Site icon Vistara News

Viral Video : ಕಾಫಿಗೂ ಲಿಂಗ ಬದಲಾವಣೆಗೂ ಏನು ಸಂಬಂಧ? ಸ್ಟಾರ್‌ಬಕ್ಸ್‌ ಜಾಹೀರಾತು ವಿವಾದ

#image_title

ಬೆಂಗಳೂರು: ಯಾವುದೇ ಕಂಪನಿ, ಸಾಮಗ್ರಿ ಜನರಿಗೆ ಹತ್ತಿರವಾಗಬೇಕೆಂದರೆ ಜಾಹೀರಾತು ಕೂಡ ಅತಿಮುಖ್ಯವಾಗುತ್ತದೆ. ಜಾಹೀರಾತು ಹೇಗಿರಬೇಕು ಎನ್ನುವುದನ್ನೇ ತಲೆಕೆಡಿಸಿಕೊಂಡು ಸಿದ್ಧ ಮಾಡುವವರಿರುತ್ತಾರೆ. ಅದೇ ರೀತಿಯಲ್ಲಿ ಪ್ರಸಿದ್ಧ ಸ್ಟಾರ್‌ಬಕ್ಸ್‌ ಕೂಡ ಇದೀಗ ಹೊಸದೊಂದು ಜಾಹೀರಾತನ್ನು ಬಿಡುಗಡೆ ಮಾಡಿದೆ. ಆದರೆ ಅದರ ಜಾಹೀರಾತಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅಪ್ಪ ಅಮ್ಮ ಇಬ್ಬರೂ ಸ್ಟಾರ್‌ಬಕ್ಸ್‌ನಲ್ಲಿ ಕುಳಿತಿರುತ್ತಾರೆ. ಅವರಿಬ್ಬರು ತಮ್ಮ ಮಗ ಅರ್ಪಿತ್‌ಗಾಗಿ ಕಾಯುತ್ತಿರುತ್ತಾರೆ. ಆದರೆ ಅರ್ಪಿತ್‌ ಲಿಂಗ ಬದಲಾವಣೆ ಮಾಡಿಕೊಂಡು ಅರ್ಪಿತಾ ಎಂದು ಮರುನಾಮಕರಣ ಮಾಡಿಕೊಂಡಿರುತ್ತಾರೆ. ಈ ವಿಚಾರದಲ್ಲಿ ಸ್ಟಾರ್‌ಬಕ್ಸ್‌ನಲ್ಲಿ ಪತಿಯ ಜತೆ ಮಾತನಾಡುವ ಪತ್ನಿ, “ಈ ಬಾರಿ ಅವನ ಬಗ್ಗೆ ಕೋಪ ಮಾಡಿಕೊಳ್ಳಬೇಡಿ” ಎಂದು ಕೇಳಿಕೊಳ್ಳುತ್ತಾಳೆ.

ಇದನ್ನೂ ಓದಿ: Viral Video : ಇದು ಅಂತಿಂಥ ಗೌನ್‌ ಅಲ್ಲ, ಗಿನ್ನಿಸ್‌ ದಾಖಲೆಯ ಈ ಗೌನ್‌ನ ವಿಶೇಷತೆ ಇಲ್ಲಿದೆ ನೋಡಿ
ಅಷ್ಟರಲ್ಲಿ ಅರ್ಪಿತಾ ಡ್ರೆಸ್‌ ತೊಟ್ಟುಕೊಂಡು ಉದ್ದ ಕೂದಲಿನೊಂದಿಗೆ ಸ್ಟಾರ್‌ಬಕ್ಸ್‌ನೊಳಗೆ ಬಂದು ತಾಯಿಯನ್ನು ಅಪ್ಪಿಕೊಳ್ಳುತ್ತಾಳೆ. ತಂದೆಯನ್ನೂ ಪ್ರೀತಿಯಿಂದ ಕಂಡು ಕುಳಿತುಕೊಳ್ಳುತ್ತಾಳೆ. ಹಾಗೆಯೇ “ಇಷ್ಟು ವರ್ಷಗಳ ನಂತರ ನನ್ನನ್ನು ಭೇಟಿ ಮಾಡಿದ್ದಕ್ಕೆ ಥ್ಯಾಂಕ್ಯೂ ಅಪ್ಪ. ಇಂದಿಗೂ ನೀವೇ ನನ್ನ ಪ್ರಪಂಚ” ಎಂದು ಹೇಳುತ್ತಾಳೆ. ಆಗ ಅಲ್ಲಿಂದ ಎದ್ದೇಳುವ ತಂದೆ ಕಾಫಿ ಬೇಕಾ ಎಂದು ಕೇಳುತ್ತಾನೆ. ಅದಕ್ಕೆ ಅರ್ಪಿತಾ ಹೌದೆಂದು ತಲೆ ಆಡಿಸುತ್ತಾಳೆ.

ತಂದೆ ಅಲ್ಲಿಂದ ಬಿಲ್ಲಿಂಗ್‌ ಕೌಂಟರ್‌ ಬಳಿ ಹೋಗಿ ಕಾಫಿ ಆರ್ಡರ್‌ ಮಾಡಿ ಬಂದು ಕೂರುತ್ತಾನೆ. ಕಾಫಿ ಸಿದ್ಧವಾದ ತಕ್ಷಣ ಸಿಬ್ಬಂದಿ “ಅರ್ಪಿತಾ ಅವರಿಗೆ ಮೂರು ಕೋಲ್ಡ್‌ ಕಾಫಿ” ಎಂದು ಕೂಗುತ್ತಾರೆ. ಅದನ್ನು ಕೇಳಿಸಿಕೊಂಡ ಅರ್ಪಿತಾ ತನ್ನ ತಂದೆಯ ಕಡೆ ತಿರುಗಿ ನೋಡುತ್ತಾಳೆ. ಅರ್ಪಿತ್‌ ಆಗಿ ತನ್ನನ್ನು ನೋಡಿದ್ದ ತಂದೆ ಇದೀಗ ಅರ್ಪಿತಾ ಆಗಿಯೂ ಒಪ್ಪಿಕೊಂಡದ್ದನ್ನು ಕಂಡು ಆಕೆ ಸಂಭ್ರಮಿಸುತ್ತಾಳೆ.

ಈ ದೃಶ್ಯವಿರುವ ಜಾಹೀರಾತನ್ನು ಹಂಚಿಕೊಂಡಿರುವ ಸ್ಟಾರ್‌ಬಕ್ಸ್‌ ಸಂಸ್ಥೆ, “ಹೆಸರೇ ನೀವು ಯಾರೆಂದು ಹೇಳುತ್ತದೆ. ನಾವು ಎಲ್ಲರನ್ನೂ ಸರಿ ಸಮಾನವಾಗಿ ಕಾಣುತ್ತೇವೆ” ಎಂದು ಹೇಳಿಕೊಂಡಿದೆ.

ಇದನ್ನೂ ಓದಿ: Viral Video : ಮದುವೆ ಮನೆಯಲ್ಲಿ ಕುಣಿಯುತ್ತಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ಆದರೆ ಈ ಜಾಹೀರಾತಿನ ಬಗ್ಗೆ ಹಲವಾರು ರೀತಿಯಲ್ಲಿ ಚರ್ಚೆ ಆರಂಭವಾಗಿದೆ. ಒಳ್ಳೆಯ ಸಾರಾಂಶವಿದೆ ಎಂದು ಕೆಲವರು ಜಾಹೀರಾತನ್ನು ಪ್ರಶಂಶಿಸಿದ್ದಾರೆ. ಆದರೆ ಕಾಫಿಗೂ ಲಿಂಗ ಬದಲಾವಣೆಗೂ ಇರುವ ಸಂಬಂಧವೇನು ಎಂದು ಅನೇಕರು ಪ್ರಶ್ನಿಸಿದ್ದಾರೆ. ಕಾಫಿ ಸಂಸ್ಥೆಯಾದ ಮೇಲೆ ಕಾಫಿಗೆ ಸಂಬಂಧಪಟ್ಟಂತೆಯೇ ಜಾಹೀರಾತು ಮಾಡಬಹುದಾಗಿತ್ತು. ಅದನ್ನು ಬಿಟ್ಟು ಇಂತಹ ವಿಚಾರಕ್ಕೆ ಕೈ ಹಾಕಿದ್ದು ಏಕೆ ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

Exit mobile version