ಥರಹೇವಾರಿ ಭಂಗಿಗಳಲ್ಲಿ, ವಿಧಗಳಲ್ಲಿ, ಯಾವ ಸಿನಿಮಾಗೂ ಕಮ್ಮಿಯಿಲ್ಲದಂತೆ ಮದುವೆಯ ವಿಡಿಯೋಗಳನ್ನು ಮಾಡುವುದು ಈಗಿನ ಟ್ರೆಂಡ್. ಇತ್ತೀಚೆಗೆ ಗುರುವಾಯೂರು ದೇವಸ್ಥಾನದ ಪರಿಸರದಲ್ಲಿ, ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೋಪೋದ್ರಿಕ್ತವಾಗಿ ಮಾವುತನನ್ನೇ ದಾಳಿ ಮಾಡಿದ ಘಟನೆ ನಡೆದಿದೆ. ಮದುವೆ ಜೋಡಿ ಹೆದರಿ ಅಲ್ಲಿಂದ ಕಾಲ್ಕಿತ್ತಿದ್ದಾರೆ!
ಮದುವೆಯ ಸಂದರ್ಭ ಗುರುವಾಯೂರು ದೇವಸ್ಥಾನದ ಆನೆಯನ್ನು ಕಟ್ಟಿ ಹಾಕಿದ ಪರಿಸರದಲ್ಲಿ ವಿಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕೇರಳದ ಜೋಡಿಗಳಿಬ್ಬರು ಇದ್ದಕ್ಕಿದ್ದಂತೆ ನಡೆದ ಗಲಾಟೆ ಏನೆಂಬುದೆಂದೇ ತಿಳಿಯದೆ ಭಯಗೊಂಡು ಓಡಿದ್ದಾರೆ. ಇದೀಗ ಈ ಜೋಡಿಗಳ ಈ ವಿಡಿಯೋನಲ್ಲಿ ಆನೆಯ ದಾಳಿಯೂ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಸೆರೆಯಾದಂತೆ, ಎಂದಿನಂತೆ ಭಕ್ತಾದಿಗಳೆಲ್ಲರೂ ದೇವಸ್ಥಾನದ ಹೆಬ್ಬಾಗಿಲ ಬಳಿ ಓಡಾಡುತ್ತಿದ್ದರು. ಆನೆಯನ್ನು ಅಲ್ಲೇ ಬದಿಯಲ್ಲಿ ಪ್ರಾಂಗಣದಲ್ಲೇ ಕಟ್ಟಿ ಹಾಕಲಾಗಿತ್ತು. ಮಾವುತನೂ ಜೊತೆಗೇ ಇದ್ದ ದೃಶ್ಯ ವಿಡಿಯೋನಲ್ಲಿ ಸೆರೆಯಾಗಿದ್ದು, ಆನೆ ಸಹಜವಾಗಿಯೇ ಶಾಂತ ರೀತಿಯಲ್ಲಿ ಇದ್ದುದು ಕಂಡು ಬರುತ್ತಿದೆ. ಆದರೆ, ಇದ್ದಕ್ಕಿದ್ದಂತೆ ಆನೆಗೆ ಕೋಪ ನೆತ್ತಿಗೇರಿದಂತಾಗಿ ಸುತ್ತಲೂ ತಿರುಗಾಡತೊಡಗಿ ಮಾವುತನನ್ನು ಎತ್ತಿ ಎಸೆದುಬಿಟ್ಟಿದೆ. ಅದೃಷ್ಟವಶಾತ್ ಮಾವುತ ಬದುಕುಳಿದಿದ್ದು. ಆ ಕ್ಷಣದಲ್ಲಿ ಅಲ್ಲೇ ಸ್ವಲ್ಪ ದೂರದಲ್ಲಿ ಈ ಜೋಡಿಗಳಿಬ್ಬರು ವಿಡಿಯೋ ಶೂಟ್‌ನಲ್ಲಿ ಭಾಗವಹಿಸುತ್ತಿದ್ದರು.
ಇದನ್ನೂ ಓದಿ | Viral Video| ಹಿಜಾಬ್ ಧರಿಸದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇರಾನ್ ಕ್ರೀಡಾಪಟುವಿನ ಮನೆ ಧ್ವಂಸ
ಈ ವಿಡಿಯೋನಲ್ಲಿ, ಜೋಡಿಗಳು ಆನೆಯ ಅಕ್ಕಪಕ್ಕದಲ್ಲೇ ನಡೆದು ಸಾಗುವ ದೃಶ್ಯಗಳೂ ಇವೆ. ಆನೆಯಿಂದ ಹೆಜ್ಜೆಯಳತೆಯ ದೂರದಲ್ಲಿ ನಿಂತು ಫೋಟೋ ಹಾಗೂ ವಿಡಿಯೋಗೆ ಫೊಸ್ ಕೊಡುತ್ತಿದ್ದಾಗ ಆನೆಗೆ ಕೋಪಗೊಂಡಿದೆ. ಅಷ್ಟರವರೆಗೆ ಸಹಜವಾಗಿದ್ದ, ಶಾಂತರೀತಿಯಲ್ಲಿದ್ದ ಆನೆ, ವೆಡ್ಡಿಂಗ್ ಫೋಟೋಗ್ರಾಫರ್ ಈ ಜೋಡಿಗಳಿಬ್ಬರ ಫೋಟೋವನ್ನು ತೆಗೆಯುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಕೋಪೋದ್ರಿಕ್ತಗೊಂಡಿದ್ದು ಈ ವಿಡಿಯೋದಲ್ಲಿ ಕಾಣಿಸುತ್ತಿದೆ. ನಂತರ ತನ್ನ ಬಳಿ ನಿಂತಿದ್ದ ಮಾವುತನನ್ನು ಕೆಳಗೆ ಬೀಳಿಸಿ, ಸೊಂಡಿಲಲ್ಲಿ ಎತ್ತಿ ಒಗೆಯಲು ಪ್ರಯತ್ನ ಪಡುವ ಸಂಧರ್ಭದಲ್ಲಿ ಅದೃಷ್ಟವಶಾತ್ ಆತ ಬಿದ್ದಿದ್ದರಿಂದ ತಪ್ಪಿಸಿಕೊಂಡು ಓಡಿದ್ದಾನೆ. ಆನೆಯ ಮೇಲೆ ಕುಳಿತಿದ್ದ ಮಾವುತ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರೂ ಕ್ಷಣಕಾಲ ಆನೆ ಕೋಪದಲ್ಲಿ ಅಲ್ಲೇ ಓಡಾಡಿದ್ದು ಕಂಡುಬಂದಿದೆ. ಸುತ್ತಮುತ್ತ ಇದ್ದ ಭಕ್ತಾದಿಗಳು, ಆನೆಯ ಈ ದಿಢೀರ್ ದಾಳಿಯಿಂದ ದಿಕ್ಕಾಪಾಲಾಗಿ ಓಡಿದ್ದೂ, ಈ ಜೋಡಿಗಳೂ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ವೆಡ್ಡಿಂಗ್ ಮೊಜಿಟೋ ಎಂಬ ಮದುವೆ ಫೋಟೋಗ್ರಫಿ ಸ್ಟುಡಿಯೋ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾರಣ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ ೧೦ರಂದೇ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಈ ವಿಡಿಯೋ ಜೊತೆಗೆ ವಿಡಿಯೋ ಶೂಟ್‌ನಲ್ಲಿ ಭಾಗಿಯಾಗಿದ್ದ ಜೋಡಿಗಳೂ ಮಾತನಾಡಿದ್ದು, ಅದ್ಯಾಕೆ ಆನೆಗೆ ಇದ್ದಕ್ಕಿದ್ದಂತೆ ಕೋಪ ಬಂತೋ ಗೊತ್ತಾಗಲಿಲ್ಲ. ನಾವು ಯಾವುದೇ ತೊಂದರೆ ಕೊಡದೆ ನಮ್ಮ ಪಾಡಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದೆವು. ಆನೆ ಸ್ವಲ್ಪ ದೂರದಲ್ಲಿ ಅದರ ಪಾಡಿಗಿತ್ತು. ಫೋಟೋ ತೆಗೆಸಿಕೊಳ್ಳುತ್ತಿದ್ದ ಹಾಗೆ ಇದ್ದಕ್ಕಿದ್ದಂತೆ ಹಿಂದಿನಿಂದ ಗಲಾಟೆ, ಚೀತ್ಕಾರ ಕೇಳಿ, ಎಲ್ಲರೂ ಓಡುವುದನ್ನು ನೋಡಿ ಏನಾಗುತ್ತಿದೆ ಅರಿವಾಗಲಿಲ್ಲ. ತಿರುಗಿ ನೋಡಿದರೆ, ಆನೆ ಕೋಪಗೊಂಡು ಮಾವುತನನ್ನೇ ದಾಳಿ ಮಾಡಿತ್ತು. ಆಗ ನಾವೂ ಓಡಿದೆವು. ನಿಜಕ್ಕೂ ಆ ಸಂದರ್ಭ ಭಯವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ | Viral Video| ಮದುವೆಗೆ ಅತಿಥಿಗಳನ್ನೆಲ್ಲ ಕರೆದುಕೊಂಡು ಹೋಗಲು ವಿಮಾನವನ್ನೇ ಬುಕ್ ಮಾಡಿದ ಕುಟುಂಬ