ಚೆನ್ನೈ: ಚಿಕ್ಕ ಚಿಕ್ಕ ಹುಡುಗರು ಮತ್ತು ಯುವಕರು ಎತ್ತರದ ಸ್ಥಳಗಳಿಂದ ನೀರಿಗೆ ಹಾರಿ, ಈಜುವ ವಿಡಿಯೊಗಳನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲಿ ಆ ಯುವಕರೇ ನಾಚುವಂತೆ ಅಜ್ಜಿಯೊಬ್ಬರು ನೀರಿಗೆ ಡೈವ್ ಹೊಡೆದಿದ್ದಾರೆ. ಸೀರೆಯಲ್ಲಿಯೇ ನೀರಿಗೆ ಹಾರಿ, ಈಜಿದ ಅಜ್ಜಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video : ತನ್ನನ್ನು ತಾನೇ ಕತ್ತರಿಸಿಕೊಂಡು ತಿಂದ ಮಹಿಳೆ? ವೈರಲ್ ಆಯ್ತು ವಿಡಿಯೊ
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಂಥದ್ದೊಂದು ವಿಡಿಯೊ ಹಂಚಿಕೊಂಡಿದ್ದಾರೆ. ಅಜ್ಜಿಯೊಬ್ಬರು ಸುಮಾರು 10-15 ಅಡಿ ಎತ್ತರದಿಂದ ನೀರಿಗೆ ಹಾರುತ್ತಾರೆ. ಮೊದಲಿಗೆ ಎರಡೂ ಕಾಲುಗಳನ್ನು ಮಡಚಿಕೊಂಡು ನೀರಿಗೆ ಹಾರುವ ಅವರು ಎರಡನೇ ಬಾರಿ ನೀರಿಗೆ ಹಾರುವಾಗ ಉಲ್ಟಾ ಆಗಿ ಹಾರಿ ಬೀಳುತ್ತಾರೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಸುಪ್ರಿಯಾ ಅವರು, “ತಮಿಳುನಾಡಿನ ಕಲ್ಲಿದೈಕುರಿಚಿಯಲ್ಲಿನ ತಮಿರಬರ್ನಿ ನದಿಗೆ ಮಹಿಳಾ ಹಿರಿಯ ನಾಗರಿಕರು ಈ ರೀತಿಯಲ್ಲಿ ಹಾರುವುದನ್ನು ನೋಡುವುದಕ್ಕೆ ಆಶ್ಚರ್ಯವಾಗುತ್ತದೆ. ಇದು ಅವರ ದೈನಂದಿನ ಬದುಕಿನ ಭಾಗವಂತೆ” ಎಂದು ಬರೆದುಕೊಂಡಿದ್ದಾರೆ.
ಸುಪ್ರಿಯಾ ಅವರು ಫೆ.6ರಂದು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಈಗಾಗಲೇ ಸಾವಿರಾರು ಜನರಿಂದ ವೀಕ್ಷಿಸಲ್ಪಟ್ಟಿದೆ. ಅನೇಕರು ವಿಡಿಯೊಗೆ ಮೆಚ್ಚಿ ಲೈಕ್ ಒತ್ತಿದ್ದು, ಶೇರ್ ಕೂಡ ಮಾಡಿಕೊಂಡಿದ್ದಾರೆ. “ವಯಸ್ಸು ಕೇವಲ ಸಂಖ್ಯೆ ಮಾತ್ರ. ಎಲ್ಲರಿಂದಲೂ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ” ಎಂದು ನೆಟ್ಟಿಗರು ಕಾಮೆಂಟ್‌ಗಳನ್ನೂ ಮಾಡಲಾರಂಭಿಸಿದ್ದಾರೆ. “ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು” ಎನ್ನುತ್ತಿದ್ದಾರೆ ಅನೇಕರು.