Site icon Vistara News

Viral Video: ಇಲ್ಲೊಬ್ಬ ರಿಯಲ್‌ ಸ್ಪೈಡರ್‌ ಮ್ಯಾನ್‌; ಯಾರೂ ಅನುಕರಿಸಬೇಡಿ ಎಂದ ನೆಟ್ಟಿಗರು

building

building

ಬೆಂಗಳೂರು: ಕಟ್ಟಡದಿಂದ ಕಟ್ಟಡಕ್ಕೆ ಜಿಗಿಯುವುದು, ಗಗನ ಚುಂಬಿ ಕಟ್ಟಡದಲ್ಲಿ ಸ್ಟಂಟ್‌ ಮಾಡುವುದು ಇತ್ಯಾದಿ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಯುವಕ 8 ಅಂತಸ್ತಿನ ಕಟ್ಟಡವನ್ನು ಕೇವಲ 27 ಸೆಕೆಂಡ್‌ಗಳಲ್ಲಿ ಇಳಿದಿದ್ದಾನೆ ಎಂದರೆ ನಂಬುತ್ತೀರಾ? ಅದೂ ಆತ ಮೆಟ್ಟಿಲಿನ ಮೂಲಕ ಇಳಿದಿಲ್ಲ ಎನ್ನುವುದೇ ಗಮನಿಸಬೇಕಾದ ಸಂಗತಿ. ನೇತಾಡಿಕೊಂಡೇ ಈ ಸಾಹಸ ಪ್ರದರ್ಶಿಸಿದ್ದಾನೆ. ರೀಲ್‌ನಲ್ಲಿ ಅಲ್ಲ ರೀಯಲ್‌ ಆಗಿ ಅಪಾಯಕಾರಿ ಸಾಹಸ ಮಾಡಿದ್ದಾನೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral video).

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೊವನ್ನು ಈಗಾಗಲೇ 17 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆತ ಹಗ್ಗದ ಸಹಾಯವಿಲ್ಲದೆ ಕೇವಲ ಕೈ ಬಲದಿಂದ ಕಟ್ಟಡದಿಂದ ಜೋತು ಬಿದ್ದುಕೊಂಡೇ ಇಳಿದಿದ್ದಾನೆ. ಪ್ರತಿ ಮಹಡಿಯ ಅಂಚುಗಳನ್ನು ಹಿಡಿದು ಆತ ಚುರುಕಿನ ನಡೆ ಪ್ರದರ್ಶಿಸಿದ್ದಾನೆ.

ವಿಡಿಯೊದಲ್ಲೇನಿದೆ?

ವಿಡಿಯೊದ ಆರಂಭದಲ್ಲಿ ಯುವಕನೊಬ್ಬ ಬಹುಮಹಡಿ ಕಟ್ಟಡದ ಎಂಟನೇ ಅಂತಸ್ತಿನಲ್ಲಿ ನಿಂತಿರುವುದು ಕಂಡು ಬರುತ್ತದೆ. ಬಳಿಕ ಆತ ಮಲಗಿ ಮಹಡಿಯ ಅಂಚನ್ನು ಹಿಡಿದು ಉಲ್ಟಾ ಜೋತು ಬಿದ್ದು ಇನ್ನೊಂದು ಮಹಡಿಗೆ ಜಿಗಿಯುತ್ತಾನೆ. ಹೀಗೆ ಕೌಶಲದಿಂದ ಪ್ರತಿ ಮಹಡಿಯನ್ನು ವೇಗವಾಗಿ ಇಳಿದು ನೆಲ ಮಹಡಿ ತಲುಪುತ್ತಾನೆ. ಇದನ್ನು ನೆಟ್ಟಿಗರು ಬೆರಗುಗಣ್ಣಿನಿಂದ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆತನ ಚುರುಕುತನ ಎಲ್ಲರ ಗಮನ ಸೆಳೆದಿದೆ. ಈ ಸಾಹಸ ಎಲ್ಲರಿಂದಲೂ ಸಾಧ್ಯವಿಲ್ಲ. ಇದು ಆತನ ಅಸಾಧರಣ ವಿಲ್‌ ಪವರ್‌ ಅನ್ನೂ ತೋರಿಸುತ್ತದೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ನೆಟ್ಟಿಗರು ಏನಂದ್ರು?

ಈ ವಿಡಿಯೊ ನೋಡಿ ಅನೇಕ ನೆಟ್ಟಿಗರು ಆಶ್ವರ್ಯಚಕಿತರಾಗಿದ್ದಾರೆ. ಜತೆಗೆ ಇದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಯುವಕನ ಧೈರ್ಯ ಮತ್ತು ದೈಹಿಕ ಪರಾಕ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಅಪಾಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಇಂತಹ ಅಪಾಯಕಾರಿ ಸಾಹಸ ಮಾಡಲು ಇತರರನ್ನು ಪ್ರಚೋದಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವಕ್ಕೇ ಕುತ್ತು ತರುವ ಅಪಾಯವಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಯಾರೂ ಪ್ರಯತ್ನಿಸಲು ಹೋಗಬೇಡಿ ಎಂದು ಹಲವರು ಮನವಿ ಮಾಡಿದ್ದಾರೆ. ರೋಮಾಂಚಕ ಮನರಂಜನೆ ಮತ್ತು ಅನಗತ್ಯ ಅಪಾಯದ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚೆಯನ್ನು ಈ ವಿಡಿಯೊ ಹುಟ್ಟು ಹಾಕಿದೆ.

ಇದನ್ನೂ ಓದಿ: Viral Video: ಕೃಷಿ ಹೊಂಡಕ್ಕೆ ಬಿದ್ದಿದ್ದ ಮರಿಯಾನೆ ರಕ್ಷಿಸಿದ ಅರಣ್ಯ ಇಲಾಖೆ

ವೈರಲ್‌ ಯುಗದಲ್ಲಿ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿಕೊಳ್ಳಲು ಯುವ ಜನತೆ ಎಂತಹ ಹುಚ್ಚು ಸಾಹಸ ಮಾಡಲು ಹಿಂಜರಿಯುವುದಿಲ್ಲ ಎನ್ನುವುದು ಅಪಾಯಕಾರಿ ಬೆಳವಣಿಗೆ. ಅವರು ಸ್ವತಃ ಅಪಾಯಕ್ಕೆ ಗುರಿಯಾಗುವುದಲ್ಲದೆ ನೋಡುಗರನ್ನೂ ಪ್ರಚೋದಿಸಿ ಅಪಾಯಕ್ಕೆ ತಳ್ಳುತ್ತಾರೆ. ಹೀಗಾಗಿ ಇಂಟರ್‌ನೆಟ್‌ ಅನ್ನು ಮಕ್ಕಳು ನೋಡುವಾಗ ಅವರ ಮೇಲೆ ಒಂದು ಕಣ್ಣಿಟ್ಟಿಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ. ಯಾವುದು ಸರಿ, ತಪ್ಪು ಎನ್ನುವುದನ್ನು ಮಕ್ಕಳಿಗೆ ತಿಳಿ ಹೇಳಬೇಕಿರುವುದು ಪೋಷಕರ ಆದ್ಯ ಕರ್ತವ್ಯ ಎಂದು ಸಲಹೆ ನೀಡುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version