Site icon Vistara News

Viral Video: ಈ ಕಾರಣಕ್ಕೆ ಬರ್ತ್‌ ಡೇ ದಿನ ಭಾವುಕನಾಗಿ ಅತ್ತ 8ರ ಬಾಲಕ

david

david

ಕೊಲಂಬೊ: ಬರ್ತ್‌ ಡೇ (BirthDay) ಬಂತೆಂದರೆ ಸಾಕು ಮಕ್ಕಳು ಖುಷಿಯಾಗುತ್ತಾರೆ. ಅದರಲ್ಲೂ ಕೇಕ್‌ ಕಟ್ಟಿಂಗ್‌, ಸರ್ಪ್ರೈಸ್‌ ಪಾರ್ಟಿ ಇದ್ದರಂತೂ ಕೇಳೋದೇ ಬೇಡ, ಅವರು ಸಂತಸದಿಂದ ತೇಲಾಡುತ್ತಾರೆ. ಆದರೆ ಬಡತನದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಆ ಭಾಗ್ಯವಿರುವುದಿಲ್ಲ. ಅಂತಹ ಹುಡುಗನೊಬ್ಬನ ಬರ್ತ್‌ಡೇಯನ್ನು ಸರ್ಪ್ರೈಸ್‌ ಆಗಿ ಆಚರಿಸಿದ ವಿಡಿಯೊ ಇದೀಗ ವೈರಲ್‌ (Viral Video) ಆಗಿದೆ. ಮೊದಲ ಬಾರಿ ತನ್ನ ಹುಟ್ಟುಹಬ್ಬವನ್ನು ಆಯೋಜಿಸಿರುವುದನ್ನು ನೋಡಿ ಆ 8ರ ಹರೆಯದ ಬಾಲಕ ಭಾವುಕನಾಗಿದ್ದಾನೆ. ಈ ವಿಡಿಯೊ ನೋಡಿ ಹಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ವಿಡಿಯೊದಲ್ಲೇನಿದೆ?

ಕೊಲಂಬಿಯಾದ ಎಬೆಜಿಕೊದ 8 ವರ್ಷದ ಏಂಜೆಲ್ ಡೇವಿಡ್​ನ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ಆತನ ಹುಟ್ಟುಹಬ್ಬವನ್ನು ಆಚರಿಸುತ್ತಿರಲಿಲ್ಲ. ಎಂದಿನಂತೆ ಈ ಬಾರಿಯೂ ಆತನ ಬರ್ತ್‌ಡೇ ಬಂತು. ಆತನಿಗೆ ಸರ್ಪ್ರೈಸ್‌ ಕೊಡಲು ಶಿಕ್ಷಕರು, ಸಹಪಾಠಿಗಳು ನಿರ್ಧರಿಸಿದರು. ಅದರಂತೆ ಆತನ ಕ್ಲಾಸ್‌ ರೂಮ್‌ ಅನ್ನು ಅವನಿಗೆ ಗೊತ್ತಿಲ್ಲದಂತೆ ಅಲಂಕರಿಸಿದರು. ಎಂದಿನಂತೆ ಶಾಲೆಗೆ ಬಂದ ಡೇವಿಡ್​ ತರಗತಿಯ ಬಾಗಿಲಿನಲ್ಲೇ ನಿಂತುಬಿಟ್ಟ. ಯಾವುದನ್ನೂ ಊಹಿಸಿರದ ಅವನು ಬರ್ತ್‌ಡೇ ಸರ್ಪ್ರೈಸ್‌ ನೋಡಿ ಭಾವುಕನಾದ. ಕಣ್ಣಿನಲ್ಲಿ ನೀರು ತುಂಬಿ ಬಂತು. ಕೂಡಲೇ ಅವನ ಬಳಿ ತೆರಳಿದ ಸಹಪಾಠಿಗಳು ಪ್ರೀತಿಯಿಂದ ಅಪ್ಪಿಕೊಂಡು ಸಮಾಧಾನ ಮಾಡಿ, ಶುಭಾಶಯ ತಿಳಿಸಿದರು.

ಮಕ್ಕಳ ಮುಗ್ಧತೆಗೆ ನೆಟ್ಟಿಗರು ಮನ ಸೋತಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊವನ್ನು ಈಗಾಗಲೇ 20 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಡೇವಿಡ್‌ನ ಮುಗ್ಧತೆ ಜತೆಗೆ ಬರ್ತ್‌ಡೇ ಸರ್ಪ್ರೈಸ್‌ ಪಾರ್ಟಿ ಆಯೋಜಿಸಿದ್ದ ಶಿಕ್ಷಕರು, ಸಹಪಾಠಿಗಳಿಗೂ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಕ್ಕಳ ಈ ಕಪಟವಿಲ್ಲದೆ ಸ್ವಭಾವದ ಕಾರಣದಿಂದಲೇ ಅವರನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Viral News: ಭಾರತದಲ್ಲಿ ಭಾರತೀಯರಿಗೇ ಪ್ರವೇಶವಿಲ್ಲದ ಜಾಗಗಳಿವು!

ನೆಟ್ಟಿಗರು ಏನಂದ್ರು?

ವಿಡಿಯೊ ನೋಡಿದ ಒಬ್ಬರಂತೂ ಭಾವುಕರಾಗಿ ʼʼಹೃದಯಸ್ಪರ್ಶಿ ವಿಡಿಯೊ. ಕೆಲವೊಂದು ನಮ್ಮ ಚಿಕ್ಕ ಪುಟ್ಟ ಕೆಲಸಗಳೇ ಇತರರ ಮೇಲೆ ಅಗಾಧವಾದ ಧನಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮಿಂದ ಇತರರಿಗೆ ಸಹಾಯ ಆಗುವುದಿದ್ದರೆ ದಯವಿಟ್ಟು ಮಾಡಿ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಇತರರಿಗೆ ಸಹಾಯಹಸ್ತ ಚಾಚಿʼʼ ಎಂದಿದ್ದಾರೆ. ಅನೇಕರಿಗಂತೂ ಬರ್ತ್‌ಡೇ ಪಾರ್ಟಿ ಮಾಡಲು ಅಥವಾ ಉಡುಗೊರೆ ಕೊಳ್ಳಲು ಸಾಧ್ಯವಾಗದ ತಮ್ಮ ಬಾಲ್ಯದ ನೆನಪು ಕಾಡಿದೆ. ಈ ಬಗ್ಗೆ ನೆಟ್ಟಿಗರೊಬ್ಬರು ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ, ʼʼಈ ಹುಡುಗನ ಭಾವನೆ ನನಗೆ ಅರ್ಥವಾಗುತ್ತದೆ. ನಾನು 6 ವರ್ಷದವನಿದ್ದಾಗ ಬಡತನದ ಬೇಗೆಯಲ್ಲಿ ಬೇಯುತ್ತಿದ್ದೆವು. ನನ್ನ ಬರ್ತ್‌ಡೇ ದಿನ ಬೆಳಗ್ಗೆ ನಾನು ಅಳುತ್ತಿದ್ದೆ. ಕೇಕ್‌ ಮತ್ತು ಐಸ್‌ಕ್ರೀಂ ಕೊಳ್ಳಲು ಸಾಧ್ಯವಿಲ್ಲ ಎನ್ನುವುದೇ ನನ್ನ ಅಳುವಿಗೆ ಕಾರಣವಾಗಿತ್ತುʼʼ ಎಂದು ಹೇಳಿದ್ದಾರೆ. ʼʼಈ ವಿಡಿಯೊ ನೋಡಿ ಕಣ್ಣಂಚು ಒದ್ದೆಯಾಯ್ತುʼʼ ಎಂದಿದ್ದಾರೆ ಮತ್ತೊಬ್ಬರು. ʼʼನನಗೀಗ 50 ವರ್ಷ. ಆದರೂ ಈ ವಿಡಿಯೊ ನೋಡಿ ನನ್ನ ಕಣ್ಣು ತುಂಬಿ ಬಂತುʼʼ ಎಂದು ಇನ್ನೊಬ್ಬ ಭಾವುಕ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version