Site icon Vistara News

Viral Video: ಟ್ರಕ್‌ ಕ್ಯಾಬಿನ್‌ನಲ್ಲಿ ಹೆಬ್ಬಾವು ಪ್ರತ್ಯಕ್ಷ; ವಾಹನ ಚಲಾಯಿಸುವ ಮುನ್ನ ಎಚ್ಚರ ಎಂದ ನೆಟ್ಟಿಗರು

police

police

ನೋಯ್ಡಾ: ಹಾವು ಎಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ? ಅದರಲ್ಲೂ ಹೆಬ್ಬಾವು (Python) ಕಂಡರೆ ಮಾರು ದೂರ ಓಡಿ ಹೋಗುವವರೇ ಹೆಚ್ಚು. ಹಿಂದೆಲ್ಲ ಕಾಡು, ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದ ಹಾವುಗಳು ಇತ್ತೀಚೆಗೆ ನಗರ ಪ್ರದೇಶಗಳಿಗೂ ಲಗ್ಗೆ ಇಡುತ್ತಿವೆ. ಫ್ಲ್ಯಾಟ್‌, ಬೈಕ್‌ ನೀಟಿನ ಅಡಿ, ಶೂ ಒಳಗೆ ಹೀಗೆ ಹಾವುಗಳ ಅಡಗುತಾಣ ಹಲವು. ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಟ್ರಕ್‌ ಒಂದರಲ್ಲಿ 8 ಅಡಿ ಉದ್ದದ ಬೃಹತ್‌ ಗಾತ್ರದ ಹೆಬ್ಬಾವು ಕಂಡುಬಂದಿದ್ದು, ಅದನ್ನು ಪೊಲೀಸರು ರಕ್ಷಿಸಿದ ವಿಡಿಯೊ ವೈರಲ್‌ (Viral Video) ಆಗಿದೆ.

ಏನಿದು ಘಟನೆ?

ಉತ್ತರ ಪ್ರದೇಶದ ಪೊಲೀಸರು ಹೆಬ್ಬಾವನ್ನು ರಕ್ಷಿಸಿದ ವಿಡಿಯೊವನ್ನು ಎಕ್ಸ್‌ ಮೂಲಕ ಹಂಚಿಕೊಂಡಿದ್ದಾರೆ. “8 ಅಡಿ ಉದ್ದದ ಹೆಬ್ಬಾವು ಟ್ರಕ್‌ ಒಳಗೆ ಪ್ರವೇಶಿಸಿತು. ಎಸ್ಐ ದೇವೇಂದ್ರ ರಾಠಿ ಮತ್ತು ನೋಯ್ಡಾ ಪೊಲೀಸರು ಹಗ್ಗ ಮತ್ತು ಚೀಲವನ್ನು ಬಳಸಿಕೊಂಡು ಕೌಶಲ್ಯದಿಂದ ಹೆಬ್ಬಾವನ್ನು ರಕ್ಷಿಸಿದ್ದಾರೆ” ಎಂದು ಪೊಲೀಸ್‌ ಇಲಾಖೆ ಬರೆದುಕೊಂಡಿದೆ. ಹೆಬ್ಬಾವು ಬಸುಗುಡುವ ದೃಶ್ಯದೊಂದಿಗೆ ವಿಡಿಯೊ ಆರಂಭವಾಗುತ್ತದೆ. ನಂತರ ಟ್ರಕ್‌ ಬಾಗಿಲಿನ ಸುತ್ತಲೂ ಹೆಬ್ಬಾವು ಸುತ್ತಿಕೊಂಡಿರುವುದನ್ನು ಕಾಣಬಹುದು. ವಿಡಿಯೊ ಮುಂದುವರಿಯುತ್ತಿದ್ದಂತೆ ಪೊಲೀಸರು ಹಾವನ್ನು ವಾಹನದಿಂದ ಹೊರಹಾಕುವಲ್ಲಿ ಯಶಸ್ವಿಯಾಗುತ್ತಾರೆ.

ಟ್ರಕ್‌ನಿಂದ ಹೊರ ಬಂದ ಹೆಬ್ಬಾವು ಮತ್ತೆ ಅಲ್ಲೇ ಇದ್ದ ಬೈಕ್‌ ಒಳಗೆ ಸೇರಿಕೊಳ್ಳುತ್ತದೆ. ಬಳಿಕ ಹಗ್ಗದ ಸಹಾಯದಿಂದ ಹೆಬ್ಬಾವನ್ನು ಪೊಲೀಸರು ಹೆಬ್ಬಾವನ್ನು ರಕ್ಷಿಸುತ್ತಾರೆ. ಈ ರಕ್ಷಣೆ ಕಾರ್ಯಾಚರಣೆ ಸುಮಾರು 2 ಗಂಟೆಗಳ ಕಾಲ ನಡೆಯಿತು. ಅಕ್ಟೋಬರ್‌ 5ರಂದು ಅಪ್‌ಲೋಡ್‌ ಮಾಡಲಾದ ಈ ವಿಡಿಯೊವನ್ನು ಸದ್ಯ 29 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಕಮೆಂಟ್‌ ಮೂಲಕ ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ.

ನೆಟ್ಟಿಗರು ಹೇಳಿದ್ದೇನು?

ʼʼಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ದೊಡ್ಡ ಸೆಲ್ಯೂಟ್‌ʼʼ ಎಂದು ಒಬ್ಬರು ಹೇಳಿದ್ದಾರೆ. ʼʼವಾವ್‌ʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ಅನೇಕರು ಪೊಲೀಸರ ಧೈರ್ಯಕ್ಕೆ, ಸಮಯೋಚಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಹೆಬ್ಬರಳು ಮೇಲೆತ್ತುವ ಸಿಂಬಲ್‌ ಹಾಕಿ ಪೊಲೀಸರ ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Viral Video: ನೀರಾನೆಗೆ ಹೊಡೆದ ಸೆಕ್ಯುರಿಟಿ ಗಾರ್ಡ್‌; ಮುಂದೇನಾಯ್ತು ನೀವೇ ನೋಡಿ

ಹೆಬ್ಬಾವನ್ನು ಏನು ಮಾಡಿದರು?

ಯಶಸ್ವಿ ಕಾರ್ಯಾಚರಣೆಯ ಬಳಿಕ ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ‌ಸ್ಥಳೀಯ ನಿವಾಸಿಗಳ ಹಿತದೃಷ್ಟಿಯಿಂದ ಮತ್ತು ಹೆಬ್ಬಾವಿನ ಯೋಗಕ್ಷೇಮಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ದೂರದ ಕಾಡಿಗೆ ಒಯ್ದು ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.

ಎಚ್ಚರಿಕೆಯ ಕರೆಗಂಟೆ ಬಾರಿಸಿದ ಘಟನೆ

ʼʼಹಲವು ಸಮಯದವರೆಗೆ ಒಂದೇ ಕಡೆ ನಿಲ್ಲಿಸಿದ್ದ ವಾಹನವನ್ನು ಚಲಾಯಿಸುವ ಮುನ್ನ ಕೂಲಂಕುಷವಾಗಿ ಪರೀಕ್ಷಿಸಬೇಕು ಎನ್ನುವ ಪಾಠವನ್ನು ಈ ಘಟನೆ ಬೋಧಿಸುತ್ತದೆʼʼ ಎಂದಿದ್ದಾರೆ ನೆಟ್ಟಿಗರು. ಹಾವುಗಳು ವಿಶೇಷವಾಗಿ ಹೆಬ್ಬಾವುಗಳು ಬೆಚ್ಚಗಿನ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತವೆ. ವಾಹನಗಳ ಎಂಜಿನ್ ಭಾಗಗಳು ಈ ಸರೀಸೃಪಗಳಿಗೆ ಸೂಕ್ತ ಆವಾಸಸ್ಥಾನವನ್ನು ಒದಗಿಸುತ್ತದೆ. ಆದ್ದರಿಂದ ಟ್ರಕ್ ಮತ್ತು ಕಾರು ಮಾಲಕರು ಅದರಲ್ಲೂ ವಿಶೇಷವಾಗಿ ಹುಲ್ಲು, ಪೊದೆಗಳಿರುವ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿರುವವರು ಹೆಚ್ಚು ಜಾಗರೂಕತೆಯೊಂದ ಇರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version