ಏನಿದ್ದರೂ ಇದು ಪ್ರಯೋಗಗಳ ಕಾಲ. ಅಡುಗೆಯಲ್ಲಿ ಏನೇ ಪ್ರಯೋಗ ಮಾಡಿದರೂ ಅದು ಟ್ರೆಂಡ್ (trending) ಆಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನ ನೋಡುತ್ತಾರೆ. ಇಷ್ಟವಾದವರು ಮಾಡುತ್ತಾರೆ. ಅದೆಲ್ಲಿ ಸಿಗುತ್ತದೆಯೋ ಹುಡುಕಿಕೊಂಡು ಹೋಗಿ ತಿಂದು ರುಚಿ ನೋಡುತ್ತಾರೆ. ಚಿತ್ರವಿಚಿತ್ರ ಅಡುಗೆಗಳು, ಎಂದೂ ಯೋಚನೆಯೇ ಮಾಡದಂಥ ಕಾಂಬಿನೇಷನ್ನುಗಳು ನಮ್ಮ ತಟ್ಟೆಯಲ್ಲಿ ಬಂದು ಬೀಳುತ್ತದೆ. ಇಷ್ಟಪಡದ ಮಂದಿ ಸಾಮಾಜಿಕ ಜಾಲತಾಣದಲ್ಲಿಯೇ ಈ ವಿಚಿತ್ರ ತಿನಿಸುಗಳಿಗೆ ನಗೆಯಾಡುತ್ತಾರೆ. ನೇರವಾಗಿ ಪ್ರತಿಕ್ರಿಯೆ ನೀಡುತ್ತಾರೆ.
ಈಗಲೂ ಅಂಥದ್ದೇ ಒಂದು ವಿಚಿತ್ರವಾದ ಅಡುಗೆ ಸದ್ದು ಮಾಡುತ್ತಿದೆ. ಈ ಬಾರಿ ಇದು ಓರಿಯೋ ಫ್ರೈಡ್ ರೈಸ್ (Oreo fried rice) . ಹಲವು ರೈಸ್‌ಬಾತ್‌ಗಳ ರುಚಿ ನೋಡಿರುವ ಮಂದಿಗೆ, ರೈಸ್ ಬಾತ್‌ಗಳನ್ನು ಇಷ್ಟಪಡುವ ಮಂದಿಗೆ ಇದು ಕೊಂಚ ವಿಚಿತ್ರ ಅಂತನಿಸಿದರೆ ಅದರಲ್ಲಿ ಅವರ ತಪ್ಪಿಲ್ಲ. ಓರಿಯೋ ಬಿಸ್ಕತ್ತಿನಿಂದ ಮಾಡುವ ತರಹೇವಾರಿ ತಿನಿಸುಗಳನ್ನೂ ಕೇಕುಗಳನ್ನೂ ಶೇಕುಗಳನ್ನೂ ನೀವು ನೋಡಿ ಸುಸ್ತಾಗದಿದ್ದರೆ, ಓರಿಯೋನಿಂದ ಫ್ರೈಡ್ ರೈಸನ್ನೂ ಮಾಡಿ ನಿಮ್ಮ ಮಕ್ಕಳಿಗೆ ಚಾಕೋಲೇಟೀಯಾಗಿರುವ ಊಟ ಬಡಿಸಬಹುದು. ಗುಂಡಿಗೆ ಇದ್ದವರೊಮ್ಮೆ ಟ್ರೈ ಮಾಡಿ ನೋಡಿ!
ಇದು ಅತಿಯಾಯಿತು ಅಂತೀರಾ? ಹಾಗಿದ್ದರೆ ಪೂರ್ತಿ ಓದಿ. ಇತ್ತೀಚೆಗೆ ಇನ್ಸ್‌ಟಾಗ್ರಾಂನಲ್ಲಿ ಹಂಚಲಾದ ವಿಡಿಯೋ ಒಂದರಲ್ಲಿ ಮೊದಲು ಕೊಂಚ ಎಣ್ನೆಯಲ್ಲಿ ತೆಗೆದುಕೊಂಡು ಅದಕ್ಕೆ ಓರಿಯೋ ಬಿಸ್ಕತ್ತುಗಳನ್ನು ಹಾಕಲಾಗುತ್ತದೆ. ಓರಿಯೋ ಬಿಸ್ಕತ್ತು ಎಣ್ಣೆಯ ಜೊತೆ ಪೂರ್ಣ ಬೆರೆತುಕೊಂಡು ಚಾಕೋಲೇಟ್ ಪೇಸ್ಟ್‌ನಂತೆ ಆದ ತಕ್ಷಣ ಅದಕ್ಕೆ ಮೊದಲೇ ಬೇಯಿಸಿಟ್ಟ ಅನ್ನವನ್ನು ಸೇರಿಸಲಾಗುತ್ತದೆ. ಆಮೇಲೆ ಅದಕ್ಕೆ ಸೋಯಾ ಸಾಸ್ ಹಾಗೂ ಕ್ಯಾರೆಟ್ ತುಂಡುಗಳನ್ನು ಸೇರಿಸಿ ರಿಚಿಗೆ ಉಪ್ಪನ್ನು ಸೇರಿಸಿ, ಮೇಲಿನಿಂದ ಸ್ಪ್ರಿಂಗ್ ಅನಿಯನ್‌ನಿಂದ ಅಲಂಕರಿಸಿ ನೀಡಲಾಗುತ್ತದೆ.
ಈ ಸಣ್ಣ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಆಹಾರ ಪ್ರೇಮಿಗಳನ್ನು ರೊಚ್ಚಿಗೆಬ್ಬಿಸಿದೆ. ಇದು ಮನಸ್ಸಿಗೆ ತುಂಬಾ ಘಾಸಿಯನ್ನುಂಟು ಮಾಡುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು ದಯವಿಟ್ಟು ಹೀಗೆ ಆಹಾರವನ್ನು ಹಾಳು ಮಾಡಬೇಡಿ ಎಂದು ಅಲವತ್ತುಕೊಂಡಿದ್ದಾರೆ.
ಹಾಗೆ ನೋಡಿದರೆ ಓರಿಯೋ ಎಂಬ ಬಿಸ್ಕತ್ತು ಏನೆಲ್ಲ ರೂಪಗಳನ್ನು ಇತ್ತೀಚೆಗೆ ಪಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಓರಿಯೋ ಬಿಸ್ಕತ್ತಿನ ಕೇಕ್ ಹಾಗೂ ಶೇಕ್ ಮಕ್ಕಳ ವಲಯದಲ್ಲಿ ಸಾಕಷ್ಟು ಪ್ರಸಿದ್ಧ. ಈಗಾಗಲೇ, ರೆಸ್ಟೋರೆಂಟುಗಳಲ್ಲಿಯೂ ಓರಿಯೋ ಶೇಕ್ ದೊರೆಯುತ್ತವೆ. ಮಕ್ಕಳು ಬಹಳ ಇಷ್ಟಪಟ್ಟು ಕುಡಿಯುತ್ತಾರೆ ಕೂಡಾ. ಆದರೆ, ಯಾವಾಗ ಓರಿಯೋ ಎಂಬ ಬಿಸ್ಕತ್ತಿನಿಂದ ಚಿತ್ರವಿಚಿತ್ರ ಅಡುಗೆಗಳು ವೈರಲ್ ಆಗತೊಡಗಿದವೋ ಆಗ ಆಹಾರ ಪ್ರಿಯರು ಮಾತ್ರ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಓರಿಯೋ ಪಿಜ್ಜಾದ ವಿಡಿಯೋವನ್ನು ನೋಡಿ ಆಹಾರ ಪ್ರಿಯರು ಅರಗಿಸಿಕೊಳ್ಳದೆ ಒದ್ದಾಡುತ್ತಿರುವಾಗ, ಇನ್ನೊಂದೆಡೆಯಿಂದ ಓರಿಯೋ ಬಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತೊಡಗಿತ್ತು. ಅದನ್ನು ನೋಡಿ ತಲೆಚಚ್ಚಿಕೊಳ್ಳುತ್ತಿದ್ದ ಸಂದರ್ಭ ಈಗ ಓರಿಯೋ ಫ್ರೈಡ್ ರೈಸ್ ಬಂದಿದೆ.
ಕಳೆದ ಜನ್ಮದಲ್ಲಿ ನಾವು ಯಾವ ಪಾಪ ಮಾಡಿದ್ದೇವೆಂದು ನಾವು ಈಗ ಇನ್ನೂ ಏನೇನನ್ನೆಲ್ಲಾ ಈ ಜೀವನದಲ್ಲಿ ನೋಡಲಿದ್ದೇವೆಯೋ ಎಂದು ಆಹಾರಪ್ರಿಯರು ತಲೆಬಿಸಿಮಾಡಿಕೊಳ್ಳುತ್ತಿದ್ದಾರಂತೆ!
ಇದನ್ನೂ ಓದಿ: Viral video: ಅಲಾಯಿ ದೇವರಿಗೆ ಹೂ ನೀಡಿದ ಆಂಜನೇಯ, ವಿಡಿಯೋ ವೈರಲ್