Site icon Vistara News

Viral Video: ದುಡ್ಡಿನ ಗಿಡ ನೆಟ್ಟಿದಿಯಾ ಎಂದವರಿಗೆ ಹೂಂ ಎಂದುಬಿಡಿ; ಯಾವುದಕ್ಕೂ ಈ ವಿಡಿಯೊ ನೋಡಿ

currency

currency

ಬೆಂಗಳೂರು: ಹಿಂದೆಲ್ಲ ನಾವು ಅಜ್ಜಿ ಹೇಳುತ್ತಿದ್ದ ಕಥೆಗಳಲ್ಲಿ ಹಣ ಬೆಳೆಯುವ ಮರದ ಬಗ್ಗೆ ಕೇಳಿದ್ದೆವು. ಬಾಲ್ಯದಲ್ಲಿ ಅಂತಹ ಮರ ಮನೆಯ ಅಂಗಳದಲ್ಲಿ ಇದ್ದಿದ್ದರೆ ಎಷ್ಟು ಚೆನ್ನ ಎಂದೆಲ್ಲ ಕಲ್ಪನೆ ಮಾಡಿಕೊಂಡು ಖುಷಿ ಪಟ್ಟಿದ್ದೆವು. ಇನ್ನು ದೊಡ್ಡದಾಗುತ್ತ ಬರುತ್ತಿದ್ದಂತೆ ನಾವು ಯಾವುದಾದರೂ ದುಬಾರಿ ವಸ್ತುಗಳನ್ನು ಖರೀದಿಸಬೇಕು ಎಂದಾಗ ಪಾಲಕರು ದುಡ್ಡು ಮರದಲ್ಲಿ ಬೆಳೆಯುತ್ತಾ? ಎಂದು ನಮ್ಮನ್ನು ಪ್ರಶ್ನಿಸಿ ಬಾಯಿ ಮುಚ್ಚಿಸುತ್ತಿದ್ದರು. ಮರದಿಂದ ಹಣ ಉದುರುವ ವೈರಲ್‌ ವಿಡಿಯೊವೊಂದನ್ನು (Viral Video) ನೋಡಿದಾಗ ಇದೆಲ್ಲ ನೆನಪಾಯಿತು. ಅರೆ! ನಿಜವಾಗಿಯೂ ಮರದಲ್ಲಿ ದುಡ್ಡು ಬೆಳೆಯುತ್ತಾ? ಎಂದು ಪ್ರಶ್ನಿಸುವ ಮುನ್ನ ಈ ವಿಡಿಯೊ ನೋಡಿ. ನಿಮ್ಮ ಮುಖದಲ್ಲಿ ನಗು ತನ್ನಿಂದ ತಾನೇ ಅರಳುತ್ತದೆ.

ದುಡ್ಡು ಬೆಳೆಯುವ ಮರ?

ಅದೊಂದು ನಗರ ಪ್ರದೇಶ. ರಸ್ತೆ‌ ಬದಿಯ ಫುಟ್‌ಪಾತ್‌ನಲ್ಲಿ ಹುಲುಸಾಗಿ ಬೆಳೆದ ಮರವನ್ನು ತೋರಿಸುವುದರೊಂದಿಗೆ ಈ ವಿಡಿಯೊ ಆರಂಭವಾಗುತ್ತಿದೆ. ಆ ಮರದ ಬಳಿಗೆ ಯುವಕನೊಬ್ಬ ಆಗಮಿಸುತ್ತಾನೆ. ಮರದ ಬುಡಕ್ಕೆ ಬಂದ ಆತ ತುದಿಯನ್ನೊಮ್ಮೆ ನಿರುಕಿಸಿ ಕಾಂಡಕ್ಕೆ ಮೃದುವಾಗಿ ಒದೆಯುತ್ತಾನೆ. ಅಚ್ಚರಿ ಎಂಬಂತೆ ಆಗ ಮರದಿಂದ ನೋಟುಗಳು ಉದುರತೊಡಗುತ್ತವೆ. ಅವನು ಅದನ್ನೆಲ್ಲ ಕಲೆಕ್ಟ್‌ ಮಾಡಿ ಮತ್ತೊಮ್ಮೆ ಒದೆಯುತ್ತಾನೆ. ಮತ್ತಷ್ಟು ದುಡ್ಡು ಬೀಳುತ್ತದೆ. ಆತ ಸಂತಸದಿಂದ ಅದನ್ನೆಲ್ಲ ಹೆಕ್ಕಿಕೊಂಡು ಜೇಬಿಗಿಳಿಸಿ ಹೊರಡುತ್ತಾನೆ.

ಇದನ್ನೆಲ್ಲ ಅಲ್ಲೆ ಪಕ್ಕದಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಗಮನಿಸುತ್ತಿದ್ದ. ಕುತೂಹಲದಿಂದ ನೋಡುತ್ತಿದ್ದ ಆತನಿಗೆ ಮರದ ಮೇಲಿನಿಂದ ದುಡ್ಡು ಎಲೆಯಂತೆ ಉದುರಿದಾಗ ಅಚ್ಚರಿಯಾಗಿತ್ತು. ಹಣ ಕಲೆಕ್ಟ್‌ ಮಾಡಿಕೊಂಡು ಮೊದಲ ಯುವಕ ಮರದ ಬುಡದಿಂದ ತೆರಳಿದಾಗ ಎರಡನೆ ಯುವಕ ನಿಧಾನವಾಗಿ ಅಲ್ಲಿಗೆ ಬರುತ್ತಾನೆ. ಬಳಿಕ ಎರಡೂ ಕೈಗಳಿಂದ ಮರವನ್ನು ಅಲುಗಾಡಿಸುತ್ತಾನೆ. ಆಗ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ.

ಎರಡನೇ ಯುವಕನಿಗೂ ದುಡ್ಡು ಸಿಕ್ತಾ?

ಮರವನ್ನು ಅಲುಗಾಡಿಸುತ್ತಿದ್ದಂತೆ ಮೇಲಿನಿಂದ ನೀರು ಸುರಿಯತೊಡಗುತ್ತದೆ! ಆ ಯುವಕ ಪೂರ್ತಿ ನೆನೆಯುತ್ತಾನೆ. ಆಗ ಪ್ರಾಂಕ್‌ ಮಾಡುತ್ತಿರುವುದು ಆತನ ಗಮನಕ್ಕೆ ಬರುತ್ತದೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, 8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Viral Video: ಯುವತಿಯನ್ನು ಚುಡಾಯಿಸಿದ್ದಕ್ಕೆ ಬೆಂಗಳೂರು ಪಬ್‌ನಲ್ಲಿ ಗಲಾಟೆ; ಅರೆನಗ್ನ ಸ್ಥಿತಿಯಲ್ಲಿ ಜಗಳ!

ನೆಟ್ಟಿಗರು ಏನಂದ್ರು?

ಈ ವಿಡಿಯೊವನ್ನು ನೋಡಿದ ಮಂದಿ ನಕ್ಕು ನಕ್ಕು ಸುಸ್ತಾಗಿದ್ದಾರೆ. ಜತೆಗೆ ತಹೇವಾರಿ ಕಮೆಂಟ್‌ ಮಾಡಿದ್ದಾರೆ. ಈ ವಿಡಿಯೊ ನೋಡಿ ಕಲಿಯಬಹುದಾದ ಪಾಠದ ಬಗ್ಗೆ ಮಾತನಾಡಿದ್ದಾರೆ. ʼʼದುರಾಸೆ ಒಳ್ಳೆಯದಲ್ಲʼʼ ಎಂದು ಒಬ್ಬರು ಹೇಳಿದ್ದಾರೆ. ” ಇದು ಅನುಭವ (ಅಂಕಲ್) ಮತ್ತು ಶಾರ್ಟ್ ಕಟ್ (ಹುಡುಗ) ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ” ಎಂದು ಇನ್ನೊಬ್ಬರು ತಮಾಷೆಯಾಗಿ ವಾಸ್ತವ ಸಂಗತಿಯನ್ನು ಮನದಟ್ಟು ಮಾಡಿದ್ದಾರೆ. ʼʼಘಟನೆಯನ್ನು ನೋಡುತ್ತಿದ್ದ ಆ ಹಿರಿಯ ವ್ಯಕ್ತಿಯ ನಗು ನನಗೆ ಇಷ್ಟವಾಯ್ತುʼʼ ಎಂದು ಮಗದೊಬ್ಬರು ಹೇಳಿದ್ದಾರೆ. ʼʼವೇಗವಾಗಿ ದುಡ್ಡು ಗಳಿಸುವ ಮಾರ್ಗವನ್ನು ಅನುಸರಿಸದ ಹಿರಿಯ ವ್ಯಕ್ತಿಗೆ ಗೌರವ ಸಲ್ಲಿಸಿʼʼ ಎಂದು ನೆಟ್ಟಿಗರೊಬ್ಬರು ಕರೆ ನೀಡಿದ್ದಾರೆ. ಇನ್ನೊಬ್ಬರು ʼಪಾನಿ ಪಾನಿʼ ಹಾಡನ್ನು ಉಲ್ಲೇಖಿಸಿದ್ದಾರೆ. ಒಟ್ಟಿನಲ್ಲಿ ಅತಿಯಾಸೆಯೇ ದುಃಖಕ್ಕೆ ಮೂಲ ಎನ್ನುವ ಮಾತು ಈ ವಿಡಿಯೊ ನೋಡಿದ ಬಳಿಕ ಅನೇಕರ ಮನಸ್ಸಲ್ಲಿ ಹೊಳೆದ್ದು ಸುಳ್ಳಲ್ಲ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version