ಬೆಂಗಳೂರು: ಅದೊಂದು ಮೆಟ್ರೊ ರೈಲ್ವೆ ನಿಲ್ದಾಣ. ನಾಲ್ಕಾರು ಯೋಧರು ಮಾತನಾಡುತ್ತಾ ನಿಂತಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತ ಮಗುವೊಂದು ಓಡೋಡಿ ಬರುತ್ತದೆ. ಬಂದಿದ್ದೇ ಯೋಧರ ಬಳಿ ಹೋಗುತ್ತದೆ. ಮಗು ತಮ್ಮತ್ತ ಬರುತ್ತಿರುವುದನ್ನು ನೋಡಿದ ಯೋಧರು ಖುಷಿಯಾಗಿ ಅದರತ್ತ ತಿರುಗುತ್ತಾರೆ.
ಒಬ್ಬ ಯೋಧ ಬಗ್ಗೆ ಆ ಮಗುವಿನೊಂದಿಗೆ ಮಾತನಾಡಲು ಮುಂದಾಗುತ್ತಾರೆ. ಆಗ ಆ ಮಗು ಇದ್ದಕ್ಕಿದ್ದ ಹಾಗೇ ಯೋಧನ ಕಾಲು ಮುಟ್ಟಿ ನಮಸ್ಕರಿಸುತ್ತದೆ. ಇದರ ನಿರೀಕ್ಷೆಯಲ್ಲಿರದ ಯೋಧರು ಆಶ್ಚರ್ಯಗೊಳ್ಳುತ್ತಾರೆ. ತಮಗೆ ಈ ರೀತಿಯ ಗೌರವ ನೀಡಿದ ಆ ಪುಟ್ಟ ಮಗುವಿನ ತಲೆ ಸವರುತ್ತಾ ಮುದ್ದಿಸುತ್ತಾರೆ. ಇದನ್ನು ನೋಡುತ್ತಿದ್ದ ಅಕ್ಕಪಕ್ಕದಲ್ಲಿನ ಯೋಧರ ಕಣ್ಣುಗಳೂ ಅರಳುತ್ತವೆ…ಅಲ್ಲೊಂದು ಬಾವುಕ ವಾತಾವರಣ ನಿರ್ಮಾಣವಾಗುತ್ತದೆ.
ಹೀಗೊಂದು ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಹುತೇಕ ರಾಜಕಾರಣಿಗಳು, ಸೆಲೆಬ್ರಿಟಿಗಳು ಈ ವಿಡಿಯೊವನ್ನು ಹಂಚಿಕೊಂಡು, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುವ ಯೋಧರಿಗೆ ಪುಟ್ಟ ಬಾಲಕಿಯೊಬ್ಬಳು ಗೌರವ ತೋರಿಸಿದ್ದನ್ನು ಕೊಂಡಾಡುತ್ತಿದ್ದಾರೆ. ಲಕ್ಷಾಂತರ ಜನರು ಈ ವಿಡಿಯೊ ನೋಡಿ ಪುಟಾಣಿಯ ಸಂಸ್ಕಾರವನ್ನು ಹಾಡಿ ಹೊಗಳುತ್ತಿದ್ದಾರೆ.
ಈ ವಿಡಿಯೊ ಹಂಚಿಕೊಂಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, “ಈ ಮಗಳಿಗೆ ಶುಭ ಹಾರೈಕೆಗಳು ಮತ್ತು ಪುತ್ರಿಗೆ ಉತ್ತಮ ಮೌಲ್ಯಗಳನ್ನು ಕಲಿಸಿಕೊಟ್ಟ ಕುಟುಂಬಕ್ಕೆ ಕೃತಜ್ಞತೆಗಳು’ʼ ಎಂದು ಬರೆದಿದ್ದಾರೆ. ರಾಜ್ಯದ ಸಂಸದ ಪಿ ಸಿ ಮೋಹನ್ ಕೂಡ ಈ ವಿಡಿಯೊ ಶೇರ್ ಮಾಡಿದ್ದಾರೆ.
ಇದನ್ನೂ ಓದಿ|Viral Video | ಮಾವುತನ ಕೂರಿಸಿಕೊಂಡು ಸ್ವಿಮ್ ಮಾಡಿದ ಗಜರಾಯ