ನವದೆಹಲಿ: ಚಿನ್ನ, ಬೆಳ್ಳಿ, ಹಣ, ಎಲೆಕ್ಟ್ರಾನಿಕ್ ವಸ್ತುಗಳು ಕಳ್ಳತನವಾಗುವುದು ಮಾಮೂಲು. ಆದರೆ ಚಂದದ ಗಿಡಗಳಿರುವ ಪಾಟ್‌ಗಳನ್ನೂ ಕಳ್ಳತನ ಮಾಡುವ ಖದೀಮರು ನಮ್ಮಲ್ಲಿದ್ದಾರೆ. ದುಬಾರಿ ಕಾರಿನಲ್ಲಿ ಬಂದು ಹೂಕುಂಡಗಳನ್ನೂ ಕಳ್ಳತನ ಮಾಡಿಕೊಂಡು ಹೋಗಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: G20 Meeting : ಬೆಂಗಳೂರಿನಲ್ಲಿ ನಡೆಯಲಿದೆ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ ಸಭೆ
ಗುರುಗ್ರಾಮದಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಮೊದಲನೇ ಜಿ20 ಶೃಂಗಸಭೆ ನಡೆಯಲಿದೆ. ಅದಕ್ಕೆಂದು ಸಕಲ ತಯಾರಿ ನಡೆಸಿಕೊಳ್ಳಲಾಗುತ್ತಿದೆ. ಜಿ20 ಸಭೆ ನಡೆಯುವ ಸ್ಥಳದ ಬಳಿ ಚಂದದ ಹೂಕುಂಡಗಳನ್ನೂ ಇಡಲಾಗಿದೆ. ಇತ್ತೀಚೆಗೆ ಯಾರೋ ಇಬ್ಬರು ವ್ಯಕ್ತಿಗಳು ವಿಐಪಿ ಪರವಾನಗಿ ಪ್ಲೇಟ್ ಇರುವ ಅತ್ಯಾಧುನಿಕ ಕಾರಿನಲ್ಲಿ ಬಂದಿದ್ದು, ಆ ಹೂಕುಂಡಗಳಲ್ಲಿ ಕೆಲವನ್ನು ಎತ್ತಿಕೊಂಡು ಹೋಗಿದ್ದಾರೆ. ಅದರ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.
ಈ ಬಗ್ಗೆ ಗುರುಗ್ರಾಮದ ಪೊಲೀಸರಿಗೂ ಮಾಹಿತಿ ತಲುಪಿದೆ. ಪ್ರಕರಣವನ್ನು ತನಿಖೆ ನಡೆಸುತ್ತಿರುವುದಾಗಿ ಹೇಳಿರುವ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿದ್ದಾರೆ.
ಗುರುಗ್ರಾಮದಲ್ಲಿ ಮಾರ್ಚ್ 1 ಮತ್ತು 2ರಂದು ಜಿ20 ವಿದೇಶಾಂಗ ಸಚಿವರ ಸಭೆ ನಡೆಯಲಿದೆ. ಸಭೆಯಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ಬ್ರಿಟನ್‌ನ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಕಾರ್ಯದರ್ಶಿ ಜೇಮ್ಸ್ ಕ್ಲವರ್ಲಿ ಮತ್ತು ಚೀನಾದ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಭಾಗವಹಿಸಲಿದ್ದಾರೆ. ಒಟ್ಟು 40 ದೇಶಗಳು ಸಭೆಯಲ್ಲಿ ಭಾಗವಹಿಸಲಿದೆ.