Site icon Vistara News

Viral Video: ಮರಿಯನ್ನು ಕಾಪಾಡಿಕೊಳ್ಳಲು ಮೊಸಳೆ ಜತೆ ಕುಸ್ತಿಗೆ ನಿಂತ ಆನೆ! ವೈರಲ್‌ ಆಯ್ತು ವಿಡಿಯೊ

#image_title

ಬೆಂಗಳೂರು: ಆನೆಗಳನ್ನು ಬುದ್ಧಿವಂತ, ಭಾವನಾತ್ಮಕ ಮತ್ತು ಸೌಮ್ಯ ಪ್ರಾಣಿಗಳು ಎಂದು ಕರೆಯಲಾಗುತ್ತದೆ. ಆನೆಗಳು ತಮ್ಮ ಮರಿಗಳನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚೇ ಬುದ್ಧಿವಂತಿಕೆ ಬಳಸಿಕೊಳ್ಳುತ್ತವೆ. ಅದೇ ರೀತಿ ತಾಯಿ ಆನೆಯೊಂದು ತನ್ನ ಮರಿಯನ್ನು ಕಾಪಾಡಿಕೊಳ್ಳುವುದಕ್ಕೆ ಮಾಡಿದ ಸಾಹಸದ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಎತ್ತಿ ತೋರಿಸುವಂತಹ ಆ ವಿಡಿಯೊ ವೈರಲ್‌ (Viral Video) ಕೂಡ ಆಗಿದೆ.

ಆನೆಯೊಂದು ತನ್ನ ಮರಿಯ ಜತೆ ನೀರಿರುವ ಕೊಳಕ್ಕೆ ಬರುತ್ತದೆ. ಬಿಸಿಲ ಬೇಗೆಯಲ್ಲಿ ಸ್ವಲ್ಪ ಹೊತ್ತು ನೀರಿನಲ್ಲಿ ಆಟವಾಡಿ ಆರಾಮಾಗುವ ಉದ್ದೇಶದಿಂದ ಆನೆ ಬಂದಿರುತ್ತದೆ. ಹಾಗೆಯೇ ಪುಟಾಣಿ ಆನೆ ಮರಿಯು ತನ್ನ ತಾಯಿಯ ಬಾಲದಂತೆ ಹಿಂದೆಯೇ ಬಂದು ನೀರಿಗಿಳಿದಿರುತ್ತದೆ. ಅಷ್ಟರಲ್ಲಿ ಅದೇ ಕೊಳದಲ್ಲಿ ಕಾಣದಂತೆ ಕುಳಿತಿದ್ದ ಮೊಸಳೆಯೊಂದು ಮರಿಯನ್ನು ತನ್ನ ಬಾಯಿಗೆ ಸೇರಿಸಿಕೊಳ್ಳುವ ಉದ್ದೇಶದಿಂದ ಮುಂದೆ ಬರುತ್ತದೆ. ತಕ್ಷಣ ಎಚ್ಚೆತ್ತುಕೊಳ್ಳುವ ತಾಯು ಆನೆ ಮೊಸಳೆಯನ್ನು ಕಾಲಿನಿಂದ ತುಳಿಯುವುದಕ್ಕೆ ಮುಂದಾಗುತ್ತದೆ. ಕೆಲ ಕಾಲ ಆನೆಯಿಂದ ತುಳಿಸಿಕೊಂಡ ಮೊಸಳೆ ಬೇರೆ ವಿಧಿ ಇಲ್ಲ ಎನ್ನುವಂತೆ ಆ ಕೊಳದಿಂದ ಹೊರಗೆ ಹೊರಟು ಹೋಗುತ್ತದೆ. ಮಗುವನ್ನು ರಕ್ಷಿಸಿಕೊಂಡ ಸಂತಸ ಆನೆಯದ್ದಾಗುತ್ತದೆ.


ಈ ದೃಶ್ಯವಿರುವ ವಿಡಿಯೊವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್‌ ನಂದಾ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಆನೆಗಳನ್ನು ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಎಷ್ಟರ ಮಟ್ಟಿಗೆ ಹೋಗಬಹುದು ಎನ್ನುವುದು ಮನಸ್ಸಿಗೆ ಮುದ ನೀಡುತ್ತದೆ. ಅದಕ್ಕೆ ಇದೊಂದು ಸಣ್ಣ ಉದಾಹರಣೆ” ಎಂದು ಅವರು ವಿಡಿಯೊಗೆ ಕ್ಯಾಪ್ಶನ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Viral News : ಕಾರ್ಟೂನ್‌ನಂತೆ ಊದಿಕೊಂಡ ತುಟಿ; ಕಣ್ಣೀರಿಡುತ್ತ ಆಸ್ಪತ್ರೆಗೆ ತೆರಳಿದ ಯುವತಿ; ಕಾರಣವೇನು?
ಸುಶಾಂತ್‌ ಅವರು ಏಪ್ರಿಲ್‌ 14ರಂದು ಈ ವಿಡಿಯೊ ಹಂಚಿಕೊಂಡಿದ್ದಾರೆ. ಅಂದಿನಿಂದ ಈ ವಿಡಿಯೊ ಲಕ್ಷಾಂತರ ಮಂದಿಯಿಂದ ವೀಕ್ಷಣೆ ಪಡೆದುಕೊಂಡಿದೆ. ಹಲವಾರು ಮಂದಿ ಈ ವಿಡಿಯೊವನ್ನು ರಿಟ್ವೀಟ್‌ ಮಾಡಿದ್ದು, ಲೈಕ್‌, ಕಾಮೆಂಟ್‌ ಕೂಡ ಮಾಡಿದ್ದಾರೆ. “ತಾಯಿಯೇ ಹಾಗೆ, ಮಕ್ಕಳ ರಕ್ಷಣೆಗೆ ಏನು ಬೇಕಾದರೂ ಮಾಡುತ್ತಾಳೆ” ಎಂದು ಅನೇಕರು ಕಾಮೆಂಟ್‌ಗಳಲ್ಲಿ ಹೇಳಲಾರಂಭಿಸಿದ್ದಾರೆ.

Exit mobile version