿ ಚಾಯ್‌ವಾಲಾ ತಮ್ಮ ವಿಶಿಷ್ಟ ಶೈಲಿಯ ಚಹಾ ತಯಾರಿಯ ಮೂಲಕವೇ ಜನಪ್ರಿಯರಾಗಿದ್ದಾರೆ. ಅವರ ನಿಜ ಹೆಸರು ಯಾರಿಗೂ ತಿಳಿದಿಲ್ಲ. ಆದರೆ ಅವರ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಲಕ್ಷಗಟ್ಟಲೆ ಮಂದಿ ವೀಕ್ಷಿಸುತ್ತಾರೆ. ತಮ್ಮದೇ ಅನನ್ಯ ಶೈಲಿಯಲ್ಲಿ ಚಹಾ ಮಾಡುವ ವಿಡಿಯೊಗಳನ್ನು ಅವರು ಆಗಾಗ ಅಪ್‌ಲೋಡ್‌ ಮಾಡುತ್ತಿರುತ್ತಾರೆ. ಚಹಾ ಮಾತ್ರವಲ್ಲ ಡಾಲಿ ಚಾಯ್‌ವಾಲಾ ಅಂಗಡಿಯಲ್ಲಿ ಸಿಗರೇಟ್‌ ಕೂಡ ಲಭ್ಯ. ಹೀಗಾಗಿಯೇ ಅವರ ಅಂಗಡಿ ಮುಂದೆ ಯಾವಾಗಲೂ ಜನ ಸಂದಣಿ ಕಂಡು ಬರುತ್ತದೆ.

ಇದನ್ನೂ ಓದಿ: Viral Video: ʼಒನ್‌ ಚಾಯ್‌ ಪ್ಲೀಸ್…‌ʼ ಭಾರತದ ಬೀದಿ ಚಹಾ ಸವಿದ ಬಿಲ್‌ ಗೇಟ್ಸ್! ವಿಡಿಯೋ ವೈರಲ್

ಇತ್ತೀಚೆಗೆ ಡಾಲಿ ಚಾಯ್‌ವಾಲಾ ಅವರ ಜತೆ ಕಾಣಿಸಿಕೊಂಡು ಚಹಾ ಸವಿಯುವ ವಿಡಿಯೊವನ್ನು ಬಿಲ್‌ ಗೇಟ್ಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಅದಾದ ಬಳಿಕ ಡಾಲಿ ಚಾಯ್‌ವಾಲಾ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಬಿಲ್ ಗೇಟ್ಸ್ ಬಗ್ಗೆ ಡಾಲಿ ಚಾಯ್‌ವಾಲಾ ಅವರಿಗೆ ಗೊತ್ತೇ ಇರಲಿಲ್ಲವಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version