Site icon Vistara News

Viral Video: ಪ್ರಾಣ ಒತ್ತೆ ಇಟ್ಟು ಮರಿ ಆನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು; ಕೊನೆಗೆ ತಾಯಿ ಆನೆ ಮಾಡಿದ್ದೇನು? ವಿಡಿಯೊ ನೋಡಿ

elephent

elephent

ಬೆಂಗಳೂರು: ಮಾನವರಂತೆ ಪ್ರಾಣಿಗಳು ಕೂಡ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಅದರಲ್ಲೂ ಆನೆಗಳು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆಯೇ ಇರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಈ ವಿಡಿಯೊ. ತನ್ನ ಕಂದಮ್ಮನನ್ನು ರಕ್ಷಿಸಿದ ಅರಣ್ಯಾಧಿಕಾರಿಗಳಿಗೆ ತಾಯಿ ಆನೆಯೊಂದು ಸೊಂಡಿಲೆತ್ತಿ ಕೃತಜ್ಞತೆ ಸೂಚಿಸಿದ ವಿಡಿಯೊ ಇದಾಗಿದ್ದು, ಸದ್ಯ ವೈರಲ್‌ ಆಗಿದೆ (Viral Video). ನೆಟ್ಟಿಗರು ಆನೆಯ ವರ್ತನೆಗೆ ಫಿದಾ ಆಗಿದ್ದಾರೆ.

ವಿಡಿಯೊದಲ್ಲೇನಿದೆ?

ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಹಂಚಿಕೊಂಡ ವಿಡಿಯೊ ಇದಾಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಕಂಡು ಬಂದ ದೃಶ್ಯ ಇದಾಗಿದ್ದು, ಕಾಲುವೆಯೊಂದಕ್ಕೆ ಬಿದ್ದಿದ್ದ ಮರಿ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ ರೀತಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮರಿ ಆನೆಯೊಂದು ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ಬಿಟ್ಟಿತ್ತು. ತಾಯಿ ಆನೆ ತನ್ನ ಮರಿಯನ್ನು ರಕ್ಷಿಸಲು ತೀವ್ರವಾಗಿ ಒದ್ದಾಡಿತು. ಆದರೆ ಬಲವಾದ ನೀರಿನ ಹರಿವಿನಿಂದಾಗಿ ಇದು ಸಾಧ್ಯವಾಗಲಿಲ್ಲ. ನೀರಿನ ಪ್ರವಾಹವನ್ನು ತಡೆದುಕೊಳ್ಳಲು ಮತ್ತು ಅಲ್ಲಿಂದ ಜಿಗಿಯಲು ತುಂಬ ಚಿಕ್ಕದಾಗಿರುವ ಕಾರಣ ಮರಿ ಆನೆಗೂ ಸಾಧ್ಯವಾಗಲಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳ ತಂಡ ಕೂಡಲೇ ಧಾವಿಸಿತು. ಮರಿ ಆನೆಯನ್ನು ಜಾಗರೂಕತೆಯಿಂದ ಕಾಲುವೆಯಿಂದ ರಕ್ಷಿಸಿತು. ಮರಿ ಆನೆಯನ್ನು ತಾಯಿ ಜತೆಗೆ ಮತ್ತೆ ಒಂದಾಗಿತು.

ಆನೆ ತಾಯಿ ಭಾವುಕ

ಕಾಲುವೆಯಲ್ಲಿ ಬಿದ್ದಿದ ಮರಿ ಆನೆಯನ್ನು ರಕ್ಷಿಸಲು ತಾಯಿ ಆನೆ ಬಹಳಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೆ ತೀವ್ರ ದುಃಖದಲ್ಲಿತ್ತು. ಈ ವೇಳೆ ಆಗಮಿಸಿದ ರಕ್ಷಣಾ ತಂಡ ತಾಯಿ ಆನೆ ಪಾಲಿಗೆ ದೇವರಂತೆ ಕಾಣಿಸಿದ್ದರಲ್ಲಿ ಸಂಶಯವಿಲ್ಲ. ಮರಿ ಆನೆ ಸುರಕ್ಷಿತವಾಗಿ ಮೇಲೆ ಬಂದಾಗ ತಾಯಿ ಅನೆ ಭಾವುಕವಾಗಿಯಿತು. ಸೊಂಡಿಲನ್ನು ಮೇಲಕ್ಕೆತ್ತಿ ಕೃತಜ್ಞತೆ ಸೂಚಿಸಿತು. ಈ ಬಗ್ಗೆ ಸುಪ್ರಿಯಾ ಸಾಹು ಬರೆದುಕೊಂಡು, “ಬಹಳ ಚಿಕ್ಕ ಮರಿ ಆನೆಯನ್ನು ರಕ್ಷಿಸಿದ ಬಳಿಕ ತಾಯಿ ಆನೆ ನಮ್ಮ ಅರಣ್ಯ ಅಧಿಕಾರಿಗಳಿಗೆ ಧನ್ಯವಾದ ಹೇಳಲು ತನ್ನ ಸೊಂಡಿಲನ್ನು ಎತ್ತುವುದನ್ನು ನೋಡಿ ಹೃದಯ ತುಂಬಿ ಬಂತುʼʼ ಎಂದು ಹೇಳಿದ್ದಾರೆ.

“ಕಾರ್ಯಾಚರಣೆಯು ಅಪಾಯಗಳಿಂದ ತುಂಬಿದ್ದರೂ ನಮ್ಮ ಅರಣ್ಯಾಧಿಕಾರಿಗಳ ತಂಡ ಇದರಿಂದ ವಿಚಲಿತವಾಗಲಿಲ್ಲ. ಯಶಸ್ವಿ ಪುನರ್ಮಿಲನಕ್ಕೆ ಕಾರಣವಾದ ಅವರ ಅಸಾಧಾರಣ ಪ್ರಯತ್ನಗಳಿಗೆ ಅಭಿನಂದನೆಗಳು. ಎಫ್.ಡಿ. ರಾಮಸುಬ್ರಹ್ಮಣ್ಯಂ, ಡಿಡಿ ಬಿ.ತೇಜ, ಎಫ್ಆರ್‌ಒ ಪುಗಲೆಂತಿ, ಫಾರೆಸ್ಟರ್ ತಿಲಕರ್, ಅರಣ್ಯ ರಕ್ಷಕ ಸರವಣನ್, ಅರಣ್ಯ ರಕ್ಷಕ ವೆಲ್ಲಿಂಗ್ರಿ, ಅರಣ್ಯ ವೀಕ್ಷಕರಾದ ಮುರಳಿ, ರಾಸು, ಎಪಿಡಬ್ಲ್ಯುಗಳಾದ ಬಾಲು, ನಾಗರಾಜ್, ಮಹೇಶ್ ಮತ್ತು ಚಿನ್ನನಾಥನ್ ಮತ್ತಿತರರು ಅದ್ಭುತ ಕೆಲಸ ಮಾಡಿದ್ದಾರೆʼʼ ಎಂದು ಸುಪ್ರಿಯಾ ಸಾಹು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಆನೆಗೆ ದಾರಿ ಬಿಟ್ಟು ಕೊಟ್ಟ ಬಸ್‌ ಡ್ರೈವರ್‌; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಸುಪ್ರಿಯಾ ಸಾಹು ಅವರ ಈ ಪೋಸ್ಟ್‌ ಅನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಮೆಂಟ್‌ ಮೂಲಕ ಅರಣ್ಯಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ. ʼʼಬದ್ಧತೆಯಿಂದ ಕೆಲಸ ಮಾಡುವ ಈ ತಂಡಕ್ಕೆ ಅಭಿನಂದನೆಗಳು. ಇವರ ಈ ಕಾರ್ಯ ನಿಜಕ್ಕೂ ಸ್ಫೂರ್ತಿದಾಯಕʼʼ ಎಂದು ಹಲವರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version