ಏನೇನೋ ಮಾಡಿ ಗಿನ್ನಿಸ್ ದಾಖಲೆಯ ಪ್ರಯತ್ನ ಮಾಡುತ್ತಾರೆ. ಅದು ಒಂದು ಗಂಟೆಯಲ್ಲಿ ಅತ್ಯಧಿಕ ದೋಸೆ ತಿನ್ನುವುದರಿಂದ ಹಿಡಿದು, ಓಡುತ್ತಿರುವ ಕಾರಿನ ಚಕ್ರ ಬದಲಾಯಿಸುವವರೆಗೆ ಸಾಮಾನ್ಯ ಮನುಷ್ಯರು ಮಾಡಲಾಗದ ಸಾಧನೆಯನ್ನು ಅಸಾಮಾನ್ಯ ರೀತಿಯಲ್ಲಿ ಮಾಡಿ ತೋರಿಸಿ ಗಿನ್ನಿಸ್ ದಾಖಲೆಯಲ್ಲಿ ತನ್ನ ಹೆಸರನ್ನು ಅಚ್ಚಾಗಿಸುವುದರಲ್ಲಿ ಮನುಷ್ಯನಿಗೇನೋ ಸಾಧನೆಯ ಖುಷಿ. ಆದರೆ ಇಲ್ಲೊಬ್ಬನ ಗಿನ್ನಿಸ್ ದಾಖಲೆ ನಿಜಕ್ಕೂ ಶ್ಲಾಘನೀಯ. ಈತ ಮಾಡಿದ ದಾಖಲೆ ಸಾಮಾನ್ಯರೂ ಮಾಡಬಹುದಾದಂಥದ್ದೇ ಆದರೂ, ಇಂಥದ್ದೊಂದು ದಾಖಲೆಯ ಯೋಚನೆ ಆತನಿಗೆ ಬಂದಿದ್ದಕ್ಕೇ ಇಂದು ಸಾಮಾಜಿಕ ಜಾಲತಾಣದಲ್ಲಿ ಆತನೆಡೆಗೆ ಒಂದು ಮೆಚ್ಚುಗೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ.
ಈತ ಮಾಡಿದ ಸಾಧನೆ ಗಿಡ ನೆಟ್ಟಿದ್ದು! ಅರೆ, ಗಿಡ ನೆಡುವುದರಲ್ಲೇನು ವಿಶೇಷ ಎನ್ನುತ್ತೀರಾ? ಎಲ್ಲರೂ ಮಾಡದ ಸಾಧನೆ ಇದರಲ್ಲೇನಿದೆ ಎಂದು ತಲೆ ಕೆಡಿಸಬೇಡಿ. ಈತ ನೆಟ್ಟ ಗಿಡಗಳ ಸಂಖ್ಯೆ ಒಂದೆರಡಲ್ಲ, ನೂರಿನ್ನೂರೂ ಅಲ್ಲ. 23,060! ಅದೂ 24 ಗಂಟೆಗಳ ಅವಧಿಯಲ್ಲಿ.
ಹೌದು. ನಂಬಿದರೆ ನಂಬಿ, ಬಿಟ್ಟರೆ ಬಿಡಿ. 24 ಗಂಟೆಗಳಲ್ಲಿ ಒಬ್ಬಾತ ಇಷ್ಟೊಂದು ಗಿಡ ಹೇಗೆ ನೆಟ್ಟಾನು ಎಂದು ಅನಿಸಿದರೆ ಈ ವಿಡಿಯೋ ನೋಡಬಹುದು. ಕೆನಡಾದ 23ರ ಹರೆಯದ ಆಂಟೋನಿ ಮೋಸಸ್ ಎಂಬ ಮ್ಯಾರಥಾನರ್ ಈಗ ಸುದ್ದಿಯಲ್ಲಿದ್ದಾರೆ. ಒಳ್ಳೆಯ ಕೆಲಸವೊಂದನ್ನು ಮಾಡುವ ಮೂಲಕ ಅದನ್ನು ಗಿನ್ನಿಸ್ ದಾಖಲೆಯಾಗಿಸಿ ವಿಶ್ವದೆಲ್ಲೆಡೆ ಜನರಿಗೆ ಉತ್ತಮ ಸಂದೇಶ ರವಾನಿಸುವ ಉದ್ದೇಶವನ್ನು ಹೊತ್ತು ಕಾಡು ಬೆಳೆಸುವ ಮ್ಯಾರಥಾನ್ ಮಾಡಿದ್ದಾರೆ. ಅದೂ ಕೂಡಾ ಸೂಪರ್ ಫಾಸ್ಟ್ ಆಗಿ ಮಾಡುವ ಮೂಲಕ.
ನಾರ್ವೆಯ ಮಾಜಿ ಪರಿಸರ ಸಚಿವರಾದ ಎರಿಕ್ ಸೋಲೆಮ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಇಂಥದ್ದೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈತ ಮ್ಯಾರಥಾನ್ ರೀತಿಯಲ್ಲಿ ಗಿಡ ನೆಡುತ್ತಾ ಸಾಗುವ 15 ಸೆಕೆಂಡುಗಳ ವಿಡಿಯೋ ಇದಾಗಿದೆ. ʻವಾವ್! 23ರ ಹರೆಯದ ಈತ ಕೇವಲ 24 ಗಂಟೆಗಳಲ್ಲಿ 23,060 ಗಿಡಗಳನ್ನು ನೆಟ್ಟು ವಿಶ್ವದಾಖಲೆ ಮಾಡಿದ್ದಾರೆ. ಆಂಟೋನಿ ಮೋಸೆಸ್ ಎಂಬ ಹೆಸರಿನ ಈ ಪರಿಸರ ಪ್ರೇಮಿ ಒಂದು ನಿಮಿಷಕ್ಕೆ ೧೬ ಗಿಡಗಳನ್ನು ನೆಡುವ ಚಾಕಚಕ್ಯತೆ ಹೊಂದಿದ್ದಾರೆ. ಅಂದರೆ ಒಂದು ಗಿಡ ನೆಡಲು ಇವರು ತೆಗೆದುಕೊಳ್ಳುವ ಸಮಯ ೩.೭೫ ಸೆಕೆಂಡುಗಳು ಮಾತ್ರʼ ಎಂಬ ವಿವರಣೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಇದರಲ್ಲಿ ಆಂಟೋನಿ ಉರಿದು ಕರಕಲಾಗಿ ಬಿದ್ದಿರುವ ಮರಗಳಿದ್ದ ಜಾಗಗಳಲ್ಲಿ ಬಗ್ಗಿ ಸಾಗುತ್ತಾ, ಗುಂಡಿಡಿ ಮಾಡಿ ಸಸಿಯನ್ನು ಕೈಯಲ್ಲಿ ನೆಟ್ಟು, ಒಂದಿಷ್ಟು ಜಾಗ ಬಿಟ್ಟು ಮತ್ತೊಂದು ಸಸಿ ನೆಡುತ್ತಾ ಸಾಗುವ ದೃಶ್ಯವಿದೆ. ಈ ವಿಡಿಯೋವನ್ನು 2021ರಲ್ಲಿ ಚಿತ್ರೀಕರಿಸಲಾಗಿದ್ದು, ಈಗ ಪ್ರಚಾರಕ್ಕೆ ಬಂದಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ, ಅತೀ ಹೆಚ್ಚು ಗಿಡಗಳನ್ನು ನೆಟ್ಟಿರುವ ಸಾಧನೆಯನ್ನು ಮಾಡಿದಾತ ಕೆನಡಾದ ಆಂಟೋನಿ ಮೋಸೆಸ್ ಇವರು 24 ಗಂಟೆಗಳಲ್ಲಿ 23,060 ಗಿಡಗಳನ್ನು ಜುಲೈ 17, 2021ರಂದು ನೆಟ್ಟಿರುತ್ತಾರೆ ಎಂದು ದಾಖಲಾಗಿದೆ.
ಈ ಪರಿಸರ ಪ್ರೇಮಿ ಮ್ಯಾರಥಾನರ್‌ನ ಈ ಬಗೆಯ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಿನ್ನಿಸ್ ದಾಖಲೆ ಮಾಡುವಾಗಲೂ ತನ್ನ ಪರಿಸರ ಪ್ರೇಮ ಮೆರೆದ, ಹಾಗೂ ಇತರರಿಗೆ ಸಂದೇಶ ರವಾನಿಸಿದ ಈ ಯುವಕನ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬದಲಾಗುತ್ತಿರುವ ತಾಪಮಾನ, ಹೆಚ್ಚುತ್ತಿರುವ ಮಾಲಿನ್ಯ ಹಾಗೂ ಇದಕ್ಕಿರುವ ಏಕೈಕ ಮಾರ್ಗವೆಂದರೆ ಗಿಡಗಳನ್ನು ಬೆಳೆಸುವುದು ಎಂಬ ಸಂದೇಶವನ್ನು ತನ್ನ ಗಿನ್ನಿಸ್ ದಾಖಲೆಯ ಮೂಲಕ ಆಂಟೋನಿ ವಿಶ್ವಕ್ಕೆ ಸಾರಿದ್ದಾರೆ.
ಇದನ್ನೂ ಓದಿ: Viral Video: ಕಾರ್ ಬಾನೆಟ್ ಮೇಲೆ 20 ಕಿ.ಮೀ. ಟ್ರಾಫಿಕ್ ಪೊಲೀಸ್‌ನನ್ನು ಎಳೆದುಕೊಂಡ ಮಾದಕವ್ಯಸನಿ ಡ್ರೈವರ್