Site icon Vistara News

Viral Video: ಐಲ್ಯಾಂಡ್‌ನಲ್ಲಿ ಬಾಲಿವುಡ್‌ನ ಮಸ್ತ್‌ ಗೆರುವಾ ಡ್ಯಾನ್ಸ್‌ ರಿಮೇಕ್‌ ಮಾಡಿದ ಬೆಡಗಿ! ಲೊಕೇಶನ್‌ ಸೂಪರ್‌

gerua dance

ಬೆಂಗಳೂರು: ಬಾಲಿವುಡ್‌ ಪ್ರಪಂಚಕ್ಕೇ ಗೊತ್ತಿರುವ ಸಿನಿ ಕ್ಷೇತ್ರ. ಬಾಲಿವುಡ್‌ನ ಅಪ್ಪಟ ಅಭಿಮಾನಿಗಳು ಭಾರತದಾದ್ಯಂತಲೂ ಇದ್ದಾರೆ. ಅಂತವರಲ್ಲಿ ಒಬ್ಬರು ನೃತ್ಯ ಕಲಾವಿದೆ ವಿಶಾಖ ಹೊಲ್ಸಂಬ್ರೆ. ಇತ್ತೀಚೆಗೆ ಐಲ್ಯಾಂಡ್‌ ದೇಶಕ್ಕೆ ಹೋಗಿದ್ದ ಅವರು ಅಲ್ಲಿ ಕಾಜೊಲ್‌ ಮತ್ತು ಶಾರುಖ್‌ ಖಾನ್‌ ಅವರ ದಿಲ್‌ವಾಲೆ ಸಿನಿಮಾದ ಗೆರುವಾ ಹಾಡು ಚಿತ್ರೀಕರಣಗೊಂಡ ಸ್ಥಳಗಳಿಗೂ ಹೋಗಿದ್ದಾರೆ. ಅದೇ ಸ್ಥಳಗಳಲ್ಲಿ ನಿಂತು ಅದೇ ಹಾಡಿಗೆ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಆ ವಿಡಿಯೊ ವೈರಲ್‌ (Viral Video) ಆಗಿದೆ.

ಗೆರುವಾ ಹಾಡನ್ನು ಐಲ್ಯಾಂಡ್‌ನಾದ್ಯಂತ ಇರುವ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅದರಲ್ಲಿ ಒಂದು ವೆಸ್ಟ್ರಾಹಾರ್ನ್. ಗಿರಿ ಶಿಖರಗಳ ಸಾಲಿನ ಮುಂದೆ ತಿಳಿ ನೀರಿದ್ದು, ಅದರಲ್ಲಿ ಗಿರಿ ಶಿಖರಗಳ ಪ್ರತಿಬಿಂಬ ಕಾಣುವಂತಹ ಅದ್ಭುತ ಸ್ಥಳವದು. ಆ ಸ್ಥಳಕ್ಕೆ ವಿಶಾಖ ಭೇಟಿ ನೀಡಿದ್ದಾರೆ. ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಅಲ್ಲಿಗೆ ಹೋದ ಅವರು ಅಲ್ಲಿ ಗೆರುವಾ ಹಾಡಿಗೆ ಕೆಲವು ಹೆಜ್ಜೆಗಳನ್ನು ಹಾಕಿದ್ದಾರೆ.

ಇದನ್ನೂ ಓದಿ: Viral Video : 90ರ ವಯಸ್ಸಿನ ಇವರು ವಿಶ್ವದ ಅತ್ಯಂತ ಹಿರಿಯ ಬಾಡಿ ಬಿಲ್ಡರ್‌! ಹೇಗಿದೆ ನೋಡಿ ಇವರ ವರ್ಕ್‌ಔಟ್‌

ಆ ವಿಡಿಯೊವನ್ನು ವಿಶಾಖ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಗೆರುವಾ ಹಾಡು ಚಿತ್ರೀಕರಣವಾದಲ್ಲೇ ನೀವು ನೃತ್ಯ ಮಾಡುತ್ತಿದ್ದೀರಿ ಎನ್ನುವುದಕ್ಕೆ ಸಾಕ್ಷಿಯಿದು. ನನ್ನಂತಹ ಬಾಲಿವುಡ್‌ ಅಭಿಮಾನಿಗಳಿಗೆ ಐಲ್ಯಾಂಡ್‌ಗೆ ಭೇಟಿ ನೀಡುವುದೆಂದರೆ ಗೆರುವಾ ಚಿತ್ರೀಕರಣವಾಗಿದ್ದ ಸ್ಥಳಗಳನ್ನು ಭೇಟಿ ನೀಡುವುದೂ ಒಂದು ಭಾಗವಾಗುತ್ತದೆ. ಈ ಸ್ಥಳಗಳನ್ನು ಬರೀ ನೋಡುವುದಕ್ಕಾಗಿ ಅಲ್ಲ ಇಲ್ಲಿ ಮೈ ಮರೆಯಲೆಂದೇ ಬಂದಿದ್ದೆ” ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊವನ್ನು ಜುಲೈ 5ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ವಿಡಿಯೊ 71 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಗೊಂಡಿದೆ. ಆರು ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ವಿಡಿಯೊವನ್ನು ತಮ್ಮ ಬಾಲಿವುಡ್‌ ಅಭಿಮಾನಿ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಸಾವಿರಾರು ಮಂದಿ ವಿಡಿಯೊಗೆ ಮೆಚ್ಚುಗೆಯ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದನ್ನೂ ಓದಿ: Viral News: 1969ರಲ್ಲಿ ಮಾಡಿದ್ದ ಪೋಸ್ಟ್‌ 2023ರಲ್ಲಿ ವಿಳಾಸಕ್ಕೆ ತಲುಪಿತು! ಇದೆಂಥ ವಿಚಿತ್ರ ಸ್ವಾಮಿ

“ಅಬ್ಬಬ್ಬಾ, ಆ ಸ್ಥಳ ಎಷ್ಟೊಂದು ಅದ್ಭುತವಾಗಿದೆ. ಈ ವಿಡಿಯೊ ನೋಡಿದ ಮೇಲೆ ನನಗೂ ಐಲ್ಯಾಂಡ್‌ಗೆ ಹೋಗಬೇಕು ಎನ್ನುವ ಮನಸ್ಸಾಗುತ್ತಿದೆ”, “ನಿಜವಾದ ಬಾಲಿವುಡ್‌ ಪ್ರೇಮಿ ನೀವು”, “ನಿಮ್ಮ ಡ್ಯಾನ್ಸ್‌, ಆ ಲೊಕೇಶನ್‌, ನಿಮ್ಮ ಡ್ರೆಸ್‌ ಎಲ್ಲವೂ ಸೂಪರ್‌” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಹಾಗೆಯೇ “ವಾವ್‌”, “ಸೂಪರ್‌”, “ಆಸಮ್‌” ಎನ್ನುವಂತಹ ನೂರಾರು ಕಾಮೆಂಟ್‌ಗಳು ಬಂದಿವೆ.

Exit mobile version