ಶಿಮ್ಲಾ: ಬಾಲಿವುಡ್ ನಟ ಸೋನು ಸೂದ್ ಅವರು ತೆರೆ ಮೇಲೆ ವಿಲನ್ ಆಗಿ ಕಾಣಿಸಿಕೊಂಡವರು. ಆದರೆ ತೆರೆಯ ಹಿಂದೆ ಅವರು ಒಬ್ಬ ಮಹಾ ನಾಯಕ. ಕೊರೊನಾ ಸಮಯದಲ್ಲಂತೂ ಅವರು ಮಾಡಿದ ಸಹಾಯವನ್ನು ಇಂದಿಗೂ ಅನೇಕರು ನೆನಪಿಸಿಕೊಳ್ಳುತ್ತಾರೆ. ಈ ರೀತಿ ಸಮಾಜಮುಖಿ ಕೆಲಸಗಳ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿರುವ ಸೋನು ಅವರು ಇತ್ತೀಚೆಗೆ ಹಿಮಾಚಲ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ರಸ್ತೆ ಬದಿ ಸ್ಟ್ರಾಬೆರಿ ಮಾರಾಟ ಮಾಡುತ್ತಿದ್ದ ಯುವಕನೊಂದಿಗೆ ಮಾತಿಗೆ ನಿಂತಿದ್ದಾರೆ. ಆ ವಿಡಿಯೊ ವೈರಲ್(Viral Video) ಆಗಿದೆ.
ಯುವಕನ ಬಳಿ ಹೋಗುವ ಸೋನು ಸೂದ್ ಅವನ, ಹೆಸರು, ಊರನ್ನೆಲ್ಲ ಕೇಳಿ ತಿಳಿದುಕೊಳ್ಳುತ್ತಾರೆ. ಯುವಕ ತಾನು ಬಿಹಾರದ ಗುನಾ ಜಿಲ್ಲೆಯವನೆಂದು, ತನ್ನ ಹೆಸರು ಸುಶೀಲ್ ಕುಮಾರ್ ಎಂದು ಹೇಳಿಕೊಳ್ಳುತ್ತಾನೆ. ಹಾಗೆಯೇ ತನಗೆ 18 ವರ್ಷ ವಯಸ್ಸು ಎಂದೂ ತಿಳಿಸುತ್ತಾನೆ. ಅಲ್ಲಿಂದ ಇಲ್ಲಿಗೆ ಏಕೆ ಬಂದೆ ಎಂದು ಸೋನು ಪ್ರಶ್ನಿಸಿದಾಗ ಕೆಲಸ ಹುಡುಕಿಕೊಂಡು ಬಂದಿದ್ದಾಗಿ ಯುವಕ ಹೇಳುತ್ತಾನೆ. ಸಾಕಷ್ಟು ಸಮಯ ಅವರಿಬ್ಬರ ನಡುವೆ ಇದೇ ರೀತಿ ಮಾತುಕತೆ ನಡೆಯುತ್ತದೆ.
ಇದನ್ನೂ ಓದಿ: Viral News: ಹಾಟ್ ಫೋಟೊ ಹಂಚಿಕೊಂಡ ಹಾರ್ದಿಕ್ ಪಾಂಡ್ಯ ದಂಪತಿ
ಕೊನೆಯಲ್ಲಿ ಸೋನು ಸೂದ್ ಅವರು ಯುವಕನ ಬಳಿ ಇದ್ದ ಅಷ್ಟೂ ಸ್ಟ್ರಾಬೆರಿ ಬಾಕ್ಸ್‌ಗಳನ್ನು ಕೊಂಡುಕೊಳ್ಳುತ್ತಾರೆ. ಈ ವಿಡಿಯೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬುಧವಾರ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವಿಡಿಯೊಗೆ 16 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ ಕೂಡ.
ವಿಡಿಯೊಗೆ ಮೆಚ್ಚುಗೆಯ ಮಹಾಪೂರವೇ ಕಾಮೆಂಟ್‌ಗಳ ಮೂಲಕ ಹರಿದುಬಂದಿದೆ. ಸಾವಿರಾರು ಮಂದಿ ಸೋನು ಅವರಿಗೆ ಧನ್ಯವಾದ ತಿಳಿಸಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಇಷ್ಟೊಂದು ಸೆಲೆಬ್ರಿಟಿಗಳು ಇದ್ದಾರೆ. ಆದರೆ ಕಷ್ಟಕ್ಕೆ ಸ್ಪಂದಿಸುವವರು ನೀವೊಬ್ಬರು ಮಾತ್ರವೇ”, “ನೀವು ನಿಜ ಜೀವನದ ನಾಯಕ”, “ನಿಮ್ಮಿಂದ ಅದೆಷ್ಟೋ ಮಂದಿ ಸಹಾಯ ಪಡೆದುಕೊಂಡಿದ್ದಾರೆ. ಬದುಕಿದರೆ ನಿಮ್ಮಂತೆ ಬದುಕಬೇಕು” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.