ಚಳಿಗಾಲ ಬಂದ ತಕ್ಷಣ ಸಿಹಿತಿಂಡಿಗಳ ಪೈಕಿ ಮೊದಲು ನೆನಪಾಗುವುದು ಜಿಲೇಬಿ. ಸುರುಳಿ ಸುತ್ತಿದ ಈ ಜಿಲೇಬಿ ಎಂಬ ಸಿಹಿತಿಂಡಿ ಬಹುತೇಕರಿಗೆ ಅತ್ಯಂತ ಪ್ರಿಯವಾದ ತಿನಿಸು. ಚಳಿಗಾಲ ಶುರುವಾಗುತ್ತಿದ್ದಂತೆ, ರಸ್ತೆಬದಿಯಲ್ಲಿ, ಸಿಹಿತಿಂಡಿಗಳ ಅಂಗಡಿಗಳಲ್ಲಿ, ರೆಸ್ಟೋರೆಂಟುಗಳಲ್ಲಿ, ಹೀಗೆ ಭಾರತದ ಪೇಟೆ, ಪಟ್ಟಣ ಹಳ್ಳಿಗಳಲ್ಲೂ ಕೂಡಾ ಬಾಯಲಲಿ ನೀರೂರಿಸುವ ಒಬ್ಬನಾದರೂ ಜಿಲೇಬಿವಾಲಾ ಇದ್ದೇ ಇರುತ್ತಾರೆ. ಸಂಜೆಯಾಗುತ್ತಿದ್ದ ಹಾಗೆ ಸೂರ್ಯ ನಿಧಾನವಾಗಿ ಪಶ್ಚಿಮದಂಚಿನಲ್ಲಿ ಕಂತುತ್ತಿರುವ ಹಾಗೆಯೇ, ಒಲೆಯ ಮೇಲೆ ಕೂರುವ ಎಣ್ಣೆಯ ಬಾಣಲೆಯಲ್ಲಿ ಜಿಲೇಬಿ ಮುಳುಗೆದ್ದು, ಸಕ್ಕರೆ ಪಾಕದಲ್ಲಿ ಮಿಂದು ಹೊಂಬಣ್ಣದಲ್ಲಿ ಲಕಲಕನೆ ಹೊಳೆವಾಗ ಯಾರ ಬಾಯಲ್ಲಿ ತಾನೇ ನೀರು ಸುರಿಯದು ಹೇಳಿ!
ಜಿಲೇಬಿ ಮಾಡುವುದೂ ಒಂದು ಕಲೆ. ಯಾಕೆಂದರೆ, ನೋಡಲು ಸುಲಭವೆಂದು ಕಂಡರೂ ಬಿಸಿ ಎಣ್ಣೆಗೆ ಸರಿಯಾಗಿ ಸುರುಳಿ ಸುತ್ತುವಂತೆ ನೇರವಾಗಿ ಹಿಟ್ಟು ಬಿಡುವುದೆಂದರೆ ಸುಲಭದ ಕೆಲಸವಲ್ಲ. ಅದಕ್ಕೊಂದು ನೈಪುಣ್ಯತೆ ಬೇಕು. ಹಲವಾರು ಬಾರಿ ಮಾಡಿ ಮಾಡಿ ಅಭ್ಯಾಸವಿರಬೇಕು. ಪುಟ್ಟದೊಂದು ಎರಡು ಸುರುಳಿಸುತ್ತಿನ ಜಿಲೇಬಿ ಮಾಡಲು ಹರಸಾಹಸ ಪಡುವ ಸಂದರ್ಭ ದೊಡ್ಡದೊಂದು ಚಪಾತಿ ಗಾತ್ರದ ಜಿಲೇಬಿ ಚಕಚಕನೆ ಮಾಡುವುದು ಕಂಡರೆ ಯಾರಾದರೂ ಹುಬ್ಬೇರಿಸಿಯಾರು. ಹೀಗೆ ಈಗೊಂದು ಜಿಲೇಬಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಾಂಗ್ಲಾ ದೇಶದ ದೈತ್ಯ ಜಿಲೇಬಿಯೊಂದು ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಎಲ್ಲರ ಬಾಯಲ್ಲಿ ನೀರು ಸುರಿಸುತ್ತಿದೆ.
ಹೌದು. ಇದರ ವಿಶೇಷವೇನಂತೀರಾ? ಇದರ ಹೆಸರು ಸನ್‌ಫ್ಲವರ್ ಜಿಲೇಬಿ. ಸೂರ್ಯಕಾಂತಿಯಂತೆ ದೊಡ್ಡ ಗಾತ್ರದ ಈ ಜಿಲೇಬಿಯನ್ನು ರಸ್ತೆಬದಿಯ ಜಿಲೇಬಿವಾಲಾ ಒಬ್ಬರು ಮಾಡುತ್ತಾರೆ. ಈಗಾಗಲೇ ಈ ಜಿಲೇಬಿ ವಿಡಿಯೋ ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ಎಲ್ಲರೂ ಈ ಜಿಲೇಬಿಯನ್ನು ವಾಹ್ ಎಂದಿದ್ದಾರೆ. ಹೆಚ್ಚು ಕಡಿಮೆ ಒಂದು ದೊಡ್ಡ ಚಪಾತಿಯ ಗಾತ್ರದಲ್ಲಿ ಈ ಜಿಲೇಭಿ ಇದ್ದು, ಇದರ ಗಾತ್ರವನ್ನೇ ನೋಡಿ ಹಲವರು ವಾಹ್ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಜಿಲೇಬಿಯನ್ನು ಆತ ಮಾಡುವ ವೈಖರಿಯೇ ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಲೀಲಾಜಾಲವಾಗಿ ಜಿಲೇಬಿಯನ್ನು ಎಣ್ಣೆಯಲ್ಲಿ ಸುರುಳಿ ಸುತ್ತಿ, ಅದು ಒಡೆಯದಂತೆ, ಹಿಂಬದಿಯಯಿಂದ ದಳಗಳಂತೆ ಸಪೋರ್ಟ್ ನೀಡುವ ಹಾಗೂ ಅದನ್ನು ಮಗುಚಿ ಹಾಕಿ, ಮತ್ತೆ ಜಿಲೇಬಿಯನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದು ಮಾರಾಟ ಮಾಡುವ ವಿಡಿಯೋ ಇದಾಗಿದೆ. ಹಲವರು, ಇದು ರಸ್ತೆಬದಿಯದ್ದಾದ್ದರಿಂದ ಆರೋಗ್ಯದ ವಿಚಾರದಲ್ಲಿ ದನಿ ಎತ್ತಿದ್ದರೂ, ಆತನ ಜಿಲೇಬಿ ಮಾಡುವ ಕಲೆಗೆ ಮಾತ್ರ ಮಾರು ಹೋಗಿದ್ದಾರೆ.
ಇನ್ನೂ ಕೆಲವರು, ಜಿಲೇಬಿ ತುಂಡಾಗದಂತೆ ಜಿಲೇಬಿವಾಲ ಈ ದೊಡ್ಡ ಜಿಲೇಬಿಗೆ ನೀಡಿದ ಸಪೋರ್ಟನ್ನು, ನೋಡಿ, ಜಿಲೇಬಿಯ ಕೆಳಗಿನಿಂದ ವೆಲ್ಡಿಂಗ್ ಕೂಡಾ ಮಾಡಲಾಗಿದೆ ಎಂದು ನಗೆಯಾಡಿದ್ದಾರೆ. ಮತ್ತೊಬ್ಬರು, ಮಧುಮೇಹದಿಂದ 69 ಮಿಸ್ಡ್ ಕಾಲ್‌ಗಳು ಎಂದು ಕಮೆಂಟು ಮಾಡಿ ತಮಾಷೆ ಮಾಡಿದ್ದಾರೆ.
ಏನೇ ಇರಲಿ, ಈ ಜಿಲೇಬಿವಾಲಾ ಲೀಲಾಜಾಲವಾಗಿ ಜಿಲೇಬಿಯನ್ನು ಮಾಡುವುದನ್ನು ನೋಡಿಯಾದರೂ ಹಲವರು ಒಮ್ಮೆ ಈ ಚಳಿಗಾಲದಲ್ಲಿ ಜಿಲೇಬಿ ಮಾಡಬೇಖು ಎಂದು ಸ್ಪೂರ್ತಿ ಪಡೆಯೋದು ಖಂಡಿತ.
ಇದನ್ನೂ ಓದಿ: Cricket Viral Video: ಕೈಯಿಂದ ಚೆಂಡು ತಡೆದು ಔಟ್ ಆದ ಮುಷ್ಫಿಕರ್ ರಹೀಂ