Site icon Vistara News

Viral video | ಜಾಗಿಂಗ್‌ ಮಾಡುತ್ತಿದ್ದವಳನ್ನು ಹಿಂಬಾಲಿಸಿದ ಕುರಿಗಳು ಸಾರ್ ಕುರಿಗಳು!

jogging sheep

ನೀವೆಲ್ಲರೂ ಪಂಚತಂತ್ರದ ಮಕ್ಕಳ ನೀತಿಕತೆಯೊಂದನ್ನು ಕೇಳಿರಬಹುದು ಅಥವಾ ಓದಿರಬಹುದು. ಕಾಡಿನಲ್ಲಿ ಯಾವುದೋ ಒಂದು ಪ್ರಾಣಿ ಓಡುತ್ತಿರುವುದನ್ನು ನೋಡಿದ ಮತ್ತೊಂದು ಪ್ರಾಣಿ ಅದರ ಹಿಂದೆ ಓಡುತ್ತದೆ. ಯಾಕೆ ಓಡುತ್ತಿದೆ ಎಂದು ತಿಳಿಯದ ಅದನ್ನು ಇನ್ನೊಂದು ಪ್ರಾಣಿ ಹಿಂಬಾಲಿಸುತ್ತದೆ. ಹೀಗೆ ಒಂದರ ಹಿಂದೆ ಮತ್ತೊಂದು, ಅದರ ಹಿಂದೆ ಇನ್ನೊಂದು ಎಂದು ಇಡೀ ಕಾಡಿನ ಎಲ್ಲ ಪ್ರಾಣಿಗಳು ಗೊತ್ತುಗುರಿಯಿಲ್ಲದೆ ಗುಂಪಾಗಿ ಓಡುತ್ತಲೇ ಇರುತ್ತವೆ! ವಿಷಯ ಏನೆಂದು ಕೇಳಿದರೆ ಯಾವ ಪ್ರಾಣಿಗೂ ಏನೂ ಗೊತ್ತಿರುವುದಿಲ್ಲ, ಅಂತಿಮವಾಗಿ ಸುಮ್ಮನೆ ಓಡಿದ್ದಷ್ಟೇ ಗೊತ್ತು!

ಇಂಥದ್ದೊಂದು ಕತೆ ನಿಜವಾಗಿಯೂ ನಡೆದರೆ! ಹೌದು. ಹೆಚ್ಚು ಕಡಿಮೆ ಇಂಥದ್ದೆ ಮಜವಾದ ವಿಡಿಯೋವೊಂದು ಈಗ ಜಾಲತಾಣದಲ್ಲಿ ಸದ್ದುಮಾಡುತ್ತಿದೆ. ದೇಹ ಫಿಟ್‌ ಆಗಿರುವ ಜೊತೆ ಮನಸ್ಸೂ ಪ್ರಫುಲ್ಲವಾಗಿರಲು ಬೆಳಗ್ಗಿನ ಜಾಗಿಂಗ್‌, ವಾಕಿಂಗ್ ಬಹುತೇಕ ಎಲ್ಲರಿಗೂ ಮುದ ನೀಡುವ ದಿನಚರಿ. ಇಲ್ಲಿ, ಅಂಥ ಒಬ್ಬ ಮಹಿಳೆ ಬೆಳಗ್ಗೆ ಎದ್ದು ಕಾಡ ಹಾದಿಯಲ್ಲಿ ಓಡುತ್ತಿದ್ದರೆ ಆಕೆಯನ್ನು ನೂರಾರು ಕುರಿಗಳು ಹಿಂಬಾಲಿಸುವ ವಿಡಿಯೋ ಒಂದು ಈಗ ವೈರಲ್‌ ಆಗಿದೆ. ಕುರಿಗಳೆಂದರೆ ಕೇಳಬೇಕಾ? ಒಂದು ಕುರಿ ಬಂದರೆ ಸಾಕು, ಮಂದೆಯೇ ಅದರ ಹಿಂದೆ ಸಾಲುಗಟ್ಟುತ್ತವೆ. ಇಲ್ಲೂ ಆಗಿದ್ದಿಷ್ಟು. ನೂರಾರು ಕುರಿಗಳಿದ್ದ ಮಂದೆ ಆಕೆಯೇ ತನ್ನನ್ನು ಮೇಯಿಸುವವಳು ಎಂದುಕೊಂಡವಾ ಗೊತ್ತಿಲ್ಲ! ಗೊತ್ತುಗುರಿಯಿಲ್ಲದೆ ಆಕೆಯ ಹಿಂದೆ ಓಡಿವೆ.

ಇದರಲ್ಲೇನಿದೆ ವಿಶೇಷ ಅಂತೀರಾ? ತಮಾಷೆಯೆಂದರೆ, ಸಂಬಂಧವೇ ಇಲ್ಲದೆ ಈ ಕುರಿಗಳು ಎಲ್ಲಿಂದ ಬಂದವು, ಯಾಕೆ ಆಕೆಯ ಹಿಂದೆ ಬಂದವು ಎಂದು ಆಕೆಗೂ ಗೊತ್ತಿಲ್ಲ. ಫ್ರಾನ್ಸ್‌ನ ಎಲಾನೋರ್‌ ಶೋಲ್ಝ್‌ ಎಂಬಾಕೆ ತನ್ನ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಖಾತೆಯಲ್ಲಿ ʻತಾನು ನೋಡಿದ ಅದ್ಭುತಗಳಲ್ಲೊಂದುʼ ಎಂದು ಪೋಸ್ಟ್‌ ಶೇರ್‌ ಮಾಡಿದ್ದು, ಇದೀಗ ಹಲವರ ಗಮನ ಸೆಳೆಯುತ್ತಿದೆ.‌

ಇದನ್ನೂ ಓದಿ | ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ!

ಮಜಾ ಎಂದರೆ, ಓಡುತ್ತಿರುವಾಕೆಯ ಹಿಂದೆ ನೂರಾರು ಕುರಿಗಳು ಅದೇ ವೇಗದಲ್ಲಿ ಆಕೆಯನ್ನು ಹಿಂಬಾಲಿಸುತ್ತಿವೆ. ಆಕೆ ಇದ್ದಕ್ಕಿದ್ದಂತೆ ಎಲಾನೋರ್‌ ಜೊತೆ ಮಾತಾಡಲೆಂದು ನಿಂತಾಗ ತುಟಿಪಿಟಿಕ್ಕೆನ್ನದೆ ಆ ಕುರಿಗಳೂ ಸಾಲಾಗಿ ಹಾಗೆಯೇ ನಿಂತುಕೊಳ್ಳುತ್ತವೆ. ಆಕೆ ಫೋಟೋ ಕೂಡಾ ತೆಗೆಯುತ್ತಾಳೆ. ಆಗೆಲ್ಲಾ ಕುರಿಗಳು ಚಲಿಸದೆ ನಿಂತು ಆಕೆಗೆ ಪೋಸ್‌ ಕೊಡುತ್ತವೆ. ಆಕೆ ಫೋನ್‌ ಜೇಬಿನೊಳಗಿಟ್ಟು ಓಡಲು ಶುರು ಮಾಡಿದರೆ ಮತ್ತೆ ಹಿಂಬಾಲಿಸುತ್ತವೆ, ಆಕೆಯದೇ ವೇಗದಲ್ಲಿ! ಇವು ಒಂದೆರಡು ಕುರಿಗಳ ಕತೆಯಲ್ಲ. ನೂರಾರು ಕುರಿಗಳು ಹಾಗೆ ಓಡುತ್ತಿರುವುದು ವಿಚಿತ್ರವೆನಿಸಿದರೂ ಕ್ಯೂಟ್‌ ಆಗಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದೆ. ಎಲ್ಲೋ ಮೇಯುತ್ತಿದ್ದ ಇವುಗಳು ತಮ್ಮ ಒಡೆಯನನ್ನು ಹಾದಿ ಮಧ್ಯೆ ಕಳೆದುಕೊಂಡಿದ್ದು, ಅದೇ ಸಮಯ ಓಡುತ್ತಿರುವ ಈಕೆಯನ್ನು ಕಂಡು ಹಿಂಬಾಲಿಸತೊಡಗಿದ್ದವಂತೆ. ಮುಂದಿದ್ದ ಒಂದೇ ಒಂದು ಕುರಿಯ ಈ ನಿರ್ಧಾರಕ್ಕೆ ಈಗ ಎಲ್ಲ ಕುರಿಗಳೂ ಬಲಿ ಬಿದ್ದಿವೆ!

ಈ ವಿಡಿಯೋ ಮಾಡಿದಾಕೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದು ಇದು ಮಿಲಿಯಗಟ್ಟಲೆ ವೀಕ್ಷಣೆ ಪಡೆದಿದೆ. ಆಕೆ ಒಬ್ಬಳೇ ಫ್ರಾನ್ಸ್‌ನ ಬೆಟ್ಟಗಳಲ್ಲಿ ಅಡ್ಡಾಡುತ್ತಿದ್ದಾಗ ಈ ದೃಶ್ಯ ಕಂಡು ತಬ್ಬಿಬ್ಬಾಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ʻಅಂದಹಾಗೆ, ಈ ಕುರಿಗಳು ಇನ್ನೂ ಆಕೆಯನ್ನು ಹಿಂಬಾಲಿಸುತ್ತಲೇ ಇರಬಹುದಾ?ʼ ಎಂದಾಕೆ ಆಶ್ಚರ್ಯಭರಿತ ಟೈಟಲ್‌ ಕೂಡಾ ನೀಡಿದ್ದಾಳೆ.

ಇದಕ್ಕೆ ನೂರಾರು ಪ್ರತಿಕ್ರಿಯೆಗಳು ಬಂದಿದ್ದು ಹಲವರು, ʻಇದೊಂದು ಮಜಾ ಘಟನೆ. ಕೊನೆಗೂ ಆಕೆ ಎಷ್ಟು ದೂರ ಓಡಿದಳು ಹಾಗೂ ಆ ಕುರಿಗಳು ಎಷ್ಟು ದೂರ ಓಡಿವೆ ಎಂದು ತಿಳಿದರೆ ಒಳ್ಳೆಯದಿತ್ತುʼ ಎಂದಿದ್ದಾರೆ. ಹಲವರು ʻಇದು ಸಕತ್‌ ಮಜಾ ಕೊಡುವ ವಿಡಿಯೋʼ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | Viral news | ಹಾದಿ ಮಧ್ಯೆ ಹೆರಿಗೆ, ಉಪಯೋಗವಾಗಿದ್ದು ಫೋನ್‌ ಚಾರ್ಜರ್!

Exit mobile version