ನವದೆಹಲಿ: ಸಾಮಾನ್ಯವಾಗಿ ನಾವು ಓಡಾಡುವಾಗ ದಾರಿ ಬದಿ, ರಸ್ತೆ ಬದಿ ಕುಸಿದು ಬಿದ್ದ ಚಿಕ್ಕ ಪ್ರಾಣಿ, ಪಕ್ಷಿಯನ್ನು ಕಂಡರೆ ಏನು ಮಾಡುತ್ತೇವೆ? ಇದರ ಉಸಾಬರಿ ನಮಗ್ಯಾಕೆ ಎಂದು ನಿರ್ಲಕ್ಷ್ಯದಿಂದ ಮುಂದೆ ಸಾಗುತ್ತೇವೆ. ಅಬ್ಬಬ್ಬ ಎಂದರೆ ಕೈಯಲ್ಲಿ ನೀರಿದ್ದರೆ ಕುಡಿಸಲು ಹೋಗುತ್ತೇವೆ. ಬಳಿಕವೂ ಅದು ಎಚ್ಚರಗೊಳ್ಳದಿದ್ದರೆ ನಮ್ಮ ಪಾಡಿಗೆ ಹೊರಟು ಹೋಗುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಾಗಲ್ಲ. ಪ್ರಜ್ಞೆ ತಪ್ಪಿ ಬಿದ್ದಿದ್ದ ಊಸರವಳ್ಳಿಯನ್ನು ನೋಡಿ ಅದರ ರಕ್ಷಣೆಗೆ ಧಾವಿಸುತ್ತಾನೆ. ಯಾವುದೇ ಚಲನೆ ಇಲ್ಲದೆ ಬಿದ್ದಿದ್ದ ಅದರಲ್ಲಿ ಇನ್ನೂ ಕುಟುಕು ಜೀವ ಇದೆ ಎಂದು ಅರ್ಥ ಮಾಡಿಕೊಂಡ ಆತ ಅದರ ಜೀವ ಉಳಿಸಲು ಪಣ ತೊಡುತ್ತಾನೆ. ಕೊನೆಗೂ ತನ್ನ ಪಯತ್ನದಲ್ಲಿ ಯಶಸ್ವಿಯಾಗಿ ʼದೇವತಾ ಮನುಷ್ಯʼನಾಗುತ್ತಾನೆ. ಆ ಮೂಲಕ ಈ ಭೂಮಿ ಮೇಲೆ ಎಲ್ಲ ಜೀವಿಗಳಿಗೂ ಸಮಾನ ಪ್ರಾಧಾನ್ಯತೆ ಇದೆ ಎನ್ನುವುದನ್ನು ಸಾರುತ್ತಾನೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video).
ವೈರಲ್ ವಿಡಿಯೊದಲ್ಲೇನಿದೆ?
ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಈಗಾಗಲೇ 8 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಊಸರವಳ್ಳಿಯ ಜೀವ ಉಳಿಸಲು ಆತ ಬಾಯಿಯಿಂದ ಬಾಯಿಗೆ ಉಸಿರಾಟ, ಸಿಪಿಆರ್ ಮುಂತಾದ ವಿಧಾನಗಳನ್ನು ಬಳಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆತನ ಸಹಾಯವಿಲ್ಲದಿದ್ದರೆ ಆ ಓತಿಕ್ಯಾತ ರಸ್ತೆ ಬದಿ ಸಾಯುತ್ತಿತ್ತು. ಸದ್ಯ ಈತನನ್ನು ನೆಟ್ಟಿಗರು ಜೀವ ಉಳಿಸಿದ ಹೀರೊ ಎಂದು ಬಣ್ಣಿಸುತ್ತಿದ್ದಾರೆ.
He is amazing!pic.twitter.com/IVdDqn14pU
— Figen (@TheFigen_) October 10, 2023
ನಡೆದಾಡುತ್ತಿದ್ದ ಆ ವ್ಯಕ್ತಿಗೆ ಗಿಡದ ಕೆಳಗೆ ಚಲನೆ ಇಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ ಊಸರವಳ್ಳಿಯೊಂದು ಕಾಣ ಸಿಗುತ್ತದೆ. ಅದು ಇನ್ನೂ ಜೀವಂತವಾಗಿದೆ ಎಂದು ತಿಳಿದುಕೊಂಡ ಆತ ಅದಕ್ಕೆ ಸ್ವಲ್ಪ ನೀರು ಕುಡಿಸಲು ಪ್ರಯತ್ನಿಸಿ ಮೃದುವಾಗಿ ಬೆನ್ನು ಉಜ್ಜಲು ಆರಂಭಿಸುತ್ತಾನೆ. ಇದ್ಯಾವ ಪ್ರಯತ್ನವೂ ಫಲಿಸದಿದ್ದಾಗ ಬಾಯಿಂದ ಬಾಯಿಗೆ ಉಸಿರಾಟ ನೀಡುವ ಪ್ರಕ್ರಿಯೆ ಆರಂಭಿಸುತ್ತಾನೆ. ಆಗ ಊಸರವಳ್ಳಿ ನಿಧಾನವಾಗಿ ಉಸಿರಾಡಲು ಆರಂಭಿಸುತ್ತದೆ.
ಸ್ವಲ್ಪ ಚೇತರಿಸಿಕೊಂಡ ಊಸರವಳ್ಳಿಯನ್ನು ಆತ ಮನೆಗೆ ಕರೆದುಕೊಂಡು ಹೋಗಿ ಇನ್ನೂ ಹೆಚ್ಚಿನ ಆರೈಕೆ ಮಾಡುತ್ತಾನೆ. ಔಷಧವನ್ನು ಇಂಜೆಕ್ಷನ್ ಮೂಲಕ ಬಾಯಿಗೆ ನೀಡುತ್ತಾನೆ. ಹೀಗೆ ಆತನ ಸತತ ಪ್ರಯತ್ನ, ಉಪಚಾರದ ಫಲವಾಗಿ ಊಸರವಳ್ಳಿ ಸಂಪೂರ್ಣ ಚೇತರಿಸಿಕೊಳ್ಳುತ್ತದೆ. ಬಳಿಕ ಅದನ್ನು ಸುರಕ್ಷಿತವಾಗಿ ಹೊರಗೆ ಬಿಡಲಾಗುತ್ತದೆ.
ʼಅದ್ಭುತ ವ್ಯಕ್ತಿʼ
ಎಕ್ಸ್‌ನಲ್ಲಿ ಈ ವಿಡಿಯೊಗೆ ʼಅದ್ಭುತ ವ್ಯಕ್ತಿʼ ಎಂಬ ಶೀರ್ಷಿಕೆ ನೀಡಲಾಗಿದೆ. ʼʼಹೌದು ನಿಜವಾಗಿಯೂ ಆತ ಅದ್ಭುತʼʼ ಎಂದು ಒಬ್ಬರು ಹೇಳಿದ್ದಾರೆ. ʼʼಆತನಿಗೆ ದೇವರು ಆಶೀರ್ವಾದ ನೀಡಲಿ. ಆತನಿಗೆ ಸ್ವರ್ಗದಲ್ಲಿ ವಿಶೇಷ ಸ್ಥಾನ ಸಿಗಲಿʼʼ ಎಂದು ಇನ್ನೊಬ್ಬರು ಪ್ರಾರ್ಥಿಸಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ, ʼʼಈ ವಿಡಿಯೊ ದೊಡ್ಡ ಪಾಠವನ್ನೇ ಕಲಿಸುತ್ತದೆ. ಯಾವತ್ತೂ ಪ್ರಯತ್ನ ಬಿಡಬೇಡಿ; ಪವಾಡ ನಡೆದೇ ನಡೆಯುತ್ತದೆ ಎನ್ನುವುದನ್ನು ಇದರಿಂದ ಕಲಿತುಕೊಂಡೆʼʼ ಎಂದಿದ್ದಾರೆ. ʼʼಈ ವ್ಯಕ್ತಿ ಊಸರವಳ್ಳಿಗೆ ಮರುಜನ್ಮ ನೀಡಿದ್ದಾನೆ. ಅವನೊಬ್ಬ ಅದ್ಭುತʼʼ ಎಂದು ಮಗದೊಬ್ಬರು ಉದ್ಘರಿಸಿದ್ದಾರೆ.
ಇದನ್ನೂ ಓದಿ: Viral News: ವೈದ್ಯೆಯನ್ನೇ ರಕ್ಷಿಸಿದ ಬಿಎಂಟಿಸಿ ಬಸ್ ಚಾಲಕ; ಇದು ರಿಯಲ್ ಹೀರೊನ ಕತೆ!
ಈ ರೀತಿಯ ಘಟನೆಗಳು ಹಿಂದೆಯೂ ನಡೆದಿವೆ. ಯುವಕನೊಬ್ಬ ನಾಯಿಯೊಂದಕ್ಕೆ ಸಿಪಿಆರ್ ನೀಡಿ ಮೆಚ್ಚುಗೆ ಗಳಿಸಿದ್ದ. ನಡೆಯುತ್ತಿದ್ದ ನಾಯಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿತ್ತು. ಕೂಡಲೇ ಆ ಯುವಕ ಧಾವಿಸಿ ಸಿಪಿಆರ್ ವಿಧಾನದ ಮೂಲಕ ನಾಯಿಯ ಜೀವ ಕಾಪಾಡಿದ್ದ. ಬಳಿಕ ನಾಯಿ ಸಂಪೂರ್ಣ ಚೇತರಿಸಿಕೊಂಡಿತ್ತು.