ಮರುಭೂಮಿಯಲ್ಲಿ ಕಾಣಸಿಗುವ ಪ್ರಾಣಿಯೊಂದಕ್ಕೆ ಇದ್ದಕ್ಕಿದ್ದಂತೆ ಹಿಮ ಸುರಿಯುವುದನ್ನು ಕಂಡರೆ ಹೇಗಿದ್ದೀತು! ಹಾಗಿದ್ದರೆ ಈ ವಿಡಿಯೋ ನೋಡಬೇಕು. ʻಮರುಭೂಮಿಯ ಹಡಗುʼ ಎಂದೇ ಹೆಸರಿರುವ ಒಂಟೆಯೊಂದು, ಹಿಮದ ನಾಡಿನಲ್ಲಿ ಹಿಮ ಸುರಿಯುವುದನ್ನು ಮೊದಲ ಬಾರಿಗೆ ನೋಡಿ ಹುಚ್ಚೆದ್ದು ಕುಣಿದಿದೆ!
ಮೂಕಪ್ರಾಣಿಗಳ ವಿಶೇಷ ನಡೆನುಡಿಗಳು ಮನುಷ್ಯನ ಗಮನ ಸೆಳೆಯುವದು ಇದೇ ಮೊದಲಲ್ಲ. ಮಾತನಾಡಲು, ಮಾತಿನ ಮೂಲಕ ತನ್ನ ಅನುಭವವನ್ನು ವ್ಯಕ್ತಪಡಿಸಲು ಪ್ರಾಣಿ ಪಕ್ಷಿಗಳಿಗೆ ಬರದಿದ್ದರೇನಂತೆ, ಅವುಗಳು ತಮ್ಮ ವಿಶೇಷ ನಡೆಯ ಮೂಲಕ ವ್ಯಕ್ತಪಡಿಸುವ ರೀತಿಯೇ ಅನನ್ಯ. ಹಾಗಾಗಿಯೇ ಆಗಾಗ ಇಂಥ ಪ್ರಾಣಿಗಳ ಅಪರೂಪದ ವಿಡಿಯೋಗಳು ಅಂತರ್ಜಾಲದಲ್ಲಿ ಗಮನ ಸೆಳೆಯುತ್ತಲೇ ಇರುತ್ತವೆ. ಇದೀಗ ಸರದಿ ಈ ಒಂಟೆಯದ್ದು. ಒಂಟೆಯೊಂದು ಹಿಮ ಸುರಿವ ಅನುಭವವನ್ನು ಮೊದಲ ಬಾರಿಗೆ ಸಂಭ್ರಮಿಸಿದ ವಿಡಿಯೋ ಒಂದು ಅಂತರ್ಜಾಲದಲ್ಲೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.
ರಾಂಚೋ ಗ್ರಾಂಡೇ ಎಂಬ ಪ್ರಾಣಿಧಾಮವೊಂದು ಈ ವಿಡಿಯೋ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋನಲ್ಲಿ ಅಲ್ಬರ್ಟ್ ಎಂಬ ಒಂಟೆಯೊಂದು ತನ್ನ ಜೀವನದಲ್ಲಿ ಮೊದಲ ಬಾರಿಗೆ ಹಿಮ ಸುರಿಯುವುದನ್ನು ನೋಡಿದೆ. ಹಿಮ ತನ್ನ ಮೈಮೇಲೆ, ತನ್ನ ಸುತ್ತಮುತ್ತ ಬೀಳುತ್ತಿರುವುದನ್ನು ನೋಡುತ್ತಿದ್ದಂತೆ ಒಂಟೆ ಖುಷಿಯಿಂದ ಥ್ರಿಲ್ಲಾಗಿ ನೆಗೆಯಲು ಆರಂಭಿಸುತ್ತದೆ. ತನ್ನ ಹುಚ್ಚೆದ್ದು ಕುಣಿವ ಭಾವನೆಗಳನ್ನು ನಿಯಂತ್ರಿಸಲಾರದೆ ಒಂಟೆ ರಸ್ತೆಯಲ್ಲಿ ತನ್ನ ಜೊತೆಯಲ್ಲಿದ್ದ ನೂರಾರು ಆಡುಗಳ ಗುಂಪಿನೊಂದಿಗೆ ನೆಗೆನೆಗೆದು ಖುಷಿಯನ್ನು ವ್ಯಕ್ತಪಡಿಸುವ ಈ ವಿಡಿಯೋ ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಜೊತೆಗೆ ಇದು ತನ್ನ ಗೆಳೆಯರಾದ ನೂರಾರು ಆಡುಗಳನ್ನು ತನ್ನ ಅತ್ಯಂತ ಇಷ್ಟದ ಜಾಗಗಳಿಗೆಲ್ಲ ಕರೆದುಕೊಂಡು ಹೋಗಿ ತೋರಿಸುತ್ತದೆ ಎಂದು ಗ್ರಾಂಡೇ ತನ್ನ ವಿಡಿಯೋದಲ್ಲಿ ಹೇಳಿದೆ.
ಇದನ್ನೂ ಓದಿ | Video Viral | ಮಕ್ಕಳಿಗೆ ಬಿಸಿಯೂಟ ಬಡಿಸುವಾಗ ಬಂದ ಮಂಗ; ತುತ್ತು ನೀಡಿದ ಶಿಕ್ಷಕ, ಖುಷಿಯಲ್ಲಿ ತಿಂದ ವಾನರ
ಈಗಾಗಲೇ ಬೇರೆ ವಿಡಿಯೋ ತಾಣಗಳಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಈ ವಿಡಿಯೋ ಈಗ ಇನ್ಸ್‌ಟಾಗೂ ಕಾಲಿಟ್ಟಿದೆ. ಇನ್ಸ್‌ಟಾ ಜಾಲತಾಣದ ಮಂದಿ ನೋಡಿ ಖುಷಿಪಡಲು ಇದನ್ನು ಇಲ್ಲೂ ಶೇರ್ ಮಾಡಲಾಗಿದೆ ಎಂದು ಗ್ರಾಂಡೇ ಹೇಳಿದೆ. ಈಗಾಗಲೇ ಇದು ೭೧ ಸಾವಿರಕ್ಕೂ ಹೆಚ್ಚು ಮಂದಿಯ ವೀಕ್ಷಣೆ ಗಳಿಸಿದ್ದು, ಹಲವರು, ಒಂಟೆಯ ನೈಜ ಭಾವುಕತೆಯನ್ನು ನೋಡಿ ಸಂಭ್ರಮಪಟ್ಟಿದ್ದಾರೆ. ಅಲ್ಬರ್ಟ್ ಹಾಗೂ ಆತನ ಗೆಳೆಯರು ನಮಗೆಲ್ಲರಿಗೂ ಖುಷಿಯನ್ನು ಹಂಚಿದ್ದಾರೆ, ಅವರಿಗೆ ಧನ್ಯವಾದಗಳು ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಬರ್ಟ್‌ನ ಭಾವನೆಗಳು ಎಷ್ಟು ನೈಜವಾಗಿ ಕಾಣಿಸುತ್ತಿದೆ ಎಂದರೆ, ಇವು ನಮ್ಮಲ್ಲೂ ಸಂತೋಷ ಚಿಮ್ಮಿಸುತ್ತದೆ ಎಂದು ಒಬ್ಬರು ಹೇಳಿದ್ದಾರೆ.
ಅಂದಹಾಗೆ, ಇದು ಸಾಮಾನ್ಯ ಮರುಭೂಮಿಯ ಒಂಟೆ ಎಂದೂ ಭಾವಿಸಬೇಡಿ. ಇದು ಹಿಮದ ನಾಡಿನ ಹಿಮಒಂಟೆಯಂತೆ. ಆದರೂ ಇದು ಹಿಮವನ್ನು ಮೊದಲ ಬಾರಿಗೆ ನೋಡುತ್ತಿದೆಯಂತೆ.
ಇದನ್ನೂ ಓದಿ | Viral post | ದೇವಸ್ಥಾನದೆದುರು ಹೊಸ ಹೆಲಿಕಾಪ್ಟರ್ ತಂದು ವಾಹನ ಪೂಜೆ ಮಾಡಿಸಿದ ಉದ್ಯಮಿ!