ಗುರುಗ್ರಾಮ: ಚಲಿಸುತ್ತಿರುವ ವಾಹನದಲ್ಲಿ ವಿವಿಧ ಸಾಹಸ ನಡೆಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಜನನಿಬಿಡ ಪ್ರದೇಶದಲ್ಲಿ ವ್ಹೀಲಿಂಗ್ ಮಾಡುವುದು, ವಾಹನ ಚಲಾಯಿಸುತ್ತಲೇ ರೊಮ್ಯಾನ್ಸ್ ಮಾಡುವುದು ಇತ್ಯಾದಿ ಹೆಚ್ಚುತ್ತಲೇ ಇದೆ. ಪೊಲೀಸರು ಟ್ರಾಫಿಕ್ ರೂಲ್ಸ್ ಬಗ್ಗೆ ಅರಿವು ಮೂಡಿಸಿದರೂ, ನಿಯಮ ಮುರಿಯುವವರಿಗೆ ದಂಡ ವಿಧಿಸಿದರೂ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಹಾಕಲಾಗದೆ ಹೈರಾಣಾಗಿದ್ದಾರೆ. ಇಂತಹದ್ದೇ ಘಟನೆ ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಚಲಿಸುವ ಕಾರಿನಲ್ಲಿ ಪಟಾಕಿ ಸಿಡಿಸುತ್ತಿರುವ ವಿಡಿಯೊ ವೈರಲ್ (Viral Video) ಆಗಿದೆ.
ಕೆಲವು ಅಪರಿಚಿತ ವ್ಯಕ್ತಿಗಳು ಚಲಿಸುತ್ತಿರುವ ಕಾರಿನಿಂದಲೇ ರಸ್ತೆಯ ಮಧ್ಯೆ ಪಟಾಕಿ ಸಿಡಿಸಿದ್ದಾರೆ. ಈ ಕುರಿತಾದ 14 ಸೆಕೆಂಡ್‌ಗಳ ವಿಡಿಯೊ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಗುರುಗ್ರಾಮದ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದಾದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಚಲಿಸುತ್ತಿರುವ ಕಾರಿನ ಬಾನೆಟ್ ಒಳಭಾಗದಿಂದ ಪಟಾಕಿಗಳು ಸಿಡಿಯುವುದು ಕಂಡು ಬರುತ್ತಿದೆ. ಈ ವಿಡಿಯೊ ನಮ್ಮ ಗಮನಕ್ಕೆ ಬಂದಿದ್ದು, ಈಗಾಗಲೇ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಗುರುಗ್ರಾಮ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Unidentified persons booked for bursting crackers from their car: #Gurugram Police. #Viralvideo pic.twitter.com/MocAcsvlUx
— Akshara (@Akshara117) October 19, 2023
ನಂಬರ್ ಪ್ಲೇಟ್ ಇಲ್ಲ
ಹಿಂದೆ ಬರುತ್ತಿದ್ದ ಕಾರಿನ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಉಪ ಪೊಲೀಸ್ ಆಯುಕ್ತ (ಸಂಚಾರ) ವೀರೇಂದ್ರ ವಿಜ್ ಘಟನೆ ಕುರಿತು ಮಾತನಾಡಿ, ʼʼಕೃತ್ಯ ನಡೆಸುವವರು ಮೊದಲೇ ಪ್ಲ್ಯಾನ್ ಮಾಡಿಕೊಂಡೇ ಬಂದಿರುವ ಹಾಗಿದೆ. ಹೀಗಾಗಿ ಗುರುತು ಮರೆಮಾಚಲು ಈ ಕಾರಿನ ನೋಂದಣಿ ನಂಬರ್ ಪ್ಲೇಟ್ ಅನ್ನೇ ತೆಗೆದುಹಾಕಿದ್ದಾರೆ. ಇದೇ ರೀತಿಯ ವಾಹನಗಳ ವಿವರಗಳನ್ನು ಹಂಚಿಕೊಳ್ಳಲು ಗುರುಗ್ರಾಮ ಪೊಲೀಸರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಶೀಘ್ರ ಅಪರಾಧಿಗಳನ್ನು ಪತ್ತೆ ಹಚ್ಚಲಾಗುವುದುʼʼ ಎಂದು ವಿವರಿಸಿದ್ದಾರೆ. ʼʼಈ ರೀತಿಯ ಹುಚ್ಚು ಸಾಹಸ ಪ್ರದರ್ಶನದಿಂದ ಸಹ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತದೆ. ಅದು ಕೂಡ ವಾಹನ ದಟ್ಟಣೆ ಇರುವಂತಹ ರಸ್ತೆಯಲ್ಲಿ ದುರ್ವತನೆ ತೋರುತ್ತಿರುವುದು ನಿಜವಾಗಿಯೂ ಕಳವಳಕಾರಿ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆʼʼ ಎಂದು ನೆಟ್ಟಿಗರು ಹೇಳಿದ್ದಾರೆ.
ಇದು ಮೊದಲ ಸಲವೇನಲ್ಲ
ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ದೀಪಾವಳಿಯ ಸಮಯದಲ್ಲಿ ಈ ಪ್ರದೇಶದ ಆಸುಪಾಸಿನಲ್ಲಿ ಕೆಲವರು ತಮ್ಮ ಕಾರಿನ ಮೇಲೆ ಪಟಾಕಿಗಳನ್ನು ಸಿಡಿಸಿದ್ದರು. ಘಟನೆ ಸಂಬಂಧ ಗುರುಗ್ರಾಮ ಪೊಲೀಸರು ಕೆಲವರನ್ನು ಬಂಧಿಸಿದ್ದರು.
ಇದನ್ನೂ ಓದಿ: Viral Video: ರೈಲ್ವೆ ಕಿಚನ್‌ನಲ್ಲಿ ಇಲಿಗಳ ದರ್ಬಾರ್; ಎಂಜಲು ತಿನ್ನಬೇಕೆ ಎಂದು ಜನ ಗರಂ!
ಅಲ್ಲದೆ ಕೆಲವು ದಿನಗಳ ಹಿಂದೆ ಹೈದರಾಬಾದ್‌ನ ಪಿ.ವಿ.ನರಸಿಂಹರಾವ್ ಎಕ್ಸ್‌ಪ್ರೆಸ್ ವೇನಲ್ಲಿ ವೇಗವಾಗಿ ಚಲಿಸುತ್ತಿದ್ದ ಸನ್ ರೂಫ್ ಕಾರಿನ ಮೇಲೆ ಜೋಡಿಗಳು ಪರಸ್ಪರ ಕಿಸ್ ಮಾಡುತ್ತಿರುವ ವಿಡಿಯೊ ವೈರಲ್ ಆಗಿತ್ತು. ಜೋಡಿ ಪರಸ್ಪರ ತಬ್ಬಿಕೊಂಡಿದ್ದು ಮಾತ್ರವಲ್ಲದೇ ಪರಸ್ಪರ ಕಿಸ್ ಮಾಡುವುದು ವಿಡಿಯೊದಲ್ಲಿ ಸೆರೆಯಾಗಿತ್ತು. ಈ ಜೋಡಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸಿದ್ದರು.