ತಿರುವನಂತಪುರಂ: ಮೊಬೈಲ್ ಫೋನ್ ಕಾಲಿಡುವ ಮೊದಲು ಲ್ಯಾಂಡ್ ಫೋನ್‌ಗಳು (Land phone) ವ್ಯಾಪಕ ಬಳಕೆಯಲ್ಲಿದ್ದವು. ಫೋನ್ ನಂಬರ್‌ಗಳನ್ನು ಅದರಲ್ಲಿ ಸೇವ್ ಮಾಡುವ ಆಯ್ಕೆ ಇಲ್ಲದ ಕಾರಣ ಪುಸ್ತಕದಲ್ಲಿ ಬರೆದಿಡಲಾಗುತ್ತಿತ್ತು. ಮೊಬೈಲ್ ಬಂದ ಮೇಲೆ ನಂಬರ್ ಬರೆದಿಡಬೇಕಾದ ಕೆಲಸ ತಪ್ಪಿದೆ. ಹಿಂದೆಲ್ಲ ಸಣ್ಣ ಪುಸ್ತಕದಲ್ಲಿ ನಂಬರ್ ಬರೆದಿಡುತ್ತಿದ್ದ ನೆನಪನ್ನು ಈ ವಿಡಿಯೊ ನೆನಪಿಸುತ್ತದೆ. ಹಾಗಂತ ಈ ನಂಬರ್‌ಗಳನ್ನು ಸಾಮಾನ್ಯ ಪುಸ್ತಕದಲ್ಲಿ ಬರೆದಿಡಲಾಗಿಲ್ಲ. ಅತೀ ಮುಖ್ಯ ಡಾಕ್ಯುಮೆಂಟ್ ಒಂದರಲ್ಲಿ ಕಾಂಟ್ಯಾಕ್ಟ್ ನಂಬರ್ ಬರೆಯಲಾಗಿದೆ. ಸದ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ವೈರಲ್ (Viral Video) ಆಗಿದೆ. ಅಷ್ಟಕ್ಕೂ ಫೋನ್ ನಂಬರ್ ಬರೆಯಲು ಬಳಸಲಾದ ದಾಖಲೆ ಯಾವುದು? ವಿಡಿಯೊದಲ್ಲೇನಿದೆ? ಮುಂತಾದ ಕುತೂಹಲಗಳಿಗೆ ಇಲ್ಲಿದೆ ಉತ್ತರ.
The Passport Officer in Kerala hasn't yet recovered from the shock after seeing a person's passport which came for renewal🤣🤣 pic.twitter.com/LH5FmrpvbV
— Nationalist 🇮🇳 (@Nationalist2575) November 2, 2023
ವಿಡಿಯೊ ನೋಡಿ ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು
ಅಧಿಕಾರಿಯೊಬ್ಬರು ಪಾಸ್‌ಪೋರ್ಟ್ ಅನ್ನು ತೆರೆಯುವ ಮೂಲಕ ವಿಡಿಯೊ ಆರಂಭವಾಗುತ್ತದೆ. ಪಾಸ್‌ಪೋರ್ಟ್ ಅನ್ನು ರಿನೀವಲ್‌ಗಾಗಿ ಹಾಜರುಪಡಿಸಲಾಗಿತ್ತು. ಸಾಮಾನ್ಯವಾಗಿ ಆಗಾಗ ವಿದೇಶ ಪ್ರಯಾಣ ಮಾಡದವರ ಪಾಸ್‌ಪೋರ್ಟ್‌ನಲ್ಲಿ ಖಾಲಿ ಪುಟಗಳಿರುವುದು ಸಾಮಾನ್ಯ. ಈ ಖಾಲಿ ಪುಟಗಳನ್ನು ಸದುಪಯೋಗಪಡಿಸಲು ನಿರ್ಧರಿಸಿದ ಈ ಪಾಸ್‌ಪೋರ್ಟ್ ಹೊಂದಿದ ವ್ಯಕ್ತಿ ಅಲ್ಲೆಲ್ಲ ಫೋನ್ ನಂಬರ್ ಬರೆದಿಟ್ಟಿದ್ದಾನೆ! ಮಲಯಾಳಂನಲ್ಲಿ ಫೋನ್ ನಂಬರ್‌ಗಳ ಹೆಸರನ್ನು ಬರೆದಿದ್ದು, ಈ ಅಪರಿಚಿತ ʼಬುದ್ಧಿವಂತʼ ವ್ಯಕ್ತಿ ಕೇರಳದ ಮೂಲದವನು ಎನ್ನುವುದು ತಿಳಿದು ಬಂದಿದೆ. ಫೋನ್ ನಂಬರ್‌ನಿಂದ ಹಿಡಿದು ಕೆಲವು ಲೆಕ್ಕಾಚಾರಗಳನ್ನೂ ಈ ಪಾಸ್‌ಪೋರ್ಟ್‌ನಲ್ಲಿ ಗೀಚಲಾಗಿದೆ. ʼʼನವೀಕರಣಕ್ಕೆ ಬಂದ ಪಾಸ್‌ಪೋರ್ಟ್ ಅನ್ನು ನೋಡಿದ ಶಾಕ್‌ನಿಂದ ಅಧಿಕಾರಿ ಇನ್ನೂ ಹೊರ ಬಂದಿಲ್ಲʼʼ ಎಂದು ಕ್ಯಾಪ್ಶನ್ ಬರೆದು ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ.
ಕಮೆಂಟ್‌ಗಳ ಸುರಿಮಳೆ
ಸದ್ಯ ಈ ವಿಡಿಯೊವನ್ನು 70 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼಕೇರಳ ಶೇ. 100ರಷ್ಟು ಸಾಕ್ಷರತೆ ಹೊಂದಿರುವ ಪರಿಣಾಮ ಇದುʼʼ ಎಂದು ಹಲವರು ಹೇಳಿದ್ದಾರೆ. ʼʼಇದು ಪರಿಸರಸ್ನೇಹಿ ನಡೆʼʼ ಎಂದು ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ. ʼʼಈ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಸುವ ಅನುಭವವನ್ನು ಊಹಿಸಿಕೊಳ್ಳಿʼʼ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ʼʼಲಭ್ಯವಿರುವ ಸಂಪನ್ಮೂಲವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದಕ್ಕೆ ಇದು ಉತ್ತಮ ಉದಾಹರಣೆ. ಈ ವ್ಯಕ್ತಿಯ ಪರಿಸರ ಸ್ನೇಹಕ್ಕೆ ನೋಬೆಲ್ ಪ್ರಶಸ್ತಿ ಸಿಗಬೇಕುʼʼ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ʼʼಮರಗಳನ್ನು ಉಳಿಸಿ, ವಸ್ತುಗಳನ್ನು ಪುನರ್ ಬಳಕೆ ಮಾಡಿ ಎನ್ನುವ ಮಾತನ್ನು ಈ ವ್ಯಕ್ತಿ ಗಂಭೀರವಾಗಿ ತೆಗೆದುಕೊಂಡಿದ್ದಾರೆʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಶ್ವಾನದ ವಿಚಾರದಲ್ಲಿ ಗಲಾಟೆ; ಮಹಿಳೆಯ ಕಪಾಳಕ್ಕೆ ಹೊಡೆದ ನಿವೃತ್ತ ಐಎಎಸ್ ಅಧಿಕಾರಿ
ಇನ್ನು ಕೆಲವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಾಸ್‌ಪೋರ್ಟ್ ಅನ್ನು ದುರ್ಬಳಕೆ ಮಾಡಿಕೊಂಡ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಗೀಚುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ತಿಳಿಸಿದ್ದಾರೆ. “ಅಧಿಕಾರಿಗಳು ಈ ಪಾಸ್‌ಪೋರ್ಟ್ ಅನ್ನು ಹಿಂತೆಗೆದುಕೊಳ್ಳಬಹುದು ಮತ್ತು ಈ ದಾಖಲೆಯ ದುರುಪಯೋಗಕ್ಕಾಗಿ ನವೀಕರಣವನ್ನು ನಿರಾಕರಿಸಬಹುದು” ಎಂದು ಬಳಕೆದಾರರು ಹೇಳಿದ್ದಾರೆ. ಇನ್ನೊಬ್ಬರು ಆ ವ್ಯಕ್ತಿಯ ಅಜಾಗರೂಕತೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ʼʼಅತ್ಯಮೂಲ್ಯ ದಾಖಲೆಯಾದ ಪಾಸ್‌ಪೋರ್ಟ್ ಅನ್ನು ಅಜಾಗರೂಕತೆಯಿಂದ ಬಳಸಿದ್ದಕ್ಕಾಗಿ ಆ ವ್ಯಕ್ತಿಗೆ ಸೂಕ್ತ ದಂಡ ವಿಧಿಸಲಾಗಿದೆ ಎಂದು ಭಾವಿಸುತ್ತೇನೆʼʼ ಎಂದಿದ್ದಾರೆ. ಒಟ್ಟಿನಲ್ಲಿ ಪ್ರಮುಖ ದಾಖಲೆಯೊಂದರ ಬಗ್ಗೆ ತೋರಿದ ನಿರ್ಲಕ್ಷ್ಯ ಚರ್ಚೆಗೆ ಗ್ರಾಸವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ