Site icon Vistara News

Viral Video: ಹಗಲು-ರಾತ್ರಿ ಉಂಟಾಗುವುದು ಹೇಗೆ ಗೊತ್ತೆ? ಈ ವಿಡಿಯೊ ನೋಡಿ

insta

insta

ಬೆಂಗಳೂರು: ನಿಸರ್ಗ ಎನ್ನುವುದು ಯಾವತ್ತಿಗೂ ಮನುಷ್ಯನ ಕುತೂಹಲ ಕೆರಳಿಸುತ್ತದೆ. ಬಗೆದಷ್ಟು ಹೊಸ ಹೊಸ ಸಂಗತಿ ಹೊರಗೆ ಬರುತ್ತಲೇ ಇರುತ್ತದೆ. ಅದರಲ್ಲೂ ಭೂಮಿ ಮೇಲೆ ನಮ್ಮ ಅನುಭವಕ್ಕೆ ಬರುವ ಹಗಲು-ರಾತ್ರಿಯ ವಿದ್ಯಾಮಾನ ಎಲ್ಲರಲ್ಲಿ ಆಸಕ್ತಿ ಕೆರಳಿಸಿಯೇ ಬಿಡುತ್ತದೆ. ಕೆಲವು ಕಡೆ ಹಗಲು, ರಾತ್ರಿ ಸಮಯದಲ್ಲಿ ವ್ಯತ್ಯಾಸ ಇರುತ್ತದೆ. ಅದೇನೇ ಇರಲಿ ವಿಜ್ಞಾನದ ಪ್ರಕ್ರಿಯೆ ಬಗ್ಗೆ ಪ್ರಾಥಮಿಕ ತರಗತಿಯ ಪಠ್ಯದಲ್ಲಿ ಪ್ರಸ್ತಾವಿಸಲಾಗುತ್ತದೆ. ಕೆಲವರು ಅದರ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾಗುತ್ತಾರೆ. ಇದೀಗ ವ್ಯಕ್ತಿಯೊಬ್ಬರು ಹಗಲು-ರಾತ್ರಿ ಪ್ರಕ್ರಿಯೆಯನ್ನು ಎಲ್ಲರಿಗೂ ಅರಿವಾಗುವ ರೀತಿಯಲ್ಲಿ, ಪ್ರಾಯೋಗಿಕವಾಗಿ ತಿಳಿಸಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ (Viral Video) ಆಗಿದೆ.

ವಿಡಿಯೊದಲ್ಲೇನಿದೆ?

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ಕ್ಲಿಪ್ ಭೂಮಿಯ ಮೇಲೆ ಹಗಲು ಮತ್ತು ರಾತ್ರಿಯ ವಿದ್ಯಮಾನದ ವಿಶಿಷ್ಟ ವಿವರಣೆಯನ್ನು ಒಳಗೊಂಡಿದೆ. ವ್ಯಕ್ತಿಯೊಬ್ಬರು ಬೋರ್ಡ್ ಮೇಲೆ ಲೇಸರ್ ಬೆಳಕನ್ನು ಬಳಸಿ ಈ ಪ್ರಕ್ರಿಯೆಯನ್ನು ಪ್ರದರ್ಶಿಸಿದ್ದಾರೆ ಮತ್ತು ಹಗಲು ಮತ್ತು ರಾತ್ರಿಯ ನಡುವಿನ ವ್ಯತ್ಯಾಸಗಳನ್ನು ಅರ್ಥವಾಗುವಂತೆ ವಿವರಿಸಿದ್ದಾರೆ.

ವ್ಯಕ್ತಿಯ ವಿವರಣೆಯು ಹಗಲು ಮತ್ತು ರಾತ್ರಿಯ ನಡುವಿನ ವ್ಯತ್ಯಾಸದ ಸೃಜನಶೀಲ ಪ್ರದರ್ಶನವನ್ನು ಒಳಗೊಂಡಿದೆ. ಭೂಮಿ ಮತ್ತು ಚಂದ್ರನನ್ನು ಪ್ರತಿನಿಧಿಸುವ ಬೋರ್ಡ್ ಅನ್ನು ಒಂದು ಕಡೆ ಸ್ಥಾಪಿಸಿದ್ದಾರೆ ಮತ್ತು ಸೂರ್ಯನನ್ನು ಪ್ರತಿನಿಧಿಸಲು ಲೇಸರ್‌ ಲೈಟ್‌ ಬಳಸಿದ್ದಾರೆ. ಲೇಸರ್ ಲೈಟ್‌ ತಿರುಗಿಸುವ ಮೂಲಕ ಸೂರ್ಯನ ಚಲನೆಯನ್ನು ವಿವರಿಸುತ್ತಾರೆ. ಇದು ಭೂಮಿಯ ಮೇಲೆ, ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಸೂಚಿಸುತ್ತದೆ. ಇದು ನಮ್ಮ ಅನುಭವಕ್ಕೆ ಬರುವ ಹಗಲು ಮತ್ತು ರಾತ್ರಿಯ ವಿದ್ಯಾಮಾನವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.

ಇದನ್ನೂ ಓದಿ: Viral Video: ಚಲಿಸುತ್ತಿರುವ ಕಾರಿನಿಂದಲೇ ಪಟಾಕಿ ಸಿಡಿಸಿದ ಪುಂಡರು; ನೆಟ್ಟಿಗರಿಂದ ಕ್ಲಾಸ್

ಮೆಚ್ಚುಗೆ ಸೂಚಿಸಿದ ನೆಟ್ಟಿಗರು

ಈ ವಿಡಿಯೊವನ್ನು ಈಗಾಗಲೇ 2 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ವಿವರಣೆಯಲ್ಲಿನ ದೋಷಗಳ ಕುರಿತು ಬೆರಳು ತೋರಿಸಿದ್ದಾರೆ. ಅನೇಕರು ಈ ವಿಡಿಯೊವನ್ನು ಶಾಲೆಗೆ ಹೋಲಿಸಿದ್ದಾರೆ. ಶೈಕ್ಷಣಿಕ ಮತ್ತು ಮಾಹಿತಿಯುಕ್ತ ವಿಷಯವನ್ನು ಒದಗಿಸಲು ಸಾಮಾಜಿಕ ಮಾಧ್ಯಮ ಹೇಗೆ ವೇದಿಕೆಯಾಗಬಲ್ಲದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಎಂದು ಹಲವರು ತಿಳಿಸಿದ್ದಾರೆ.

ಈ ಪೈಕಿ ಒಬ್ಬರು, ʼʼನಿಮ್ಮ ವಿವರಣೆಯಲ್ಲಿ ಭೂಮಿ ಯಾಕೆ ಚಲಿಸುತ್ತಿಲ್ಲ?ʼʼ ಎಂದು ಪ್ರಶ್ನಿಸಿದ್ದಾರೆ. ʼʼ2 ಗಂಟೆಯ ಪಾಠವನ್ನು ಕೇವಲ 30 ಸೆಕೆಂಡ್‌ನಲ್ಲಿ ವಿವರಿಸಿದ್ದೀರಿʼʼ ಎಂದು ಮತ್ತೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ʼʼಬಗೆಹರಿಯದ ಗೊಂದಲ ನಿವಾರಣೆಯಾಗಿದೆʼʼ ಎಂದು ನೋಡುಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼ30ಕ್ಕಿಂತ ಹೆಚ್ಚಿನ ವರ್ಷದ ಅನುಮಾನಕ್ಕೆ ಈಗ ಪರಿಹಾರ ಸಿಕ್ಕಿದೆ. ಉತ್ತಮ ವಿವರಣೆʼʼ ಎಂದು ಮಗದೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ʼʼಇದು ಹಿಂದಿನಿಂದಲೇ ಗೊತ್ತಿರುವ ವಿಷಯ. ಇದರಲ್ಲಿ ಹೊಸದೇನಿದೆ?ʼʼ ಎನ್ನುವುದು ಇನ್ನೊಬ್ಬರ ಪ್ರಶ್ನೆ. ಇನ್ನು ಹಲವರು ಸರಳ, ಅರ್ಥಪೂರ್ಣ ವಿವರಣೆಗೆ ಧನ್ಯವಾದ ಅರ್ಪಿಸಿದ್ದಾರೆ. ಒಟ್ಟಿನಲ್ಲಿ ಈ ವೈಜ್ಞಾನಿಕ ವಿವರಗಳನ್ನೊಳಗೊಂಡ ಈ ವಿಡಿಯೊ ಹಲವರ ಗಮನ ಸೆಳೆದಿದೆ ಎನ್ನುವುದು ಸ್ಪಷ್ಟ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version