Site icon Vistara News

Viral Video: ಆನೆಗೆ ದಾರಿ ಬಿಟ್ಟು ಕೊಟ್ಟ ಬಸ್‌ ಡ್ರೈವರ್‌; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

viral video

viral video

ಬೆಂಗಳೂರು: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ. ಇವರಿಬ್ಬರ ನಡುವಿನ ಈ ವಿಶಿಷ್ಟ ಬಾಂಧವ್ಯ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಪರಿಣಾಮ ಬೀರುತ್ತದೆ. ಇತ್ತೀಚೆಗೆ ವನ್ಯ ಜೀವಿ ಮತ್ತು ಮಾನವರ ನಡುವಿನ ಸಂಘರ್ಷ ಹೆಚ್ಚುತ್ತಿದ್ದರೂ ಇದಕ್ಕೆ ವಿರುದ್ಧವಾಗಿ ಹಲವು ಬಾರಿ ಇಬ್ಬರೂ ಸ್ನೇಹ ಸಂಬಂಧದ ಕಾರಣದಿಂದ ಸುದ್ದಿಯಾಗುತ್ತಾರೆ. ಸದ್ಯ ಅಂತಹದ್ದೇ ವಿಡಿಯೊವೊಂದು ವೈರಲ್‌ (Viral Video) ಆಗಿದೆ. ಬಸ್‌ ಚಾಲಕ ಮತ್ತು ಕಾಡಾನೆ ನಡುವಿನ ವಿಶ್ವಾಸ, ನಂಬಿಕೆ, ಸ್ನೇಹ ಈ ವಿಡಿಯೊದಲ್ಲಿ ಸೆರೆಯಾಗಿದೆ. ಬಸ್‌ ಚಾಲಕ ಆನೆಯನ್ನು ಪ್ರೀತಿಯಿಂದ ಅಣ್ಣ ಎಂದು ಸಂಬೋಧಿಸಿರುವುದು ಗಮನ ಸೆಳೆದಿದೆ.

ವಿಡಿಯೊದಲ್ಲೇನಿದೆ?

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಈ ಹೃದಯಸ್ಪರ್ಶಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಚೆಕ್‌ ಪಾಯಿಂಟ್‌ ಬಳಿಗೆ ಬಸ್‌ ಆಗಮಿಸುವುದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಆಗ ಇದ್ದಕ್ಕಿದ್ದಂತೆ ಅಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗುತ್ತದೆ. ರಸ್ತೆಯ ಈ ಬದಿಯಿಂದ ಆಚೆ ಬದಿಗೆ ತೆರಳುವುದು ಅದರ ಉದ್ದೇಶ. ಆದರೆ ಇದರಿಂದ ಚಾಲಕ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗುವುದಿಲ್ಲ ಮತ್ತು ಬೆಚ್ಚಿ ಬೀಳುವುದಿಲ್ಲ. ಬದಲಾಗಿ ಪ್ರಯಾಣಿಕರನ್ನು ಸಮಾಧಾನ ಪಡಿಸುತ್ತಾನೆ. ಬಳಿಕ ಬಸ್‌ ಅನ್ನು ಸ್ವಲ್ವ ಸ್ವಲ್ಪವೇ ಹಿಂದಕ್ಕೆ ಚಲಾಯಿಸುತ್ತಾನೆ. ಬಳಿಕ ಬಸ್‌ ಬಳಿಯಿಂದ ಆನೆ ಸಮಾಧಾನದಿಂದ ಹಾದು ಹೋಗುತ್ತದೆ. ʼʼಬೈ ಅಣ್ಣ. ಟಾಟಾ ಬೈʼʼ ಎಂದು ಹೇಳಿ ಚಾಲಕ ಆನೆಯನ್ನು ಕಳುಹಿಸಿ ಕೊಡುತ್ತಾನೆ.

ʼʼಬಿಆರ್‌ಟಿ ಹುಲಿ ಮೀಸಲು ಪ್ರದೇಶದ ಪುಂಜನೂರು ವಲಯದ ತಮಿಳುನಾಡು-ಕರ್ನಾಟಕ ಗಡಿಯ ಕರಪಲ್ಲಂ ಚೆಕ್‌ಪೋಸ್ಟ್‌ನಲ್ಲಿ ಕಂಡು ಬಂದ ದೃಶ್ಯ ಇದು. ಪ್ರಯಾಣಿಕರಿಗೆ ಧೈರ್ಯ ತುಂಬುವ ಮತ್ತು ಆನೆಯನ್ನು ಅಣ್ಣ ಎಂದು ಕರೆಯುವ ‘ಮಿಸ್ಟರ್ ಕೂಲ್’ ಬಸ್ ಚಾಲಕ ಇವರು” ಎಂದು ಕ್ಯಾಪ್ಶನ್‌ನಲ್ಲಿ ಬರೆಯಲಾಗಿದೆ. ಅಪ್‌ಲೋಡ್‌ ಆದ ಕೆಲವೇ ತಾಸುಗಳಲ್ಲಿ ಈ ವಿಡಿಯೊವನ್ನು 31 ಸಾವಿರಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಈ ವಿಡಿಯೊ ವೀಕ್ಷಿಸಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವನ್ಯ ಜೀವಿಗಳಿಗೆ ನಾವು ಯಾವುದೇ ತೊಂದರೆ ಕೊಡದಿದ್ದರೆ ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ತಂಟೆಗೆ ಬರುವುದಿಲ್ಲ ಎಂದು ಹಲವರು ಹೇಳಿದ್ದಾರೆ. ಜತೆಗೆ ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. ʼʼವಾವ್‌. ಇದು ನಿಜವಾಗಿಯೂ ಮಾದರಿ ನಡೆ. ಕಾಡು ಪ್ರಾಣಿಗಳ ಮನಸ್ಥಿತಿಯನ್ನು ಈ ಚಾಲಕ ಅರ್ಥ ಮಾಡಿಕೊಂಡಿದ್ದಾನೆ. ಅದ್ಭುತʼʼ ಎಂದು ಒಬ್ಬರು ಡ್ರೈವರ್‌ಗೆ ಶಬ್ಬಾಸ್‌ಗಿರಿ ನೀಡಿದ್ದಾರೆ. ʼʼಹಾಥಿ ಮೇರೆ ಸಾಥಿʼʼ (ಆನೆ ನನ್ನ ಗೆಳೆಯ) ಎಂದು ಇನ್ನು ಕೆಲವರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Bandipur National Park: ಕಾಡಾನೆ ಬೆನ್ನಟ್ಟಿದ ಘಟನೆ; ಪ್ರವಾಸಿಗರಿಗೆ ಅಧಿಕಾರಿಯ ಸಲಹೆ ಇದು

ಕೆಲವು ದಿನಗಳ ಹಿಂದೆ ಬಂಡಿಪುರ ಹುಲಿ ಅಭಯಾರಣ್ಯದಲ್ಲಿ ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಕಾಡಾನೆ ಅಟ್ಟಿಸುತ್ತಿರುವ ವಿಡಿಯೊ ಇತ್ತೀಚೆಗೆ ಇಂಟರ್‌ ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ರಸ್ತೆ ಮಧ್ಯೆ ವಾಹನ ನಿಲ್ಲಿಸಬಾರದು ಎನ್ನುವ ನಿಯಮ ಮೀರಿ ಯುವಕರ ಗುಂಪೊಂದು ದುಸ್ಸಾಹಸಕ್ಕೆ ಕೈ ಹಾಕಿತ್ತು. ಕೆರಳಿದ್ದ ಕಾಡಾನೆಯೊಂದು ಅವರನ್ನು ಅಟ್ಟಿಕೊಂಡು ಬಂದಿತ್ತು. ಕೂದಲೆಳೆ ಅಂತರದಲ್ಲಿ ಅವರು ಅಂದು ಪಾರಾಗಿದ್ದರು. ವಿಡಿಯೊ ವೈರಲ್‌ ಆದ ಬಳಿಕ ಈ ಯುವಕರ ಗುಂಪನ್ನು ಅನೇಕರು ಟೀಕಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version