Site icon Vistara News

Viral video | ಪ್ರಯಾಣಿಕ ಮತ್ತು ಟಿಸಿ ನಡುವೆ ಫುಲ್ ಫೈಟ್!‌ ವೈರಲ್‌ ಆಯ್ತು ವಿಡಿಯೋ

ಪಟನಾ: ರೈಲಿನಲ್ಲಿ ಪ್ರಯಾಣಿಕರು ಜಗಳವಾಡಿಕೊಳ್ಳುವುದು ಮಾಮೂಲು. ಆ ರೀತಿಯ ಘಟನೆಗಳ ವಿಡಿಯೋಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಆದರೆ ಇತ್ತೀಚೆಗೆ ಬಿಹಾರದಲ್ಲಿ ರೈಲ್ವೆ ಪ್ರಯಾಣಿಕ ಹಾಗೂ ಟಿಕೆಟ್‌ ಪರೀಕ್ಷಕನ (ticket checkers-TC) ನಡುವೆಯೇ ಮಾರಾಮಾರಿ ನಡೆದಿದೆ. ಅದರ ವಿಡಿಯೋ (Viral Video) ಎಲ್ಲೆಡೆ ಹರಿದಾಡಿದ್ದು, ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: Viral Video | ರಿಸೆಪ್ಷನ್ ಸಮಯದಲ್ಲಿ ಕೂದಲು ಕತ್ತರಿಸಿಕೊಂಡ ವಧು! ಕುಟುಂಬಸ್ಥರೇಕೆ ಕಣ್ಣೀರಿಟ್ಟರು?

ಟಿಕೆಟ್‌ ಪರೀಕ್ಷಿಸಲು ಬಂದಂತಹ ಟಿಸಿ, ಸಿಟ್ಟಿನಿಂದ ಬ್ಯಾಗ್‌ ಹಾಗೂ ತನ್ನ ಐಡಿ ಕಾರ್ಡ್‌ ಅನ್ನು ಸೀಟಿನ ಮೇಲೆ ತೆಗೆದಿಡುತ್ತಾನೆ. ಅಲ್ಲೇ ಮೇಲ್ಬದಿಯಲ್ಲಿ ಕುಳಿತಿರುವ ಪ್ರಯಾಣಿಕನನ್ನು ಸಿಟ್ಟಿನಿಂದ ಎಳೆಯಲು ಯತ್ನಿಸುತ್ತಾನೆ. ಆತನಿಂದ ತಪ್ಪಿಸಿಕೊಳ್ಳಲೆಂದು ಪ್ರಯಾಣಿಕ ಕಾಲಿನಿಂದ ಆ ಅಧಿಕಾರಿಗೆ ಒದೆಯಲಾರಂಭಿಸುತ್ತಾನೆ. ಅಷ್ಟರಲ್ಲಿ ಇನ್ನೋರ್ವ ಅಧಿಕಾರಿಯೂ ಸೇರಿಕೊಂಡು ಪ್ರಯಾಣಿಕನ ಕೈ ಮತ್ತು ಕಾಲು ಹಿಡಿದುಕೊಂಡು ಕೆಳಗೆ ಬೀಳಿಸುತ್ತಾರೆ. ಇಬ್ಬರೂ ಕಾಲಿನಿಂದ ಆ ಪ್ರಯಾಣಿಕನಿಗೆ ಒದೆಯಲಾರಂಭಿಸುತ್ತಾರೆ. ಜಗಳ ನಿಲ್ಲಿಸಲು ಹೋದ ಸಹ ಪ್ರಯಾಣಿಕರನ್ನು ಲೆಕ್ಕಿಸದೆ ಹೊಡೆದಾಟವಾಗುತ್ತದೆ.


ಈ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ನಂತರ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದ್ದು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಇದು ಜ.2ರಂದು ಮುಂಬೈನಿಂದ ಜಯ್ನಗರಕ್ಕೆ ಹೊರಟಿದ್ದ ರೈಲಿನಲ್ಲಿ ನಡೆದ ಘಟನೆಯಾಗಿದೆ. ಧೋಲಿ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ಪರೀಕ್ಷಕರು ಟಿಕೆಟ್‌ ಪರಿಶೀಲನೆ ಮಾಡಲು ರೈಲೊಳಗೆ ಬಂದಾಗ ಪ್ರಯಾಣಿಕ ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದದ್ದು ತಿಳಿದುಬಂದಿದೆ. ಅಧಿಕಾರಿ ಮತ್ತು ಪ್ರಯಾಣಿಕನ ನಡುವೆ ಮಾತಿನ ಜಗಳ ಆರಂಭವಾಗಿ ನಂತರ ಅದು ಹೊಡೆದಾಟಕ್ಕೆ ತಿರುಗಿದೆ. ಘಟನೆಯಲ್ಲಿದ್ದ ಇಬ್ಬರೂ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ರೈಲ್ವೆ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.


ಇದೇ ರೀತಿ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಮುಂಬೈನ ಲೋಕಲ್‌ ರೈಲಿನಲ್ಲಿ ಜಗಳವಾಗಿತ್ತು. ಇಬ್ಬರು ಮಹಿಳೆಯರು ಕೂದಲು ಹಿಡಿದುಕೊಂಡು ಹೊಡೆದಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿತ್ತು.

Exit mobile version