Site icon Vistara News

Viral video | ಜಿಲೇಬಿ ಜೊತೆ ಆಲೂ ಸಬ್ಜಿ: ಹೇಗಿದೆ ಹೊಸ ಕಾಂಬಿನೇಶನ್!

jilebi

ಜಿಲೇಬಿ ಎಂಬುದು ಕೇವಲ ಒಂದು ತಿನಿಸು ಮಾತ್ರ ಅಲ್ಲ. ಭಾರತೀಯರಿಗದು ಒಂದು ಭಾವನೆ. ಕೋಲ್ಕತ್ತಾದ ಬೀದಿಗಳಲ್ಲಿ ಸೂರ್ಯ ಬೆಳಗಾಗುವ ಮೊದಲೇ ಬಿಸಿ ಬಿಸಿ ಜಿಲೇಬಿ ದಿನವೂ ಖಾಲಿಯಾಗಬೇಕೆಂದರೆ, ಭಾರತೀಯರಿಗೂ ಜಿಲೇಬಿಗೂ ಇರುವ ನಂಟನ್ನು ಊಹಿಸಬಹುದು. ಚಳಿಗಾಲದ ಸಂಜೆಗಳಲ್ಲಿ ಬೀದಿ ಬದಿಯಲ್ಲಿ ಬಿಸಿ ಬಿಸಿ ಜಿಲೇಬಿಗಳನ್ನು ಬಾಯಿಗಿಟ್ಟರೆ ಸ್ವರ್ಗಸುಖ.

ಗರಿಗರಿಯಾದ ಹೊಂಬಣ್ಣದ ಸುರುಳಿಯಾಕಾರದ ಈ ಸಿಹಿಯನ್ನು ಒಮ್ಮೆ ಬಾಯಿಗೊಳಿಸಿದರೆ ಇನ್ನೊಂದು ಬೇಕು ಎನಿಸುವುದು ಸಹಜ. ಇಂತಹ ಜಿಲೇಬಿಯನ್ನು ಸೀದಾ ಜಿಲೇಬಿಯಾಗಿಯೂ ತಿನ್ನಬಹುದು. ಕ್ರೀಮೀ ಕ್ರೀಮೀಯಾಗಿರುವ ಚಳಿ ಚಳಿ ರಾಬ್ಡಿ ಜೊತೆಗೆ ಬಿಸಿಬಿಸಿ ಜಿಲೇಬಿ ಮುಳುಗಿಸಿಯೂ ತಿನ್ನಬಹುದು. ಬಿಸಿ ಹಾಲಿನಲ್ಲಿ ಹಾಕಿಯೂ ಸವಿಯುವವರಿದ್ದಾರೆ. ಐಸ್‌ಕ್ರೀಂನ ಜೊತೆ ಬಾಯಿಗಿಳಿಸುವ ಜನರೂ ಇಲ್ಲದಿಲ್ಲ. ಒಟ್ಟಾರೆ, ಸಿಹಿಯೊಂದನ್ನು ಹಲವು ಬಗೆಯಲ್ಲಿ ತಿನ್ನುವುದು ಹೇಗೆ ಎಂಬುದಕ್ಕೆ ಜಿಲೇಬಿಯೂ ಉದಾಹರಣೆಯಾಗಬಲ್ಲದು.

ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಡ್‌ ಬ್ಲಾಗರ್‌ಗಳು ಥರಹೇವಾರಿ ಬಗೆಯ ಕಾಂಬಿನೇಶನ್‌ಗಳಲ್ಲಿ ನಾನಾ ಬಗೆಯ ತಿಂಡಿಗಳನ್ನು ಟ್ರೈ ಮಾಡುವುದುಂಟು. ಈ ಬಾರಿ ಇಂತಹ ಹೊಸ ಬಗೆಯ ಪ್ರಯೋಗ ಮಾಡಿದ್ದಾರೆ. ಫುಡ್‌ ಬ್ಲಾಗರ್‌ ಪಾಲಕ್‌ ಕಪೂರ್‌ ತಮ್ಮ ಜಾಲತಾಣದಲ್ಲಿ ಜಿಲೇಬಿಯ ಮೇಲೆ ಆಲೂ ಸಬ್ಜಿ ಹಾಕಿ ತಿನ್ನುವ ಮೂಲಕ ಹೊಸ ಬಗೆಯ ಫುಡ್‌ ಫ್ಯೂಶನ್‌ ಮಾಡಹೊರಟಿದ್ದಾರೆ. ಆದರೆ, ಈಕೆ ತೋರಿಸಿದ ಈ ಬಗೆಯ ಪ್ರಯೋಗ ಮಾತ್ರ ಈ ಬಾರಿ ಯಾರಿಗೂ ಹಿಡಿಸಿದಂತಿಲ್ಲ.

ಮಥುರಾದ ಬಳಿಯ ಓಂ ಪೆಹೆಲ್‌ವಾನ್‌ ಎಂಬವರ ಜಿಲೇಬಿ ಅಂಗಡಿಯಲ್ಲಿ ಇಂಥದ್ದೊಂದು ವಿಚಿತ್ರ ಕಾಂಬಿನೇಶನ್ನಿನ ಜಿಲೇಬಿ ಲಭ್ಯವಿದ್ದು, ಪಲಾಕ್‌ ಕಪೂರ್‌ ಅದನ್ನಲ್ಲಿ ರುಚಿ ನೋಡಿ ಬಂದಿದ್ದಾರೆ. ಅಷ್ಟೇ ಅಲ್ಲ, ಅದರ ವಿಡಿಯೋ ಕೂಡಾ ಮಾಡಿದ್ದಾರೆ.  ಆಕೆಗೆ ತಕ್ಕಮಟ್ಟಿಗೆ ಇಷ್ಟವೂ ಆದಂತಿದೆ. ಜಿಲೇಬಿಯನ್ನು ಹಾಕಿ ಅದರ ಮೇಲೆ ಆಲೂ ಸಬ್ಜಿಯನ್ನು ಹಾಕಿದ ವಿಚಿತ್ರ ಕಾಂಬಿನೇಷನ್‌ನ ತಿಂಡಿ ತಿಂದಿದ್ದಾರೆ. ಜೊತೆಗೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಸಂದರ್ಭ, ʻಮಥುರಾ, ಬೃಂದಾವನದ ಬಹಳ ಪ್ರಸಿದ್ಧ ಕಾಂಬಿನೇಶನ್‌ ಜಿಲೇಬಿ ವಿಥ್‌ ಆಲೂ ಜಬ್ಜಿಯನ್ನು ಕೊನೆಗೂ ಸವಿದಿದ್ದೇನೆ. ಇದೊಂದು ನಾನು ಈವರೆಗೆ ಕಂಡು ಕೇಳರಿಯದ ವಿಚಿತ್ರ ಕಾಂಬಿನೇಶನ್‌. ಕೊನೆಗೂ ತಿನ್ನುವ ಭಾಗ್ಯ ಬಂದಿದೆʼ ಎಂದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ | Viral news | ಈ ರೆಸ್ಟೋರೆಂಟಿನಲ್ಲಿ ಮೀನೂ ಹಿಡಿಯಬಹುದು! ಅದೇ ಮೀನಿನ ಊಟವನ್ನೂ ಮಾಡಿ!

ಈಕೆ ಪೋಸ್ಟ್‌ ಮಾಡಿದ ಈ ಜಿಲೇಬಿ ವಿತ್‌ ಆಲೂ ಸಬ್ಜಿ ವಿಡಿಯೋವನ್ನು ಎರಡು ಲಕ್ಷ ಮಂದಿ ವೀಕ್ಷಿಸಿದ್ದು, ಎಲ್ಲರೂ ಈ ವಿಚಿತ್ರ ಕಾಂಬಿನೇಶನ್ನಿನ ಹೆಸರು ಕೇಳಿಯೇ ಹೌಹಾರಿದ್ದಾರೆ. ಕೆಲವರು, ಯಪ್ಪಾ ಹೀಗೂ ಒಂದು ಕಾಂಬಿನೇಶನ್‌ ಇರಬಹುದೆಂದು ಊಹಿಸಲೇ ಸಾಧ್ಯವಿಲ್ಲ ಎಂದು ಹೇಳಿದ್ದು, ಇನ್ನೂ ಕೆಲವರು, ʻಅಯ್ಯೋ ದೇವರೇ, ಇದನ್ಯಾರು ತಿನ್ನುತ್ತಾರಪ್ಪʼ ಎಂದಿದ್ದಾರೆ. ಇಂಥದ್ದನ್ನು ತಿಂದರೆ ಹೊಟ್ಟೆ ಕೆಡುವುದು ಖಂಡಿತ ಎಂದು ಕೆಲವರು ಅಭಿಪ್ರಾಯಿಸಿದ್ದಾರೆ.

ಇದರ ಜೊತೆ ಸದ್ಯ ಸಾಮಾಜಿಕ ಜಾಳತಾಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಇನ್ನೊಂದು ಸುದ್ದಿಯೆಂದರೆ, ಚಹಾವನ್ನು ಐಸ್‌ ಕ್ರೀಮನ್ನೂ ಮಿಕ್ಸ್‌ ಮಾಡಕು ಹೊರಟಿದ್ದಾರೆ. ಆಹಾರದ ಮೇಲೆ ವೈವಿಧ್ಯಮಯ ಪ್ರಯೋಗಗಳನ್ನು ಮಾಡುವವರೊಬ್ಬರು, ಚಹಾದ ಐಸ್‌ಕ್ರೀಂ ಮಾಡಲು ಹೊರಟಿದ್ದಾರೆ. ಬೀದಿಬದಿಯ ವ್ಯಾಪಾರಿಯೊಬ್ಬರು ತಮ್ಮಲ್ಲಿ ಐಸ್‌ಕ್ರೀಂ ಮೇಲೆ ಚಹಾವನ್ನು ಸುರಿಯುವ ಹೊಸತೊಂದು ವಿಡಿಯೋ ಈಗ ಸುದ್ದಿ ಮಾಡುತ್ತಿದೆ. ಚಹಾ ಜೊತೆಗೆ ಐಸ್‌ಕ್ರೀಂ ಯಾರಾದರೂ ಯೋಚಿಸದೇ ಇದ್ದರೆ, ಅದನ್ನೂ ಯೋಚಿಸಿದ ಮನಸ್ಸೊಂದು ಆ ಮೂಲಕವೇ ಹವಾ ಸೃಷ್ಟಿಸಲು ಹೊರಟಿದೆ. ಒಟ್ಟಾರೆ, ಒಂದಾದ ಮೇಲೊಂದು ತಿಂದುನಹೊಟ್ಟೆಯಲ್ಲಿ ಮಿಕ್ಸಾಗುವ ಸಂಭವವನ್ನು ಇವರೆಲ್ಲ ದೂರ ಮಾಡಿ, ಮೊದಲೇ ಮಿಕ್ಸ್‌ ಮಾಡಿಯೇ ಬಾಯಿಗಿಳಿಸುವ ಉಪಾಯ ಹೇಳುತ್ತಾರೋ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ | Viral video | ಊಟಿಯ ಗಾಲ್ಫ್‌ ಕೋರ್ಸ್‌ ಪಕ್ಕದಲ್ಲೇ ಹುಲಿ ಹಸುವನ್ನು ತಿನ್ನುವ ದೃಶ್ಯ ವೈರಲ್!

Exit mobile version