ಜೀವನೋತ್ಸಾಹ ಜೀವಂತವಾಗಿದ್ದರೆ, ನಮಗೆ ಎಷ್ಟೇ ವಯಸ್ಸಾಗಲಿ ನಾವು ಪ್ರತಿಕ್ಷಣವನ್ನೂ ಖುಷಿಯಿಂದ ಬದುಕುತ್ತೇವೆ. ‘ವೃದ್ಧಾಪ್ಯ ಬಂತು, ಇನ್ನೇನು?’ ಎಂಬ ಉದಾಸೀನ ಒಂದು ಕ್ಷಣವೂ ನಮ್ಮನ್ನು ಬಾಧಿಸದಂತೆ ಕಾಯುತ್ತದೆ ನಮ್ಮಲ್ಲಿರುವ ಜೀವನೋತ್ಸಾಹ. ಇಲ್ನೋಡಿ ಈ ಹಿರಿಯ ವ್ಯಕ್ತಿ ನಮ್ಮೆಲ್ಲರಿಗೂ ಮಾದರಿಯಾಗಬಲ್ಲರು. ಅವರಲ್ಲಿನ ಉತ್ಸಾಹ ನಮ್ಮಲ್ಲೂ ಹುರುಪು ತುಂಬಬಲ್ಲದು.
ಬಿಳಿಬಣ್ಣದ ಶರ್ಟ್ ತೊಟ್ಟು, ಅದೇ ಬಣ್ಣದ ತ್ರೀ ಫೋರ್ತ್ ಧರಿಸಿರುವ ವ್ಯಕ್ತಿಯ ತಲೆಕೂದಲೆಲ್ಲ ಬಿಳುಪಾಗಿದೆ. ಅವರು ತೀರ ವೃದ್ಧರು ಅಲ್ಲದೆ ಇದ್ದರೂ, ಹಿರಿಯ ನಾಗರಿಕರು ಎಂದು ಕರೆಸಿಕೊಳ್ಳುವಷ್ಟು ವಯಸ್ಸಾಗಿದೆ. ಅವರು ಸೈಕಲ್ ಓಡಿಸುವ ಪರಿ ನೋಡಿ, ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ. ಬೀಳುತ್ತಿರುವ ಮಳೆಯಲ್ಲಿ, ರಸ್ತೆಯಲ್ಲಿ ಅತ್ಯಂತ ವೇಗವಾಗಿ, ಕೆಲವು ಬಗೆಯ ಸ್ಟಂಟ್ಗಳನ್ನು ಮಾಡುತ್ತ, ಬ್ಯಾಲೆನ್ಸ್ ಮಾಡಿ ಸೈಕಲ್ ತುಳಿಯುತ್ತಿರುವ ದೃಶ್ಯ ಎಂಥವರಿಗೂ ಮುದಕೊಡುತ್ತದೆ. ಕೈ ಬಿಟ್ಟುಕೊಂಡು, ಕಾಲು ಮೇಲೆತ್ತಿಕೊಂಡು ವೇಗವಾಗಿ ಪೆಡಲ್ ತುಳಿಯುತ್ತಾರೆ. ಅದನ್ನು ನೋಡಿದರೆ, ಒಂದು ಕ್ಷಣ ‘ಅಬ್ಬಾ’ ಎಂಬ ಭಾವ ನಮ್ಮಲ್ಲಿ ಮೂಡದೆ ಇರದು. ಇಂಥ ಸಾಹಸಗಳು ರಸ್ತೆ ಮಧ್ಯೆ ಅಪಾಯಕಾರಿಯಾಗಿದ್ದರೂ, ಆ ವ್ಯಕ್ತಿ ಅದರಲ್ಲಿ ನುರಿತವರಂತೆ ಕಾಣುತ್ತದೆ.
Zindagi Gulzar Hai ಎಂಬ ಟ್ವಿಟರ್ ಅಕೌಂಟ್ನಲ್ಲಿ ವಿಡಿಯೊ ಶೇರ್ ಆಗಿದೆ. ಪ್ರತಿಕ್ಷಣವನ್ನೂ ಖುಷಿಯಿಂದ ಕಳಿಯಿರಿ ಎಂದು ಕ್ಯಾಪ್ಷನ್ ಬರೆಯಲಾಗಿದೆ. 50 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಈ ವಿಡಿಯೊ ಪಡೆದಿದೆ. ಹಲವರು ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ಜೀವನ ಅತ್ಯಂತ ಸುಂದರ ಎನ್ನಿಸುವುದು ಇಂಥ ದೃಶ್ಯಗಳನ್ನು ನೋಡಿದಾಗ’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ‘ನಿಜವಾದ ಸಂತೋಷ ಎಂದರೆ ಇದೇ’ ಎಂದು ಇನ್ನೊಬ್ಬರು ಹೇಳಿದ್ದಾರೆ. ಹೀಗೆ ವಿಡಿಯೊ ನೋಡಿದವರೆಲ್ಲ ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವ ಮೂಡಿತು ಎಂಬರ್ಥದ ಕಮೆಂಟ್ಗಳನ್ನೇ ಬರೆದಿದ್ದಾರೆ.
ಇದನ್ನೂ ಓದಿ: Viral video | 80 ವರ್ಷಗಳ ನಂತರ ಭೇಟಿಯಾದ ಗೆಳತಿಯರಿವರು!