ನವದೆಹಲಿ: ಡ್ಯಾನ್ಸ್ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರ ಮೈಕಲ್ ಜಾಕ್ಸನ್ ಅವರದ್ದು. ಅಮೆರಿಕದ ಈ ಡ್ಯಾನ್ಸರ್, ಸಿಂಗರ್ ಡ್ಯಾನ್ಸ್‌ಗೆ ಪರ್ಯಾಯ ಪದದಂತಿದ್ದರು. ʼಕಿಂಗ್ ಆಫ್ ಪಾಪ್ʼ ಎಂದೂ ಅವರನ್ನು ಕರೆಯಲಾಗುತ್ತಿತ್ತು. ಇದೀಗ ಭಾರತದ ಯುವಕನೊಬ್ಬ ಮೈಕಲ್ ಜಾಕ್ಸನ್ ಅವರಂತೆ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದ್ದಾನೆ. ಅಮೆರಿಕನ್ ರ‍್ಯಾಪರ್ ಸ್ನೂಪ್ ಡಾಗ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ (Viral Video). ಬೆರಗುಗಣ್ಣಿನಿಂದ ನೆಟ್ಟಿಗರು ಈ ಯುವಕ ಡ್ಯಾನ್ ನೋಡಿದ್ದಾರೆ.
ಯಾರು ಈ ಯುವಕ?
ಯುವರಾಜ್ ಸಿಂಗ್ ಎನ್ನುವ 19ರ ಹರೆಯದ ಯುವಕನೇ ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುವಂತೆ ಡ್ಯಾನ್ಸ್ ಮಾಡಿದ ಪ್ರತಿಭಾವಂತ. ಈತನನ್ನು ಬಾಬಾ ಜಾಕ್ಸನ್ ಎಂದೂ ಕರೆಯಲಾಗುತ್ತದೆ. ಮೈಕಲ್ ಜಾಕ್ಸನ್ ಅವರ ಅಪ್ರತಿಮ ‘ಮೂನ್ ವಾಕ್’ ಡ್ಯಾನ್ಸ್ ಸ್ಟೆಪ್‌ನಿಂದ ಸ್ಫೂರ್ತಿ ಪಡೆದು ‘ಗ್ಯಾಲಕ್ಸಿ ವಾಕ್’ ಅನ್ನು ಯುವರಾಜ್ ಸಿಂಗ್ ಪ್ರದರ್ಶಿಸುತ್ತಿರುವುದನ್ನು ವಿಡಿಯೊದಲ್ಲಿ ಕಂಡು ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 20 ಲಕ್ಷ ಫಾಲೋವರ್ಸ್ ಹೊಂದಿರುವ ಯುವರಾಜ್ ಸಿಂಗ್ ಇತ್ತೀಚೆಗೆ ಸ್ನೂಪ್ ಡಾಗ್ ಅವರ ಗಮನವನ್ನು ಸೆಳೆದಿದ್ದರು. ಅದರಂತೆ ಸ್ನೂಪ್ ಡಾಗ್ ಡಿಸೆಂಬರ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದರು.
ಮೈಕಲ್ ಜಾಕ್ಸನ್ ಅವರ ಅಪ್ರತಿಮ ಡ್ಯಾನ್ಸ್ ಶೈಲಿಯನ್ನು ಯುವರಾಜ್ ಸಿಂಗ್ ದೋಷರಹಿತವಾಗಿ ಅನುಕರಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅವರ ಕೊನೆಯ ಸ್ಟೆಪ್ ಅನ್ನು ಅಂತು ಬಹುತೇಕರು ಅಚ್ಚರಿಯಿಂದಲೇ ವೀಕ್ಷಿಸಿದ್ದಾರೆ. ಸ್ನೂಪ್ ಹಂಚಿಕೊಂಡ ವೀಡಿಯೊವನ್ನು ವೀಕ್ಷಿಸಿ ಇಂಟರ್‌ನೆಟ್ ಸೆನ್ಸೇಷನ್ ಕಿಲಿ ಪಾಲ್ ಮತ್ತು ಪವಿತ್ರಾ ಪುನಿಯಾ, ಅರ್ಜುನ್ ಕನುಂಗೊ ಮತ್ತಿತರರು ಶ್ಲಾಘಿಸಿದ್ದಾರೆ.
ನೆಟ್ಟಿಗರು ಏನಂದ್ರು?
ವಿಡಿಯೊ ವೀಕ್ಷಿಸಿದ ನೆಟ್ಟಿಗರು ಯುವರಾಜ್ ಸಿಂಗ್ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼʼಭಾರತದಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲʼʼ ಎಂದು ಒಬ್ಬರು ಹೇಳಿದ್ದಾರೆ. ʼʼಮೈಕಲ್ ಜಾಕ್ಸನ್‌ಗಿಂತ ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. “ಇದು ಬಾಲಿವುಡ್ ಎಂಜೆ” ಎನ್ನುವುದು ನೆಟ್ಟಿಗರೊಬ್ಬರ ಅಭಿಮತ. “ಇದು ನಿಜವಾಗಿಯೂ ಅತ್ಯುತ್ತಮ ಪ್ರದರ್ಶನ. ಒಂದೊಳ್ಳೆ ಮೂನ್ ವಾಕ್ ಸ್ಟೆಪ್ʼʼ ಎಂದು ಮಗದೊಬ್ಬರು ಮೆಚ್ಚಿದ್ದಾರೆ. ʼʼಸಾಧಾರಣ ಡ್ಯಾನ್ಸ್ʼʼ ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಗಾಯಕ ಮತ್ತು ನಟ ಅರ್ಜುನ್ ಕನುಂಗೊ “ಕ್ರಮಬದ್ಧ ನಡೆ” ಎಂದು ಬರೆದಿದ್ದರೆ, ಕಿಲಿ ಪಾಲ್, ʼʼನಿಮ್ಮನ್ನು ಭೇಟಿಯಾಗುತ್ತೇನೆ” ಎಂದಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ಪವಿತ್ರಾ ಪೂನಿಯಾ “ಮೈಂಡ್ ಬ್ಲಾಯಿಂಗ್” ಎಂದು ಕರೆದಿದ್ದಾರೆ.
ಯುವರಾಜ್ ಸಿಂಗ್ ಹಿನ್ನೆಲೆ
ಈ ಹಿಂದೆ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವರಾಜ್ ಸಿಂಗ್, ತಾವು ಎದುರಿಸಿದ್ದ ಸವಾಲನ್ನು ವಿವರಿಸಿದ್ದರು. “ನಾನು ನೆರಳನ್ನು ನೋಡಿ ನ್ಯತ್ಯಾಭ್ಯಾಸ ಮಾಡುತ್ತಿದ್ದೆʼʼ ಎಂದು ಹೇಳಿದ್ದರು. “ನಾನು ಮೈಕಲ್ ಜಾಕ್ಸನ್ ಅವರ ಬಗ್ಗೆ ಕೇಳಿದ್ದೇನೆ. ಆದರೆ ಅವರನ್ನು ಎಂದಿಗೂ ನೋಡಿರಲಿಲ್ಲ. ನಾನು ಚಿಕ್ಕವನಿರುವಾಗ ಮೊಬೈಲ್ ಫೋನ್ ಇರಲಿಲ್ಲ. ಹೀಗಾಗಿ ಆಗ ಮೈಕಲ್ ಜಾಕ್ಸನ್ ಯಾರೆಂದು ತಿಳಿದಿರಲಿಲ್ಲ. ನಾನು ಟಿವಿಯಲ್ಲಿ ಸಾಕಷ್ಟು ನೃತ್ಯವನ್ನು ನೋಡುತ್ತಿದ್ದೆ. ಹೃತಿಕ್ ರೋಷನ್, ಪ್ರಭುದೇವ ಅವರ ಡ್ಯಾನ್ಸ್ ನೋಡುತ್ತಾ ಬೆಳೆದಿದ್ದೇನೆ. ಅವರೇ ನನಗೆ ಸ್ಫೂರ್ತಿʼʼ ಎಂದು ತಿಳಿಸಿದ್ದರು.
ಇದನ್ನೂ ಓದಿ: Viral Video: ರಶ್ ಇರುವ ರೈಲಿನೊಳಗೆ ಹತ್ತೋದು ಹೇಗೆ?; ಈ ವಿಡಿಯೊ ನೋಡಿ