Site icon Vistara News

Viral video | ಅಮ್ಮ ಹೇಳಿಕೊಟ್ಟಂತೆ ಮಣ್ಣಲ್ಲಿ ಜಾರಿದ ಮರಿಯಾನೆಯ ಮುದ್ದಾದ ವಿಡಿಯೋ!

baby elephant

ಆನೆಮರಿಗಳ ತುಂಟಾಟ ನೋಡಲು ಬಲು ಚೆನ್ನ. ಮುದ್ದಾದ ಆನೆಮರಿಗಳು ಪುಟಾಣಿ ಮಗುವಿನಂತೆ ಮುದ್ದು ಮುದ್ದಾಗಿ ಸೊಂಡಿಲ ಆಡಿಸುತ್ತಾ ನೀರಾಟವಾಡುವುದು, ನೀರಲ್ಲಿ ತುಂಟತನ ತೋರುವುದು, ಮಣ್ಣಲ್ಲಿ ಜಾರುವುದು ಇತ್ಯಾದಿಗಳ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಪ್ರತಿ ಬಾರಿಯೂ ಇದು ಕೊಡುವ ಮನರಂಜನೆ ಅಷ್ಟಿಷ್ಟಲ್ಲ. ಈ ದೈತ್ಯ ಪ್ರಾಣಿಯ ಮರಿಯ ತುಂಟತನ ಮನುಷ್ಯರ ಮಕ್ಕಳಿಗಿಂತ ಯಾವ ರೀತಿಯಲ್ಲೂ ಕಮ್ಮಿಯಿಲ್ಲ. ಈ ಬಾರಿಯೂ ಅಂಥದ್ದೇ ಒಂದು ವಿಡಿಯೋ ಸದ್ದು ಮಾಡುತ್ತಿದೆ.

ಆನೆಗಳೆಂಬ ಬುದ್ಧಿವಂತ ಪ್ರಾಣಿಯಲ್ಲಿ ಅಮ್ಮ ಮಗುವಿನ ಬಾಂಧವ್ಯ ವಿಶೇಷವಾದದ್ದು. ಜೀವನಕೌಶಲ್ಯಗಳನ್ನು ಹೇಳಿಕೊಡುವಂಥ ಸಂದರ್ಭಗಳಲ್ಲೂ ಅಷ್ಟೇ, ಆನೆಗಳು ತಮ್ಮ ಮಕ್ಕಳಿಗೆ ಮುತುವರ್ಜಿಯಿಂದ ಬದುಕಿನ ಪಾಠವನ್ನು  ಕಲಿಸುತ್ತಾ ಹೋಗುತ್ತವೆ. ಪುಟ್ಟ ಮರಿಗಳನ್ನು ಅಮ್ಮ ಮಾಡು ಕಾಳಜಿ, ಕಲಿಯದಿದ್ದರೆ ತೋರುವ ಹುಸಿಕೋಪ ಎಲ್ಲವೂ ಮೂಕಪ್ರಾಣಿಗಳ ಮುಖದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಮುದ್ದು ಮರಿಗಳು ಅಮ್ಮನ ಜೊತೆ ಮಾಡುವ ತುಂಟಾಟಗಳು ಯಾವಾಗಲೂ ಮನರಂಜನೆಯನ್ನು ಕೊಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಅಮ್ಮನ ಹಿಂದೆ ಹಿಂದೆ ಸುತ್ತುತ್ತಾ ಒಂದೊಂದೇ ವಿದ್ಯೆ ಕಲಿಯುವುದನ್ನು ನೋಡುವುದೇ ಚಂದ. ಇಂಥದ್ದೇ ಒಂದು ವಿಡಿಯೋನಲ್ಲಿ ಅಮ್ಮ ಆನೆ ತನ್ನ ಮರಿಯಾನೆಗೆ ಮಣ್ಣಿನಲ್ಲಿ ಹೇಗೆ ಜಾರಬೇಕೆಂದು ಹೇಳಿಕೊಡುವುದು ಜನಮನ ಗೆದ್ದಿದೆ. ಈ ವಿಡಿಯೋ ೧೨ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡು ವೈರಲ್‌ ಆಗಿದೆ.

ಇದನ್ನೂ ಓದಿ | Viral Video | ಹೆಡೆಬಿಚ್ಚಿ ಮನೆ ಕಾವಲು ಕೂತ ನಾಗರಹಾವು ಎಂಬ ಸೆಕ್ಯುರಿಟಿ ಸಿಸ್ಟಂ!

ʻಅಮ್ಮ: ಇದೇ ಕೊನೆಯ ಬಾರಿ ನಾನು ನಿನಗೆ ಹೇಗೆ ಕೆಳಗಿಳಿಯುವುದೆಂದು ಹೇಳಿಕೊಡುತ್ತೇನೆ ಮಗನೇʼ ಎಂಬ ತಲೆಬರಹದಡಿ ಹಂಚಲಾದ ವಿಡಿಯೋನಲ್ಲಿ ಅಮ್ಮ ಆನೆ ಮೆಟ್ಟಿಲಿನಂಥ ಇಳಿಜಾರಿನ ಪ್ರದೇಶದಲ್ಲಿ ದೈತ್ಯ ದೇಹ ಹೊತ್ತುಕೊಂಡು ಹೇಗೆ ಕೆಳಗಿಳಿಯಬೇಕೆಂದು ತೋರಿಸುತ್ತಾ ಕೆಳಗಿಳಿಯುತ್ತದೆ. ಹಿಂದೆ ಇದ್ದ ಮರಿಯಾನೆ, ಅಮ್ಮ ಹೇಗೆ ಇಳಿದಳೋ ಹಾಗೆಯೇ ಇಳಿಯಬೇಕೆಂದು ಅಂದುಕೊಂಡರೂ ಇಳಿಯಲಾಗದೆ, ಕಷ್ಟಪಟ್ಟು, ಹೇಗುಹೇಗೋ ದೊಪ್ಪನೆ ಬಿದ್ದು ಇಳಿಯುವಲ್ಲಿ ಸಫಲವಾಗುತ್ತದೆ. ಅಮ್ಮ ಇಳಿದ ಕ್ರಮವೇ ಬೇರೆ, ಮರಿಯಾನೆ ಇಳಿದ ಕ್ರಮವೇ ಬೇರೆ. ಮರಿಯಾನೆಯ ಇಳಿವ ಕ್ರಮವೇ ಎಲ್ಲರ ಮನಗೆಲ್ಲುತ್ತಿದೆ.

ತಮಾಷೆಯಾಗಿರುವ ಈ ವಿಡಿಯೋನಲ್ಲಿ ಮರಿಯಾನೆ ಕಾಲು ಮೇಲೆ ಮಾಡಿ ಜಾರುವ ಪ್ರಸಂಗ ಯಾವ ಪುಟಾಣಿ ಮಕ್ಕಳ ತಮಾಷೆಯ ವಿಡಿಯೋಗೂ ಕಮ್ಮಿಯಿಲ್ಲ. ಪುಟ್ಟ ಮಕ್ಕಳಂತೆಯೇ ಬದುಕಿನ ಸಣ್ಣಸಣ್ಣ ಕಲಿಕೆಗಳನ್ನು ತಮಾಷೆಯಾಗಿ ತುಂಟತನದಿಂದ ಕಲಿವ ಮರಿಯಾನೆ ಎಲ್ಲರಿಗೂ ಮುದ್ದು ಬರಿಸುತ್ತಿದೆ.

ಬಹಳಷ್ಟು ಮಂದಿ ಇದಕ್ಕೆ ತಮಾಷೆಯ ಕಾಮೆಂಟುಗಳನ್ನು ಮಾಡಿದ್ದು, ಅಮ್ಮ ಹೇಳಿಕೊಟ್ಟಂತೆ ಪ್ರಯತ್ನಿಸಿದ ಮರಿಯಾನೆಗೆ ಫುಲ್‌ ಮಾರ್ಕ್ಸ್‌ ಕೊಡಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಮರಿಯಾನೆ ಪ್ರತಿಯೊಂದು ಕ್ಷಣವನ್ನೂ ಮಜವಾಗಿ ಕಳೆಯುತ್ತಾ ಜೀವನಕ್ರಮವನ್ನು ಕಲಿಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದು ಬರೆದಿದ್ದಾರೆ. ಮರಿಯಾನೆಯ ಕ್ಯೂಟ್‌ ಸನ್ನಿವೇಶವಿದು ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Viral Video | ವಿಮಾನದಲ್ಲಿ ಪ್ರಯಾಣಿಕರ ಮಧ್ಯೆ ಹೊಡೆದಾಟ, ಜಗಳ ಬಿಡಿಸಲು ಗಗನಸಖಿ ಪರದಾಟ; ಇದು ಪ್ಲೈಟ್​​ ಫೈಟ್!​

Exit mobile version