ಚಪಾತಿ ಮಾಡುವುದೇನೂ ಭಾರತೀಯರಿಗೆ ಕಷ್ಟವಲ್ಲ. ಉತ್ತರ ಭಾರತದ ಮಂದಿಗೆ ನಿತ್ಯದ ಆಹಾರವಿದು. ಅವರು ಇದರಲ್ಲಿ ಬಗೆಬಗೆಯ ವೆರೈಟಿಗಳನ್ನು ಮಾಡುತ್ತಾರೆ. ದಕ್ಷಿಣ ಭಾರತೀಯರಾದ ನಾವೂ ಕೂಡಾ ಇವರಿಗೇನೂ ಕಡಿಮೆಯಿಲ್ಲ ಎಂಬಂತೆ ಚಪಾತಿ, ಪರಾಠಾ, ರೋಟಿ, ಪುಲ್ಕಾಗಳನ್ನು ಕರತಲಾಮಲಕ ಮಾಡಿಕೊಂಡಿದ್ದೇವೆ. ಆದರೂ, ಮೃದುವಾದ ಎರಡೇ ಬೆರಳುಗಳಲ್ಲಿ ಮುರಿಯಬಹುದಾದ, ಬಾಯಿಗಿಡುವಾಗಲೇ ಆಹಾ ಎನಿಸುವ ಚಪಾತಿ (Soft Chapati) , ಫುಲ್ಕಾಗಳನ್ನು ಮಾಡುವುದು ಹೇಗೆ ಎಂಬ ರಹಸ್ಯವನ್ನು ಕಲಿತುಕೊಳ್ಳಲು ಎಲ್ಲರೂ ಸದಾ ತುದಿಗಾಲಿನಲ್ಲೇ ನಿಂತಿರುತ್ತಾರೆ. ಆದರೆ, ಭಾರತೀಯರ ಹೊರತಾಗಿ ವಿದೇಶೀಯರು ಇದರಲ್ಲಿ ತಮ್ಮ ಕೈಚಳಕ (Food Tips) ತೋರಿಸಿದರೆ ಆಶ್ಚರ್ಯ ತಾನೇ?
ಹೌದು. ಭಾರತೀಯ ಅಡುಗೆಗೆ (Indian cuisine) ಇತ್ತೀಚೆಗೆ ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಉತ್ತಮ ಸ್ಥಾನಮಾನ ಸಿಗುತ್ತಿದೆ. ಸಾಮಾಜಿಕ ಜಾಲತಾಣಗಳು ಬಂದಾಗಿನಿಂದ ವಿಶ್ವದೆಲ್ಲೆಡೆಯ ಅಡುಗೆಗಳಿಗೆ ಅತ್ಯುತ್ತಮ ವೇದಿಕೆಗಳು ದೊರೆಯಲು ಆರಂಭವಾಗಿದ್ದು, ಎಲ್ಲರೂ ಎಲ್ಲ ಬಗೆಯ, ತಮಗಿಷ್ಟವಾದ ಅಡುಗೆಗಗಳನ್ನು ಕಲಿಯಲು ತಯಾರಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಪಾಶ್ಚಾತ್ಯರು ಭಾರತೀಯ ಅಡುಗೆಗಳನ್ನು ಟ್ರೈ ಮಾಡಿ ಇನ್ಸ್ಟಾಗ್ರಾಂ, ಯುಟ್ಯೂಬ್ ವಿಡಿಯೋಗಳನ್ನೂ (Viral video) ಮಾಡುತ್ತಿರುವುದು ಅವುಗಳು ವೈರಲ್ ಆಗುತ್ತಿರುವುದು ಆಗಾಗ ನಡೆಯುತ್ತಲೇ ಇರುತ್ತವೆ. ಇವರ ಪೈಕಿ ಮೋಂಟಿ ಹಾಗೂ ಆಂಡ್ರಿಯಾ ಎಂಬಿಬ್ಬರು ಭಾರತೀಯ ಅಡುಗೆಗಳಲ್ಲಿ ತಮ್ಮ ಕೈಚಳಕವನ್ನು ತೋರಿಸುತ್ತಾ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಾ ಇರುತ್ತಾರೆ.
ಭಾರತೀಯನನ್ನು ಮದುವೆಯಾಗಿರುವ ಈ ಆಂಡ್ರಿಯಾ ಎಂಬ ಜರ್ಮನ್ ಮಹಿಳೆಗೆ ಭಾರತೀಯ ಅಡುಗೆಯ ಬಗ್ಗೆ ವಿಪರೀತ ಆಸಕ್ತಿ. ಆಗಾಗ ಪರಾಠಾ, ಚಪಾತಿ, ರೋಟಿ ಸೇರಿದಂತೆ ಅನೇಕ ಬಗೆಯ ಭಾರತೀಯ ಅಡುಗೆಗಳ ವಿಡಿಯೋ ಮಾಡಿ ಹರಿಬಿಡುತ್ತಾರೆ. ಸದ್ಯ ಈಕೆ ಭಾರತೀಯರಿಗೆ ಗೊತ್ತಿಲ್ಲದ ಅಡುಗೆಯ ಸೀಕ್ರೆಟ್ ಒಂದನ್ನು ಹೇಳಿದ್ದಾರೆ. ಈ ಒಂದು ವಸ್ತುವನ್ನು ಚಪಾತಿ ಹಿಟ್ಟು ಕಲಸುವಾಗ ಸೇರಿಸಿದರೆ ನೀವು ಮಾಡುವ ಚಪಾತಿ ಅತ್ಯಂತ ಮೆತ್ತಗಿರುವ ಎರಡೇ ಬೆರಳುಗಳಲ್ಲಿ ಮುರಿಯಬಹುದಾದ ಚಪಾತಿಯಾಗುತ್ತದೆ ಎಂದು ಆಕೆ ಹೇಳಿದ್ದಾರೆ.
ಹಾಗಾದರೆ ಅಂಥ ಮೆತ್ತಗಿರುವ ಚಪಾತಿಯ ಸೀಕ್ರೆಟ್ ಏನೆಂದು ಕೇಳುತ್ತೀರಾ? ಆಂಡ್ರಿಯಾ ಮಾಡಿದ ಮೆತ್ತಗಿನ ಚಪಾತಿಗೆ ಆಕೆ ಸೇರಿಸಿದ್ದು ಒಂದೇ ಒಂದು ಬೇರೆ ವಸ್ತು. ಅದರಿಂದ ಆಕೆ ಮಾಡಿದ ಚಪಾತಿ ಮೆತ್ತಗಾಗಿದೆ ಎಂದು ಆಕೆ ಚಪಾತಿಯ ವಿಧಾನವನ್ನು ಮಾಡಿ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆಕೆ ಸೇರಿಸಿದ ವಸ್ತುವಿನ ಬಗ್ಗೆ ಜನರು ಅವಕ್ಕಾಗಿದ್ದಾರೆ.
ಹಾಗಾದರೆ ಆ ವಸ್ತು ಯಾವುದು ಅಂತೀರಾ? ಚಪಾತಿಯ ಹಿಟ್ಟು ಕಲಸುವಾಗ ಆಕೆ ಕೊಂಚ ಬೆಣ್ಣೆ ಹಣ್ಣು ಅಂದರೆ ಅವಕಾಡೋವನ್ನು ಸೇರಿಸಿದ್ದಾರೆ. ಹಿಸುಕಿದ ಸ್ವಲ್ಪ ಬೆಣ್ಣೆಹಣ್ಣನ್ನು ಹಿಟ್ಟಿನ ಜೊತೆ ಮಿಶ್ರ ಮಾಡಿ ಕಲಸಿ ಆಕೆ ಚಪಾತಿ ಮಾಡಿದ್ದಾರೆ.
ಆಕೆಯೇ ಹೇಳುವ ಪ್ರಕಾರ, ಬೆಣ್ನೆಹಣ್ಣಿಗೂ ಚಪಾತಿಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದರೆ, ನಾನೂ ಆರಂಭದಲ್ಲಿ ಹೀಗೆಯೇ ಯೋಚನೆ ಮಾಡಿದ್ದೆ. ಅದಕ್ಕೂ ಇದು ಎತ್ತಣ ಸಂಬಂಧ ಎಂದೇ ನನಗೂ ಅನಿಸಿತ್ತು. ಆದರೆ ಸುಮ್ಮನೇ ಟ್ರೈ ಮಾಡಬೇಕು ಅನಿಸಿತು. ಮಾಡಿ ನೋಡಿದರೆ, ಅದ್ಭುತವಾಗಿ ಬಂತು. ಈ ಸೂಪರ್ ಸಾಫ್ಟ್ ಚಪಾತಿಯನ್ನು ನಮ್ಮ ಮನೆಯಲ್ಲಿ ಎಲ್ಲರೂ ಬಹಳ ಇಷ್ಟಪಟ್ಟು ತಿಂದರು ಎಂದಾಕೆ ಹೇಳಿಕೊಂಡಿದ್ದಾರೆ.
ಈಕೆ ಮಾಡಿದ ಚಪಾತಿಯ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನು ನಾನೂ ಮಾಡಿದ್ದೇನೆ ಎಂದು ಒಬ್ಬರು ಹೇಳಿದರೆ, ಇನ್ನೂ ಕೆಲವರು ಆಕೆಗೆ ಬಸಳೆ ಅಥವಾ ಪಾಲಕ್ ಸೊಪ್ಪನ್ನು ರುಬ್ಬಿ ಅದನ್ನು ಹಿಟ್ಟಿಗೆ ಹಾಕಿ ಕಲಸಿ ಮಾಡುವ ಚಪಾತಿಯೂ ಇಷ್ಟೇ ಸಾಫ್ಟ್ ಆಗಿರುತ್ತದೆ, ಟ್ರೈ ಮಾಡಿ ಎಂದು ಆಕೆಗೆ ಸಲಹೆ ಮಾಡಿದ್ದಾರೆ. ನೀವೂ ಒಮ್ಮೆ ಅವಕಾಡೋ ಸೂಪರ್ ಸಾಫ್ಟ್ ಪುಲ್ಕಾ ಮಾಡಿ ನೋಡಿ!
ಇದನ್ನೂ ಓದಿ: Viral video: ಚಹಾಪ್ರೇಮಿಗಳೇ ಈ ಹೊಸ ಬಗೆಯ ಚಹಾ ಟ್ರೈ ಮಾಡ್ತೀರಾ? ಇದು ರೋಸ್ಟೆಡ್ ಮಿಲ್ಕ್ ಚಹಾ!