ಬೆಂಗಳೂರು: ದಕ್ಷಿಣ ಭಾರತದವರಾದ ನಾವು ದೋಸೆ ಬಿಟ್ಟಿರುವುದಕ್ಕೆ ಸಾಧ್ಯವೇ ಇಲ್ಲ. ಇನ್ನು ಐಸ್‌ಕ್ರೀಂ ಕೂಡ ನಮ್ಮ ಇಷ್ಟದ ತಿನಿಸುಗಳ ಪಟ್ಟಿಗೇ ಸೇರಿಕೊಳ್ಳುತ್ತದೆ. ಈ ಎರಡು ಇಷ್ಟದ ಆಹಾರವನ್ನು ಒಟ್ಟು ಮಾಡಿಕೊಟ್ಟರೆ? ಯೋಚಿಕೊಂಡರೇ ಭಯಾನಕ ಎನಿಸುವ ಕಾಂಬಿನೇಷನ್ ಅನ್ನು ಈಗ ಬೀದಿ ಬದಿ ವ್ಯಾಪಾರಿಗಳು ನಿಜ ಮಾಡಿ ತೋರಿಸಲಾರಂಭಿಸಿಬಿಟ್ಟಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ರೈಲುಗಳಲ್ಲಿ ಬದಲಾದ ಟಾಯ್ಲೆಟ್, ಕೇಂದ್ರ ಸಚಿವರ ಟ್ವೀಟ್ ವೈರಲ್
ಬೀದಿ ಬದಿ ಅಂಗಡಿಯ ಮಾಲೀಕ ಕಾವಲಿ ಮೇಲೆ ದೋಸೆ ಹೊಯ್ಯುತ್ತಾನೆ. ಅದರ ಮೇಲೆ ಮೂರು ಬೇರೆ ಬೇರೆ ರುಚಿಯ ಐಸ್‌ಕ್ರೀಂ ಸವರುತ್ತಾನೆ. ಅದರ ಮೇಲೊಂದಿಷ್ಟು ಜಾಮ್ ಹಾಕಲಾಗುತ್ತದೆ. ಅದರ ಮೇಲೆ ಫ್ರೂಟಿ ಹಾಕಿ ಮಸಾಲೆ ದೋಸೆಗಳಂತೆ ದೋಸೆಯನ್ನು ಮಡಿಚಲಾಗುತ್ತದೆ. ದೋಸೆಯನ್ನು ಬಾಳೆ ಎಲೆ ಮೇಲೆ ಇಡಲಾಗುತ್ತದೆ. ಅಷ್ಟಕ್ಕೆ ಸಾಲದು ಎನ್ನುವಂತೆ ದೋಸೆಯ ಪಕ್ಕದಲ್ಲೇ ಆ ಮೂರೂ ರುಚಿಯ ಐಸ್‌ಕ್ರೀಂ ಇಡಲಾಗುತ್ತದೆ. ದೋಸೆಯ ಮೇಲೆ ಚಾಕಲೇಟ್ ಸಿರಪ್ ಹಾಕಿ, ಕ್ಯಾಂಡೀಸ್ ಉದುರಿಸಿ ಕೊಡಲಾಗುತ್ತದೆ.
ಈ ರೀತಿಯ ವಿಚಿತ್ರ ದೋಸೆ ಮಾಡುವ ವಿಡಿಯೊವನ್ನು ಬ್ಯೋಮ್ಕೇಶ್ ಹೆಸರಿನ ವ್ಯಕ್ತಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ದಕ್ಷಿಣ ಭಾರತದ ದೋಸೆ ಗುಜರಾತ್‌ನಲ್ಲಿ ಬದುಕಬೇಕೆಂದರೆ ಅದು ಈ ರೀತಿ ಐಸ್‌ಕ್ರೀಂ ಜತೆ ಸ್ನೇಹ ಬೆಳೆಸಿಕೊಳ್ಳಬೇಕಾಯಿತು” ಎಂದು ವಿಡಿಯೊಗೆ ಕ್ಯಾಪ್ಶನ್ ಕೊಡಲಾಗಿದೆ.
ಇದನ್ನೂ ಓದಿ: Viral News: 1 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ.40 ತೆರಿಗೆ! 1992ರ ಇನ್‌ಕಮ್ ಟ್ಯಾಕ್ಸ್ ಸ್ಲ್ಯಾಬ್ ವೈರಲ್
ಈ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. “ಎರಡು ರುಚಿಯಾದ ಖಾದ್ಯಗಳನ್ನು ತಿನ್ನಲು ಆಗದಂತೆ ಮಾಡುವುದೆಂದರೆ ಹೀಗೆ ನೋಡಿ” ಎಂದು ಕೆಲವರು ಕಾಮೆಂಟ್ ಮಾಡಿದರೆ, “ಈ ವಿಡಿಯೊ ನೋಡಿದ ಮೇಲೆ ನನ್ನ ಕಣ್ಣನ್ನು ಸೋಪು ಹಾಕಿ ತೊಳೆದುಕೊಳ್ಳಬೇಕಾಯಿತು” ಎಂದು ಅನೇಕರು ನುಡಿದಿದ್ದಾರೆ.